ಪರಭಾಷಾ ವ್ಯಾಮೋಹದಿಂದ ಮಾತೃಭಾಷೆ ಕಡೆಗಣನೆ ಬೇಡ

| Published : Jan 04 2024, 01:45 AM IST

ಪರಭಾಷಾ ವ್ಯಾಮೋಹದಿಂದ ಮಾತೃಭಾಷೆ ಕಡೆಗಣನೆ ಬೇಡ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ರಾಜ್ಯದ ಅಭಿವೃದ್ಧಿ ಅಲ್ಲಿಯ ಮಾತೃಭಾಷೆ ಅವಲಂಬಿಸಿದೆ. ಅಲ್ಲಿಯ ಆಡಳಿತ ಮಾತೃಭಾಷೆಯಲ್ಲೇ ಇದ್ದರೆ ಸಾಕ್ಷರರಿಂದ ಹಿಡಿದು, ಅವಿದ್ಯಾವಂತರಿಗೂ ವ್ಯವಹರಿಸಲು ಸುಲಭವೂ, ಸಹ್ಯವೂ ಆಗಿರುತ್ತದೆ. ಹೀಗಿರುವಾಗ ಪರಭಾಷಾ ವ್ಯಾಮೋಹದಿಂದ ಮಾತೃಭಾಷೆಯನ್ನು ಕಡೆಗಣಿಸುವ ಮನೋಭಾವವನ್ನು ನಾವುಗಳು ತೊರೆಯಬೇಕಿದೆ ಎಂದು ತೀರ್ಥಹಳ್ಳಿ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಸಾನಿಕಾ ಎಂ. ಹೆಗಡೆ ತೀರ್ಥಹಳ್ಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ

ಪರಭಾಷಾ ವ್ಯಾಮೋಹದಿಂದ ಮಾತೃಭಾಷೆಯನ್ನು ಕಡೆಗಣಿಸುವ ಮನೋಭಾವವನ್ನು ನಾವುಗಳು ತೊರೆಯಬೇಕಿದೆ. ಕನ್ನಡ ಶ್ರೀಮಂತ ಭಾಷೆ ಆಗಿರುವ ಕಾರಣದಿಂದಲೇ ನಮಗೆ ಎಂಟು ಜ್ಞಾನಪೀಠ ಪುರಸ್ಕಾರಗಳು ದೊರೆತಿರುವುದು ಹೆಮ್ಮೆಯ ಸಂಗತಿ ಎಂದು ತೀರ್ಥಹಳ್ಳಿ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಸಾನಿಕಾ ಎಂ. ಹೆಗಡೆ ಹೇಳಿದರು. ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಬುಧವಾರ ನಡೆದ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು, ಜಗತ್ತಿನ ಯಾವುದೇ ಭಾಷೆಯ ಸಾಹಿತ್ಯಕ್ಕೆ ಸರಿಸಾಟಿಯಾಗಿ ನಿಲ್ಲುವಷ್ಟು ಕನ್ನಡ ಭಾಷೆ ಸಮರ್ಥವಾಗಿದೆ ಎಂದರು.

ಕನ್ನಡಕ್ಕೆ 2 ಜ್ಞಾನಪೀಠ ಪ್ರಶಸ್ತಿಗಳ ತಂದುಕೊಟ್ಟಿರುವ ಕುವೆಂಪು ಯು.ಆರ್‌. ಅನಂತಮೂರ್ತಿ ಅವರಂಥ ಮಹಾನ್ ಸಾಹಿತಿಗಳು ಜನಿಸಿದ ಈ ನೆಲದಲ್ಲಿ ಬದುಕುತ್ತಿರುವ ನಮಗೆ ಸಾಹಿತ್ಯಾಭಿಮಾನ ಹೊಂದಿರುವ ಸಮಾಜ ಮತ್ತು ವಾತಾವರಣ ಎಲ್ಲಿ ದೊರೆಯಬಹುದು ಎಂಬ ಆತಂಕವೂ ನಮ್ಮನ್ನು ಕಾಡುತ್ತಿದೆ ಎಂದು ಹೇಳಿದರು.

ಸಮ್ಮೇಳನ ಉದ್ಘಾಟಿಸಿದ ಡಿ.ರಜತ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡವೇ ಯಜಮಾನಿಯಾಗಿದ್ದು, ಇಂಗ್ಲೀಷ್ ಸೇರಿದಂತೆ ಉಳಿದ ಎಲ್ಲ ಭಾಷೆಗಳು ಒಕ್ಕಲುಗಳಂತೆ. ಕನ್ನಡವನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆಯೂ ನಮ್ಮೆಲ್ಲರದಾಗಿದೆ ಎಂದರು.

ಅತಿಥಿ, ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದ ಮಹಾನ್ ವ್ಯಕ್ತಿಗಳು ಜನಿಸಿದ ಈ ಮಣ್ಣಿನಲ್ಲಿ ವಿಶೇಷ ಶಕ್ತಿ ಇದೆ. ಅಂಕ ಗಳಿಕೆಯ ಗೀಳಿನಿಂದ ಉರು ಹೊಡೆದು ನೂರು ಅಂಕ ಗಳಿಸುವ ಒಂದೇ ಉದ್ದೇಶಕ್ಕಿಂತ ಈ ಎಳೆಯ ಪ್ರತಿಭೆಗಳಲ್ಲಿರುವ ಸೃಜನಶೀಲತೆಯನ್ನು ಉದ್ದೀಪನಗೊಳಿಸುವ ನಿಟ್ಟಿನಲ್ಲಿ ಇಂತಹಾ ಸಮ್ಮೇಳನಗಳು ಪೂರಕವಾಗಿದೆ ಎಂದರು.

ಪಪಂ ಅಧ್ಯಕ್ಷೆ ಗೀತಾ ರಮೇಶ್, ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಚಿರಾಗ್ ಪಟವರ್ಧನ್, ಸಾಹಿತಿ ಎಂ.ನವೀನ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಗಣಪತಿ, ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ತಾಪಂ ಇಒ ಶೈಲಾ ಎಂ., ಬಿಇಒ ವೈ.ಗಣೇಶ್, ಸರ್ಕಾರಿ ಬಾಲಿಕಾ ಪ್ರೌಢಶಾಲೆ ಉಪಪ್ರಾಚಾರ್ಯ ಪಿ.ಎಚ್. ನಾಗಪ್ಪ, ತಾಲೂಕು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ರೇಣುಕಾ ಎಂ. ಹೆಗಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಬಲ ಹೆಗಡೆ ಇದ್ದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದ ಕುಶಾವತಿಯಿಂದ ನಡೆದ ಭುವನೇಶ್ವರಿದೇವಿ ಮೆರವಣಿಗೆಯಲ್ಲಿ ಕನ್ನಡನಾಡಿನ ವೀರರು ಇತಿಹಾಸ ಪುರುಷರ ಛದ್ಮವೇಶಗಳು ಆಕರ್ಷಣೀಯವಾಗಿದ್ದು ಗಮನ ಸೆಳೆಯುವಂತಿದ್ದವು. ಸಮ್ಮೆಳನದಲ್ಲಿ ಮಕ್ಕಳಿಂದ ಕಾವ್ಯ ಕಲರವ, ಕಥಾಗೋಷ್ಠಿ ಮತ್ತು ಪ್ರಬಂಧ ಗೋಷ್ಠಿ ಹೀಗೆ ಮೂರು ಗೋಷ್ಠಿಗಳು ನಡೆದವು.

- - - ಟಾಪ್‌ ಬಾಕ್ಸ್ ವಿದ್ಯಾರ್ಥಿಗಳೇ ಬಳಸುವ ಶೌಚಾಲಯಗಳನ್ನು ವಿದ್ಯಾರ್ಥಿಗಳು ಸ್ವಚ್ಛಗೊಳಿಸುವುದನ್ನು ಭಾರಿ ದೊಡ್ಡ ಅಪರಾಧ ಎಂಬಂತೆ ದೊಡ್ಡದಾಗಿ ಬಿಂಬಿಸುವ ಅಗತ್ಯ ಕಾಣುವುದಿಲ್ಲಾ. ಶಾಲಾ ಶೌಚಾಲಯಗಳ ಸ್ವಚ್ಚತೆಗೆ ಪ್ರತ್ಯೇಕ ಸಿಬ್ಬಂದಿಯಿಲ್ಲದ ಕಾರಣ ಈ ವಿಚಾರದಲ್ಲಿ ನಡೆದಿರುವ ಬೆಳವಣಿಗೆ ಕುರಿತಂತೆ ಸರಿ- ತಪ್ಪುಗಳ ಬಗ್ಗೆ ಪೋಷಕರು ಮತ್ತು ಸಮಾಜ ಚಿಂತನೆ ನಡೆಸುವ ಅಗತ್ಯವಿದೆ. ಶೌಚಾಲಯಗಳ ಸ್ವಚ್ಛತೆಗೆ ಅಗತ್ಯ ಅನುದಾನ ಒದಗಿಸುವಲ್ಲಿ ಸರ್ಕಾರ ಮಾತ್ರವಲ್ಲದೇ, ಪೋಷಕರೂ ಆ ಕುರಿತು ನೆರವಾಗುವ ಅಗತ್ಯವಿದೆ

- ಆರಗ ಜ್ಞಾನೇಂದ್ರ, ಶಾಸಕ

- - - -03ಟಿಟಿಎಚ್01:

ತೀರ್ಥಹಳ್ಳಿ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಸಮ್ಮೇಳನ ಸರ್ವಾಧ್ಯಕ್ಷೆ ಸಾನಿಕಾ ಎಂ. ಹೆಗಡೆ ಉದ್ಘಾಟಿಸಿದರು.