ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ನಾಡಿಗೆ ಈಗ ಜನಪದ ವೈಭವ ತೀರ ಅವಶ್ಯವಾಗಿದ್ದು, ಭಕ್ತಿ ಕಲಾ ಪರಂಪರೆ ಉಳಿಸುವಲ್ಲಿ ಮಠ ಮಂದಿರಗಳ ಪಾತ್ರ ಬಹು ದೊಡ್ಡದಾಗಿದೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.ಇಲ್ಲಿನ ರಾಚೋಟೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಜನಪದ ಪರಿಷತ್ ಜಿಲ್ಲಾ ಘಟಕದ ಉದ್ಘಾಟನೆ, ಪದಗ್ರಹಣ, ಸನ್ಮಾನ ಹಾಗೂ ಜಾನಪದ ವೈಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮಠಗಳಿಗೂ ಜನಪದ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ಜನಪದ ಹಾಡುಗಳು ಆರೋಗ್ಯದ ಮೂಲ ಸೂತ್ರಗಳು. ಸರ್ವಜ್ಞ ಕನಕದಾಸರು ಸೇರಿದಂತೆ ಸಂತ ಮಹಾಂತರು ಜನಪದ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ, ಜನಪದ ಮೂಲೆಗುಂಪಾಗುವ ಕಾಲದಲ್ಲಿ ನಾವಿದ್ದೇವೆ. ಜನಪದ ವಿಶ್ವವಿದ್ಯಾಲಯ ವಿದ್ವಾಂಸರಿಗೆ ಸೀಮಿತವಾಗಿದೆ. ಕಲೆ ಪ್ರೋತ್ಸಾಹದಲ್ಲಿ ಅದರ ಕಾಳಜಿ ಇಲ್ಲ. ಕೃಷಿ ಸಂಸ್ಕೃತಿಯಿಂದ ಬಂದ ಜನಪದ, ಅದರಲ್ಲೂ ಮಹಿಳೆಯರಿಂದ ಹೆಚ್ಚು ಪ್ರಸ್ತುತವಾದ ಸಾಹಿತ್ಯವಾಗಿದೆ. ಜನಪದ ಕಲಾವಿದರಿಗೆ ಗೌರವ ಸಿಗಬೇಕು. ಮಕ್ಕಳಲ್ಲಿ ಈಗಲೇ ಜನಪದ ಸಂಸ್ಕೃತಿಯ ಅರಿವು ಮೂಡಿಸಿದರೆ ಜನಪದ ದೀರ್ಘ ಕಾಲಕ್ಕೆ ಉಳಿಯಬಲ್ಲದು ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜನಪದ ವಿದ್ವಾಂಸ ಡಾ. ಶಂಭು ಬಳಿಗಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಾಯಕ ಸಂಸ್ಕೃತಿಯಿಂದ ಬಂದ ಜನಪದ ಸಾಹಿತ್ಯ, ದುಡಿಮೆಯ ಜೊತೆ ಜೊತೆಗೆ ಸುಖ ದುಃಖ ನೋವು ನಲಿವು ಎಲ್ಲವನ್ನೂ ಹಾಡಿ ಹೇಳಿ ಸಮಾಧಾನ ಪಡೆದಿದೆ. ಬದುಕು ಕೂಡ ಒಂದು ಹಾಡೇ ಆಗಿದೆ. ನಮ್ಮದು ಹಂಚಿಕೊಂಡು, ಮನುಷ್ಯತ್ವದಿಂದ ಬದುಕುವ ಸಂಸ್ಕೃತಿ. ನಮ್ಮ ಸಂಬಂಧಗಳು ದುಡ್ಡಿನ ಮೂಲದಲ್ಲಿಲ್ಲಿ. ಅನ್ನದ ಋಣದಲ್ಲಿದೆ, ಪರಸ್ಪರ ಕ್ಷೇಮಕ್ಕೆ ಇಲ್ಲಿ ಮಹತ್ವವಿದೆ. ಈಗ ಮೌಲ್ಯಗಳು ಜಾಗೃತವಾಗಬೇಕಾದ ಕಾಲ ಎಂದರು.ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ ಕುಲಕರ್ಣಿ ಅವರಿಗೆ ಗೌರವ ಸನ್ಮಾನ ನೀಡಲಾಯಿತು. ಜಿಲ್ಲಾಧ್ಯಕ್ಷ ಗುರುಶಾಂತ ಎತ್ತಿಹಳ್ಳಿ ಅಧ್ಯಕ್ಷತೆ ವಹಿಸಿದ್ದರು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪೂರ ಆಶಯ ನುಡಿ ನುಡಿದರು. ರಾಚೋಟೇಶ್ವರ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಎಸ್.ವಿ. ಹಿರೇಮಠ, ಸಾಹಿತಿ ಲಿಂಗರಾಜ ಕಮ್ಮಾರ ಅತಿಥಿಗಳಾಗಿದ್ದರು.
ಸಿದ್ದುಮತಿ ನೆಲವಿಗಿ, ಫಕ್ಕೀರೇಶ ಬಿಶೆಟ್ಟಿ, ಪ್ರಭು ಗುರಪ್ಪನವರ, ಹನುಮಗೌಡ ಗಂಗನಗೌಡ್ರ, ಶೇಖಪ್ಪ ಬಿಳಕಿ, ಪ್ರಕಾಶ ಕೊರಮರ, ಮಹೇಶ್ವರಗೌಡ ಲಿಂಗದಹಳ್ಳಿ, ಲತಾ ಪಾಟೀಲ, ಹುನುಮಂತಪ್ಪ ಬಣಕಾರ, ಡಿಳ್ಳೆಪ್ಪ ಚಿನ್ನಿಕಟ್ಟಿ ಅವರಿಗೆ ಜಾನಪದ ವೈಭವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪರಿಮಳ ಜೈನ, ಪದಾಧಿಕಾರಿಗಳಾದ ಹರೀಶ ಕಲಾಲ, ರಾಘವೇಂದ್ರ ಕಬಾಡಿ, ಶಶಿಕಲಾ ಅಕ್ಕಿ, ಲಿಂಗರಾಜ ಕಮ್ಮಾರ, ಕರಸಪ್ಪ ಪೂಜಾರ, ಬಸವರಾಜ ಶಿಗ್ಗಾವಿ, ಚಂದ್ರಶೇಖರ ಕುಳೇನೂರ, ಶಿವಾನಂದ ಕ್ಯಾಲಕೊಂಡ ಅವರಿಗೆ ಪದಗ್ರಹಣ ಗೌರವ ನೀಡಲಾಯಿತು. ದಾನೇಶ್ವರಿ ಹಾಲಪ್ಪನವರ, ವೈಷ್ಣವಿ ದಿನ್ನಿಮನಿ ಪ್ರಾರ್ಥನೆ ಹಾಡಿದರು. ಚಂದ್ರಶೇಖರ ಕುಳೇನೂರ ಸ್ವಾಗತಿಸಿದರು. ರಾಘವೇಂದ್ರ ಕಬಾಡಿ ಕಾರ್ಯಕ್ರಮ ನಿರೂಪಿಸಿದರು. ಪರಿಮಳ ಜೈನ ವಂದಿಸಿದರು.