ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ

| Published : Jan 04 2024, 01:45 AM IST

ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ಬಳ್ಳಾರಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬಳ್ಳಾರಿ: ಹುಬ್ಬಳ್ಳಿಯ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ನಗರದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿಯಾಗಿದೆ. ರಾಜ್ಯದಾದ್ಯಂತ ರಾಮಭಕ್ತರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಕಾಂಗ್ರೆಸ್ ಸರ್ಕಾರ ಇದಕ್ಕೆ ಕುಮ್ಮಕ್ಕು ನೀಡುತ್ತಿದೆ. ಹುಬ್ಬಳ್ಳಿಯಲ್ಲಿ 31 ವರ್ಷದ ಹಿಂದೆ ನಡೆದ ಪ್ರಕರಣದಲ್ಲಿ ಶ್ರೀಕಾಂತ ಪೂಜಾರಿ ಅವರನ್ನು ಬಂಧಿಸಿರುವುದನ್ನು ನೋಡಿದರೆ ಸರ್ಕಾರದ ಧೋರಣೆ ಎಂತಹದ್ದು ಎಂಬುದು ಗೊತ್ತಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಜ. 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯಾಗುತ್ತಿದ್ದು, ದೇಶದ ಕೋಟ್ಯಂತರ ಜನರು ಸಂಭ್ರಮದಲ್ಲಿದ್ದಾರೆ. ಇದೇ ವೇಳೆ ಕಾಂಗ್ರೆಸ್ ರಾಮಭಕ್ತರು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸುವ ಮೂಲಕ ತಮ್ಮದು ಹಿಂದೂ ವಿರೋಧಿ ಸರ್ಕಾರ ಎಂದು ಸಾಬೀತುಪಡಿಸಿದೆ. ಸರ್ಕಾರದ ಬೆದರಿಕೆಗಳಿಗೆ ಹಿಂದೂ ಕಾರ್ಯಕರ್ತರು ಹೆದರುವುದಿಲ್ಲ. ಕಾಂಗ್ರೆಸ್‌ನ ನಡೆಯನ್ನು ಇಡೀ ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸೂಕ್ತ ಪಾಠವನ್ನು ಕಲಿಸುತ್ತಾರೆ ಎಂದರಲ್ಲದೆ, ಕೂಡಲೇ ಶ್ರೀಕಾಂತ ಪೂಜಾರಿ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು. ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಜರುಗಿದ ಪ್ರತಿಭಟನೆಯ ನೇತೃತ್ವದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಮುರಹರಗೌಡ ಗೋನಾಳ್ ವಹಿಸಿದ್ದರು. ಪಕ್ಷದ ಹಿರಿಯ ಮುಖಂಡ ಡಾ. ಮಹಿಪಾಲ್, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ ಮೋತ್ಕರ್, ಎಸ್. ಮಲ್ಲನಗೌಡ, ಅನಿಲ್ ನಾಯ್ಡು ಮೋಕಾ, ಗಣಪಾಲ್ ಐನಾಥ ರೆಡ್ಡಿ, ರಾಜೇಶ್, ವೇಮಣ್ಣ ಸೇರಿದಂತೆ ಪಕ್ಷದ ಜಿಲ್ಲಾ ಸಮಿತಿ ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.