ಚಿಕ್ಕಮಗಳೂರುರಾಜ್ಯದ ಕಾಂಗ್ರೆಸ್ ಸರ್ಕಾರದ ರೈತವಿರೋಧಿ ನೀತಿ ಖಂಡಿಸಿ ಶುಕ್ರವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ತಾಲೂಕು ಕಚೇರಿಯಿಂದ ಆಜಾದ್‌ಪಾರ್ಕ್ ವೃತ್ತದವರೆಗೆ ಎತ್ತಿನಗಾಡಿ ಮುಖಾಂತರ ಮೆರವಣಿಗೆ ಜಾಥಾ ನಡೆಸಿ ರಾಜ್ಯಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಬೃಹತ್ ಪ್ರತಿಭಟನೆ ನಡೆಸಿದರು.
- ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಜ್ಯದ ಕಾಂಗ್ರೆಸ್ ಸರ್ಕಾರದ ರೈತವಿರೋಧಿ ನೀತಿ ಖಂಡಿಸಿ ಶುಕ್ರವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ತಾಲೂಕು ಕಚೇರಿಯಿಂದ ಆಜಾದ್‌ಪಾರ್ಕ್ ವೃತ್ತದವರೆಗೆ ಎತ್ತಿನಗಾಡಿ ಮುಖಾಂತರ ಮೆರವಣಿಗೆ ಜಾಥಾ ನಡೆಸಿ ರಾಜ್ಯಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಬೃಹತ್ ಪ್ರತಿಭಟನೆ ನಡೆಸಿದರು.ಪ್ರತಿಭಟನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ರಾಜ್ಯದಲ್ಲಿ ರೈತರು ಅತಿವೃಷ್ಟಿ, ಅನಾವೃಷ್ಟಿಯಿಂದ ತೀವ್ರತರವಾಗಿ ಬಳಲುತ್ತಿದ್ದಾರೆ. ಆದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಬಾಡೂಟ ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸದೇ ಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿದ್ದಾರೆ ಎಂದು ದೂರಿದರು.ರೈತರ ಬೆಳೆ ನಷ್ಟಕ್ಕಾಗಿ ಸೂಕ್ತ ಪರಿಹಾರ ಒದಗಿಸದೇ, ಇದ್ದು ಸತ್ತಂತಾದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅಗತ್ಯ ರಾಜ್ಯಕ್ಕಿಲ್ಲ. ಭೂಮಿಗೆ ತನ್ನ ರಕ್ತವನ್ನ ಬೆವರಾಗಿ ಸುರಿಸುತ್ತಿರುವ ಎಲ್ಲಾ ರೈತರ ಪರವಾಗಿ ರೈತಾಪಿ ವ ರ್ಗವು ನಿತ್ಯ ಹೋರಾಟ ನಡೆಸಿದರೆ ಮಾತ್ರ ರೈತರ ಬೇಡಿಕೆಗಳು ಈಡೇರಲಿದೆ ಎಂದು ಹೇಳಿದರು.ರೈತರ ಆತ್ಮಹತ್ಯೆಯಲ್ಲಿ ಇಡೀ ದೇಶದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿರುವುದು ಆತಂಕಕಾರಿ ವಿಷಯ, ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳು ಆತ್ಮಹತ್ಮೆಗೆ ಶರಣಾಗುತ್ತಿದ್ದಾರೆ. ಮಲೆನಾಡು ಭಾಗಕ್ಕೆ ಕಾಡುಪ್ರಾ ಣಿಗಳ ಹಾವಳಿ, ಅರಣ್ಯ ಇಲಾಖೆ ಒಕ್ಕಲೆ ಬ್ಬಿಸುವ ಕಾಟ ಹೆಚ್ಚಾಗಿ ಜನಸಾಮಾನ್ಯರು ಬದುಕಲಾರದ ಸ್ಥಿತಿಗೆ ತಂದೊಡ್ಡಿದೆ ಎಂದು ಆರೋಪಿಸಿದರು. ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರ ₹3550 ದರ ನಿಗಧಿಗೊಳಿಸಿದೆ. ನೆರೆ ರಾಜ್ಯ ಮಹಾರಾಷ್ಟ್ರದ ಮುಖ್ಯಮಂತ್ರಿ ಸಕ್ಕರೆ ಕಾರ್ಖಾನೆ ಮಾಲಿಕರು, ರೈತ ಸಂಘಟನೆ ಜೊತೆಗೂಡಿ ₹3400ಗೆ ಖರೀದಿಸಲು ಸೂಚನೆ ನೀಡಿ ಖರೀದಿಸುತ್ತಿದೆ. ಆದರೆ ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಕೇವಲ ₹2900 ದರ ನಿಗಧಿಗೊಳಿಸಿ ಅನ್ಯಾಯ ಮಾಡುತ್ತಿದೆ ಎಂದರು. ಮೆಕ್ಕೆಜೋಳ ಬೆಳೆಗೆ ₹2400 ನಿಗಧಿಗೊಂಡಿದೆ. ಆದರೆ ರಾಜ್ಯದಲ್ಲಿ ಕೇವಲ ₹1800 ದರದಲ್ಲಿ ಖರೀದಿಯಾಗುತ್ತಿದೆ. ಕೇಂದ್ರ ಸರ್ಕಾರ ಎನ್‌ಎಸ್‌ಪಿ ನಿಗಧಿಗೊಳಿಸಿದ್ದು ರಾಜ್ಯಸರ್ಕಾರ ಮದ್ಯಪ್ರವೇಶಿಸಿ ಖರೀದಿ ಕೇಂದ್ರ ತೆರೆದರೆ ಮಾತ್ರ ಬೆಲೆ ವ್ಯತ್ಯಾಸ ಹಾಗೂ ರೈತರಿಗಾಗುವ ಅನ್ಯಾಯ ತಡೆಗಟ್ಟಬಹುದು ಎಂದು ಹೇಳಿದರು.ಸತತ ಒಂದೂವರೆ ತಿಂಗಳು ಚಳುವಳಿ ನಡೆಸಿದ ರೈತರಿಗೆ ರಾಜ್ಯಸರ್ಕಾರ ಬದುಕಿದ್ದು ಸತ್ತಾಂತಾಗಿದೆ. ಇದೀಗ ಎಲ್ಲಾ ಬೆಳೆ ಗಳು ಖರೀದಿಯಾಗಿ, ದಲ್ಲಾಳಿಗೋಸ್ಕರ ಖರೀದಿ ಕೇಂದ್ರ ತೆರೆದಿದೆ. ಬಿಜೆಪಿ ಭತ್ತ, ಮೆಕ್ಕೆ ಜೋಳ ಖರೀದಿ ಕೇಂದ್ರ ತೆರೆಯಲು ಹೇಳಿದರೆ, ರಾಜ್ಯಸರ್ಕಾರ ಶಾಸಕರ ಖರೀದಿ ಕೇಂದ್ರ ತೆರೆಯುತ್ತಿದೆ ಎಂದು ಲೇವಡಿ ಮಾಡಿದರು.ಜನತೆಗೆ ಅಭಿವೃದ್ಧಿಗಾಗಿ ರಾಜ್ಯದ ಮತದಾರರು ಅಧಿಕಾರಕ್ಕೆ ಕೂರಿಸಿರುವುದೇ ಹೊರತು ನಾಟಿ ಕೋಳಿ ರುಚಿ ಸವಿಯಲಲ್ಲ. ರಾಜ್ಯದಲ್ಲಿ ರೈತ ವಿದ್ಯಾನಿಧಿಗೆ ಕಲ್ಲುಬಿದ್ದಿದೆ. ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯಡಿ ₹6 ಸಾವಿರ, ಅಂದಿನ ಬಿಜೆಪಿ ಸರ್ಕಾರದಲ್ಲಿ ₹4 ಸಾವಿರ ಒಟ್ಟಾಗಿ 10 ಸಾವಿರ ರೈತರಿಗೆ ನೀಡಲಾಗುತ್ತಿತ್ತು. ಇದೀಗ ಅದನ್ನು ಕಾಂಗ್ರೆಸ್ ಸರ್ಕಾರ ಹಣ ಕಡಿತಗೊಳಿಸಿ ಪಕ್ಷದ ಜೇಬಿಗೆ ತುಂಬಿಸಿಕೊಳ್ಳುತ್ತಿದೆ ಎಂದು ದೂರಿದರು. ಮಾಜಿ ಶಾಸಕ ಹರತಾಳಪ್ಪ ಹಾಲಪ್ಪ ಮಾತನಾಡಿ ಉತ್ತರ ಕರ್ನಾಟಕ ಕಬ್ಬು ಕಟಾವಿನ ವೇಳೆಯಲ್ಲಿ ನೆರೆರಾಜ್ಯದಲ್ಲಿ ₹3500 ದರವಿದ್ದರೆ, ರಾಜ್ಯದಲ್ಲಿ ಕೇವಲ 3 ಸಾವಿರ ಇಲ್ಲ. ಈ ಬಗ್ಗೆ ಬಿಜೆಪಿ ರಾಜ್ಯ ನಾಯಕರು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ಮೇರೆಗೆ ರಾಜ್ಯ ಸರ್ಕಾರ ರೈತರು, ಕಾರ್ಖಾನೆ ಮಾಲೀ ಕರ ಸಭೆ ಕರೆದು ದರ ನಿಗಧಿಗೊಳಿಸಿದ್ದು ಇಂದಿಗೂ ಹೊಸ ದರದಲ್ಲಿ ಖರೀದಿಸುತ್ತಿಲ್ಲ ಎಂದು ಹೇಳಿದರು.ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ ಮಾತನಾಡಿ ಕಬ್ಬು ಬೆಳೆಗೆ ಸೂಕ್ತ ದರ ಹಾಗೂ ಮೆಕ್ಕೆ ಜೋಳ ಖರೀದಿ ಕೇಂದ್ರವಿಲ್ಲದೇ ರಾಜ್ಯದ ಸಾವಿರಾರು ರೈತರು ಕಂಗಾಲಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಯಡ್ಡಿಯೂರಪ್ಪ ಮುಖ್ಯಮಂತ್ರಿ ಕಾಲದಲ್ಲಿ ರೈತರಿಗೆ ಸಕಲ ಸೌಕರ್ಯ ಲಭ್ಯವಿತ್ತು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ರೈತ ಆತ್ಮಹತ್ಯೆ ದಾರಿ ಹಿಡಿಯುವಂತಾಗಿದೆ ಎಂದು ದೂರಿದರು.ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ನಗರಾಧ್ಯಕ್ಷ ಪುಷ್ಪರಾಜ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಆನಂದಪ್ಪ, ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಪುಣ್ಯಪಾಲ್, ಡಾ| ನರೇಂ ದ್ರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ವೀಣಾಶೆಟ್ಟಿ, ಕವೀಶ್, ಸೋಮಶೇಖರ್, ಮಹಿಳಾ ಮೋರ್ಚಾ ಜಿಲ್ಲಾ ಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ಮುಖಂಡರಾದ ಕೋಟೆ ರಂಗನಾಥ್, ದಿನೇಶ್, ಪುಟ್ಟಸ್ವಾಮಿ, ಕೌಶಿಕ್, ದಿನೇಶ್ ಪಾದಮನೆ, ಕೆ.ಪಿ,ವೆಂಕಟೇಶ್, ಸೀತರಾಮಭರಣ್ಯ, ನಂದೀಶ್ ಮದಕರಿ, ಕಬೀರ್, ಆಲ್ದೂರು ರವಿ ಮತ್ತಿತರರು ಹಾಜರಿದ್ದರು.