ಶಿವಲೀಲಾ ಕುಲಕರ್ಣಿ ವಿರುದ್ಧ ಬಿಜೆಪಿ ಪ್ರತಿಭಟನೆ

| Published : Mar 11 2025, 12:45 AM IST

ಸಾರಾಂಶ

ಶಿವಲೀಲಾ ಕುಲಕರ್ಣಿ ನಡೆ ಖಂಡಿಸಿ ಬಿಜೆಪಿ ಗ್ರಾಮೀಣ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಸೋಮವಾರ ಜಿಲ್ಲಾ ಪಂಚಾಯ್ತಿ ಎದುರು ಪ್ರತಿಭಟನೆ ನಡೆಯಿತು.

ಧಾರವಾಡ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಡಿ ಮಂಜೂರಾದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಅನಧಿಕೃತವಾಗಿ ಚಾಲನೆ ನೀಡುತ್ತಿದ್ದಾರೆ. ಅವರ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ಕೈಗೊಳ್ಳುವಂತೆ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಆಗ್ರಹಿಸಿದರು.

ಶಿವಲೀಲಾ ಕುಲಕರ್ಣಿ ನಡೆ ಖಂಡಿಸಿ ಬಿಜೆಪಿ ಗ್ರಾಮೀಣ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಸೋಮವಾರ ಜಿಲ್ಲಾ ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿ ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣ ಮಂಡಲ ಅಧ್ಯಕ್ಷ ಶಂಕರ ಕೋಮಾರ ದೇಸಾಯಿ, ಸಂವಿಧಾನಾತ್ಮಕ ಹುದ್ದೆ, ಅಧಿಕಾರವಿಲ್ಲದೆ ಕ್ಷೇತ್ರದಲ್ಲಿ ತಾವೇ ಶಾಸಕರಂತೆ ವರ್ತಿಸುತ್ತಿದ್ದಾರೆ. ತಮ್ಮ ಪತಿಗೆ ಜಿಲ್ಲಾ ಪ್ರವೇಶ ಇಲ್ಲದಿರುವುದನ್ನೇ ಅವಕಾಶ ಮಾಡಿಕೊಂಡಿದ್ದಾರೆ. ಗರಗ ಗ್ರಾಮದಲ್ಲಿ ಶೇ. 90ರಷ್ಟು ಕೇಂದ್ರ ಸರ್ಕಾರದ ಅನುದಾನದಲ್ಲಿ ಅಂದಾಜು ₹166.90 ಕೋಟಿ ವೆಚ್ಚದಲ್ಲಿ ಕೈಗೊಂಡ ಬೂದು ನೀರು ನಿರ್ವಹಣೆ ಕಾಮಗಾರಿಗೆ ಕೇಂದ್ರ ಸಚಿವರ ಅನುಮತಿ ಪಡೆಯದೆ, ತಾವೇ ಚಾಲನೆ ನೀಡುವ ಮೂಲಕ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಸಿಇಒ ಈ ಬಗ್ಗೆ ಪರಿಶೀಲನೆ ನಡೆಸಬೇಕು. ಇನ್ಮುಂದೆ ಯಾವುದೇ ಕಾರಣಕ್ಕೂ ಶಿವಲೀಲಾ ಕುಲಕರ್ಣಿ ಅವರಿಗೆ ಸರ್ಕಾರದ ಕಾರ್ಯಕ್ರಮ ಹಾಗೂ ಕಾಮಗಾರಿಯ ಚಾಲನೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ

ಮಹಿಳಾ ಮೋರ್ಚಾ ನಗರ ಅಧ್ಯಕ್ಷರಾದ ರಾಜೇಶ್ವರಿ ಅಳಗವಾಡಿ, ಗ್ರಾಮೀಣ ಅಧ್ಯಕ್ಷ ಲಕ್ಷ್ಮೀ ಕಾಶಿಗಾರ್, ನಿತೀನ ಇಂಡಿ, ಪಾಲಿಕೆ ಸದಸ್ಯರಾದ ಶಂಕರ ಶೆಳಕೆ, ಅನಿತಾ ಚಳಗೇರಿ, ನಿತೀನ ಇಂಡಿ, ಯಲ್ಲಪ್ಪ ಜಾನಕೂನವರ, ವಿಠ್ಠಲ ಪೂಜಾರ, ಮಂಜುನಾಥ ನಡಟ್ಟಿ, ಮಹೇಶ ಯಲಿಗಾರ, ಲಕ್ಷ್ಮೀ ಶಿಂಧೆ, ಶಶಿಕಲಾ ಮಸೂತಿ, ರುದ್ರಪ್ಪ ಅರಿವಾಳ, ಮೃತ್ಯುಂಜಯ ಹಿರೇಮಠ, ಅಜ್ಜಪ್ಪ ಜಂಗೂಳಿ, ಮಹಾದೇವಪ್ಪ ದಂಡಿನ ಮತ್ತಿತರರು ಇದ್ದರು.ಬಿಜೆಪಿ ನಡೆ ಸಹಿಸುವದಿಲ್ಲ: ಏಗನಗೌಡರ

ಶಾಸಕ ವಿನಯ ಕುಲಕರ್ಣಿಯವರಿಗೆ ಕಾನೂನು ತೊಡಕಿನಿಂದ ಅವರ ಅನುಪಸ್ಥಿತಿಯಲ್ಲಿ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷರೂ ಆಗಿರುವ ಶಿವಲೀಲಾ ಕುಲಕರ್ಣಿಯವರು ಕ್ಷೇತ್ರದ ಕಾರ್ಯಕರ್ತರು, ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಶಾಸಕರ ಗಮನಕ್ಕೆ ತಂದು ಪರಿಹರಿಸುತ್ತಿದ್ದಾರೆ. ಆದರೆ, ಅಧಿಕಾರ ದುರುಪಯೋಗ, ದಬ್ಬಾಳಿಕೆ ಹಾಗೂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಬಿಜೆಪಿಯ ಆರೋಪ ಶುದ್ಧ ಸುಳ್ಳು ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅರವಿಂದ ಏಗನಗೌಡರ ಪತ್ರಿಕಾ ಪ್ರಕಟಣೆ ಮೂಲಕ ಹೇಳಿದ್ದಾರೆ.

ತಾಪಂ, ಗ್ರಾಪಂಗಳಿಗೆ ಅನುದಾನ ಕಡಿಮೆ ಇರುವ ಸಂಧರ್ಭದಲ್ಲಿ 2023-24 ಬೂದು ನೀರು ನಿರ್ವಹಣೆ ಕಾಮಗಾರಿಯನ್ನು ಸ್ವಚ್ ಭಾರತ್ (ಗ್ರಾ)ಯೋಜನೆಯಡಿಯಲ್ಲಿ ಶಾಸಕ ವಿನಯ ಕುಲಕರ್ಣಿಯವರ ಪ್ರಯತ್ನದಿಂದ ಹಾಗೂ ಜಿಲ್ಲೆಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳೊಂದಿಗೆ ಚರ್ಚಿಸಿ ಜನರ ಹಿತದೃಷ್ಟಿಯಿಂದ ಕಾರ್ಯ ಆರಂಭಗೊಂಡಿದೆ. ಇದೇ ಯೋಜನೆಯ ಅಡಿಯಲ್ಲಿ ಇನ್ನೂ ಆರು ಗ್ರಾಮಗಳಿಗೆ ಈ ಯೋಜನೆಯ ಲಾಭ ಸಿಗಲಿದೆ. ಯಾವುದೇ ಕಾಮಗಾರಿಗಳು ಚಾಲನೆಗೊಳ್ಳುವ ಸಮಯದಲ್ಲಿ ಅಧಿಕಾರಿ ವರ್ಗ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮ ಪಂಚಾಯತ್ ಸದಸ್ಯರು, ತಾಪಂ, ಜಿಪಂ ಸದಸ್ಯರು ಹಾಗೂ ಗುತ್ತಿಗೆದಾರರು ಭಾಗವಹಿಸುವುದು ವಾಡಿಕೆ. ಹಾಗೆಯೇ, ಶಿವಲೀಲಾ ಅವರೂ ಭಾಗವಹಿಸಿದ್ದು, ಇಲ್ಲಿ ಯಾವುದೇ ಪ್ರೋಟೋಕಾಲ್‌ ಅನ್ವಯಿಸುವುದಿಲ್ಲ ಎಂಬುದನ್ನು ಬಿಜೆಪಿ ಮೊದಲು ಅರ್ಥಮಾಡಿಕೊಳ್ಳಲಿ ಎಂದು ಬಿಜೆಪಿ ಪ್ರತಿಭಟನೆಗೆ ಏಗನಗೌಡರ ಟಾಂಗ್‌ ನೀಡಿದ್ದಾರೆ.