ಮಂಗಳೂರಲ್ಲಿ ಸಿರಿಧಾನ್ಯ ನಡಿಗೆ, ಸಿರಿಧಾನ್ಯ ಹಬ್ಬ

| Published : Jan 04 2024, 01:45 AM IST

ಸಾರಾಂಶ

ಮಂಗಳೂರಿನಲ್ಲಿ ಸಿರಿಧಾನ್ಯ ನಡಿಗೆ ಹಾಗೂ ಸಿರಿಧಾನ್ಯ ಹಬ್ಬಕ್ಕೆ ಜಿಪಂ ಸಿಇಒ, ಎಡಿಸಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ- 2023ರ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿರಿಧಾನ್ಯಗಳ ಮಹತ್ವದ ಕುರಿತು ಪ್ರಚಾರಕ್ಕಾಗಿ ಬುಧವಾರ ಬೆಳಗ್ಗೆ 7 ಗಂಟೆಗೆ ಸಿರಿಧಾನ್ಯ ನಡಿಗೆ ಕಾರ್ಯಕ್ರಮ ಪುರಭವನದಿಂದ ಮಂಗಳಾ ಕ್ರೀಡಾಂಗಣದವರೆಗೆ ನಡೆಯಿತು.

ದ.ಕ. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಮತ್ತು ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಚಾಲನೆ ನೀಡಿದರು.

ಸಿರಿಧಾನ್ಯ ನಡಿಗೆಯಲ್ಲಿ ಜಿಲ್ಲೆಯಾದ್ಯಂತ ಎಲ್ಲ ಕ್ಷೇತ್ರದಿಂದ ಅಂದಾಜು 500ಕ್ಕೂ ಅಧಿಕ ಜನ ಭಾಗವಹಿಸಿದ್ದು. ಮಂಗಳಾ ಕ್ರೀಡಾಂಗಣದಲ್ಲಿ ಸಿರಿಧಾನ್ಯಗಳ ಲಘು ಉಪಹಾರ ಮತ್ತು ಶಾರದಾ ಯೋಗ ಮತ್ತು ನ್ಯಾಚೋರಪತಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ತಲಪಾಡಿ ಸಂಸ್ಥೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು.

ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಸಿರಿಧಾನ್ಯ ಕುರಿತು ಸಿರಿಧಾನ್ಯ ಹಬ್ಬ ಕಾರ್ಯಕ್ರಮ ಏರ್ಪಡಿಸಿದ್ದು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್‌ ಉದ್ಘಾಟಿಸಿ, ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳದ ಕುರಿತು ಭಿತ್ತಿಪತ್ರ ಬಿಡುಗಡೆ ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ರಾಧಾಕೃಷ್ಣ ಅವರು ಸಿರಿಧಾನ್ಯಗಳ ಪರಿಚಯ ಹಾಗೂ ಮಹತ್ವವನ್ನು ತಿಳಿಸಿದರು. ಡಾ. ಫಜಲ್ ಸಿರಿಧಾನ್ಯಗಳಿಂದ ವಿವಿಧ ಆಹಾರ ಉತ್ಪನ್ನಗಳ ತಯಾರಿ ಮಾಡಲು ಇರುವ ಅವಕಾಶಗಳು, ಉತ್ಪನ್ನಗಳು, ಇದಕ್ಕೆ ಪೂರಕ ತಾಂತ್ರಿಕ ಸಂಸ್ಥೆಗಳು, ಸರ್ಕಾರದ ಸೌಲಭ್ಯಗಳ ಕುರಿತು ವಿವರವಾದ ಮಾಹಿತಿ ನೀಡಿದರು.

ಸಿರಿಧಾನ್ಯ ಹಬ್ಬದಲ್ಲಿ ನಿತ್ಯ ಸಿರಿಧಾನ್ಯ ಪ್ರೊಡಕ್ಟ್ಸ್‌ನಿಂದ ಸಿರಿಧಾನ್ಯ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಉಪ ಕೃಷಿ ನಿರ್ದೇಶಕ ಶಿವಶಂಕರ್ ಹೆಚ್. ದಾನೇಗೊಂಡರ್ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಎಚ್. ಪ್ರಸ್ತಾವಿಕ ಮಾತನಾಡಿದರು. ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್. ವಂದಿಸಿದರು.