ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತರ ಒಲೈಕೆ, ತುಷ್ಟೀಕರಣ ರಾಜಕಾರಣ, ಎಸ್ಸಿ, ಎಸ್ಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಿಸಿರುವುದು, ಬಿಜೆಪಿ ಶಾಸಕರ ಅಮಾನತು ಖಂಡಿಸಿ, ಹನಿಟ್ರ್ಯಾಪ್ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟಿಸಿದರು.ನಗರದ ರಾಮಸ್ವಾಮಿ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಂತ್ರಿಗಳಿಗೆ ಶಾಸಕರಿಗೆ ಹನಿ ಟ್ರ್ಯಾಪ್ ಗ್ಯಾರಂಟಿ. ಹಿಂದೂಗಳಿಗೆ ಆತ್ಮಹತ್ಯೆ ಭಾಗ್ಯ ಮುಸ್ಲಿಮರಿಗೆ ಶಾದಿಭಾಗ್ಯ, ಬಡವರಿಗೆ ಬೆಲೆ ಏರಿಕೆ ಶೋಷಣೆ ಮುಸ್ಲಿಮರಿಗೆ ಯೋಜನೆಗಳ ಘೋಷಣೆ, ಓಲೈಕೆ ಪಿತಾಮಹ ಸಿದ್ದರಾಮಯ್ಯ ಅವರಿಗೆ ಧಿಕ್ಕಾರ, ಗುತ್ತಿಗೆಯಲ್ಲಿ ಶೇ.4 ಮುಸ್ಲಿಮರಿಗೆ ಮೀಸಲಾತಿ ನೀಡಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಹಲಾಲ್ ಸರ್ಕಾರ ತೊಲಗುವರೆಗೂ ಹೋರಾಟ ಎಂದು ಭಿತ್ತಿಪತ್ರ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಕಾಂಗ್ರೆಸ್ ಶಾಸಕ ರಾಜಣ್ಣ ಅವರೇ ಸದನದಲ್ಲಿ ತಮ್ಮ ಮೇಲೆ ಹನಿಟ್ರ್ಯಾಪ್ ಮಾಡಲಾಗುತ್ತಿದೆ ಎಂದು ಹೇಳಿದರು. ಜತೆಗೆ ರಾಜ್ಯದಲ್ಲಿ ಸೀಡಿ ಫ್ಯಾಕ್ಟರಿಯೇ ತಯಾರಾಗಿದೆ. ಆಡಳಿತ ಪಕ್ಷ, ವಿರೋಧ ಪಕ್ಷವೇ ಆದರೂ ಸೂಕ್ತ ತನಿಖೆ ಆಗಬೇಕು. ದೂರು ನೀಡುತ್ತೇನೆ ಎಂದು ಹೇಳಿದ್ದ ರಾಜಣ್ಣ ಈವರೆಗೂ ನೀಡಿಲ್ಲ. ಬಿಜೆಪಿ ಅಥವಾ ಕಾಂಗ್ರೆಸಿನ ವರಿಷ್ಠರು ನಿಮ್ಮ ಮೇಲೆ ಒತ್ತಡ ಹೇರುತ್ತಿದ್ದಾರಾ? ಕೇಂದ್ರ ನಾಯಕರೂ ಸೇರಿದಂತೆ 48 ಜನರ ಸಿಡಿ ಇದೆ ಎಂದು ಹೇಳಿದ್ದರು. ಯಾರು ಆ ನಾಯಕರು? ಈ ಎಲ್ಲದರ ಕುರಿತ ತನಿಖೆ ನಡೆಯಬೇಕು. ಕೂಡಲೇ ಪ್ರಕರಣ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಭಾಧ್ಯಕ್ಷರು ಬಿಜೆಪಿಯ ಶಾಸಕರನ್ನು 6 ತಿಂಗಳ ಕಾಲ ಅಮಾನತ್ತು ಮಾಡಿರುವುದು ಕಾನೂನುಬಾಹಿರ. ಅಸಂವಿಧಾನಾತ್ಮಕವಾಗಿ, ಏಕಪಕ್ಷೀಯ ಹಾಗೂ ಮನಸೋ ಇಚ್ಚೆಯಿಂದ ತೆಗೆದುಕೊಂಡ ತೀರ್ಮಾನ. ಶಾಸಕರಿಗೆ ಮಾತ್ರವಲ್ಲದೆ ಮತದಾರರಿಗೂ ಮಾಡಿದ ಅವಮಾನ. ಸಭಾಧ್ಯಕ್ಷರು ಕೂಡಲೇ ಶಾಸಕರ ಅಮಾನತನ್ನು ಈ ಕೂಡಲೇ ಹಿಂಪಡೆಯದಿದ್ದರೆ ಸದನದಲ್ಲಿ ನಡೆಯುವ ಯಾವುದೇ ಕಲಾಪಕ್ಕೂ ಬಿಜೆಪಿಯ ಯಾವೊಬ್ಬ ಶಾಸಕರೂ ಭಾಗವಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಮಾತನಾಡಿ, ಕಾಂಗ್ರೆಸ್ ಮತ್ತೊಮ್ಮೆ ತನ್ನ ಹಳೆಯ ಚಾಳಿ ಮುಂದುವರೆಸಿದೆ. ಮುಸ್ಲಿಮರಿಗೆ ಸರ್ಕಾರಿ ಕಾಮಗಾರಿಗಳಲ್ಲಿ ಶೇ.4 ರಷ್ಟು ಮೀಸಲಾತಿ ನೀಡಿರುವುದು, ಹೊರ ದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋಗುವ ಮುಸ್ಲಿಂ ವಿದ್ಯಾರ್ಥಿಗಳ ಸಹಾಯಧನ ಹೆಚ್ಚಳ ಮಾಡಿರುವುದು, ಶಾದಿ ಭಾಗ್ಯಕ್ಕೆ ಹಣ ನೀಡುವ ನಿರ್ಧಾರ ತೆಗೆದು ಕೊಂಡಿರುವುದು, ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾತ್ರ ಆತ್ಮರಕ್ಷಣೆಗಾಗಿ ವಿಶೇಷ ಅನುದಾನ ನೀಡುತ್ತಿರುವುದು ಕಾಂಗ್ರೆಸ್ ತುಷ್ಟೀಕರಣ ರಾಜಕಾರಣದ ಮುಂದುವರಿದ ಭಾಗವಾಗಿದೆ ಎಂದು ಆರೋಪಿಸಿದರು.
ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿ ಕೊಡಲು ಅವಕಾಶವಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಸೇರಿ ವಿವಿಧ ಕೋರ್ಟ್ ಗಳೂ ತೀರ್ಪು ನೀಡಿವೆ. ಆದರೂ ಈ ರೀತಿಯ ನಿರ್ಧಾರ ತೆಗೆದುಕೊಂಡಿರುವ ಕಾಂಗ್ರೆಸ್ ನಡೆ ಡಾ. ಅಂಬೇಡ್ಕರ್ ಸಂವಿಧಾನಕ್ಕೆ ಮಾಡಿದ ಅವಮಾನ. ಕೂಡಲೇ ಕಾಂಗ್ರೆಸ್ ಈ ನಿರ್ಧಾರಗಳಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.ಮಾಜಿ ಶಾಸಕ ಹರ್ಷವರ್ಧನ್, ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ರಾಜ್ಯ ವಕ್ತಾರ ಎಂ.ಜಿ. ಮಹೇಶ್, ಮುಖಂಡರಾದ ಫಣೀಶ್, ಸಂದೇಶ್ ಸ್ವಾಮಿ, ಹೇಮಾ ನಂದೀಶ್, ಗಿರಿಧರ್, ಕೇಬಲ್ ಮಹೇಶ್, ರಾಕೇಶ್ ಗೌಡ, ಮಹೇಶ್ ರಾಜೇ ಅರಸ್ ಮೊದಲಾದವರು ಇದ್ದರು.