ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ

| Published : Mar 25 2025, 12:51 AM IST

ಸಾರಾಂಶ

ಜಿಲ್ಲಾ ಬಿಜೆಪಿ ಘಟಕದಿಂದ ಸರ್ಕಾರಿ ಕಾಮಗಾರಿ ಗುತ್ತಿಗೆ ನೀಡುವಲ್ಲಿ ಮುಸ್ಲಿಮರಿಗೆ ಶೇ.೪ ಮೀಸಲಾತಿ ನೀಡುವ ತುಷ್ಠೀಕರಣದ ನಿರ್ಧಾರ

ಕಾರವಾರ: ಜಿಲ್ಲಾ ಬಿಜೆಪಿ ಘಟಕದಿಂದ ಸರ್ಕಾರಿ ಕಾಮಗಾರಿ ಗುತ್ತಿಗೆ ನೀಡುವಲ್ಲಿ ಮುಸ್ಲಿಮರಿಗೆ ಶೇ.೪ ಮೀಸಲಾತಿ ನೀಡುವ ತುಷ್ಠೀಕರಣದ ನಿರ್ಧಾರ, ಬೆಲೆ ಏರಿಕೆ ನಿಯಂತ್ರಿಸದ, ೧೮ ಶಾಸಕರ ಅಮಾನತ್ತು ಮಾಡಿದ ರಾಜ್ಯ ಸರ್ಕಾರದ ನಿಲುವುಗಳನ್ನು ಖಂಡಿಸಿ ನಗರದ ಶಿವಾಜಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಕುಮಟಾ ಶಾಸಕ ದಿನಕರ ಶೆಟ್ಟಿ, ಕಳೆದ ೨೦೨೪-೨೫ನೇ ಬಜೆಟ್‌ನಲ್ಲಿ ಸಿದ್ದರಾಮಯ್ಯ ನಮ್ಮ ಜಿಲ್ಲೆಗೆ ಘೋಷಣೆ ಮಾಡಿದ ಯೋಜನೆಗಳಲ್ಲಿ ಒಂದೇ ಒಂದು ಅನುಷ್ಟಾನವಾಗಿಲ್ಲ. ದುರದೃಷ್ಟವೆಂದರೆ ಈ ಬಗ್ಗೆ ನಮ್ಮ ಜಿಲ್ಲೆಯ ಯಾವ ಶಾಸಕರೂ ಮಾತನಾಡಿಲ್ಲ. ಅರಣ್ಯ ಇಲಾಖೆಯಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರುಪಾಯಿ ರಾಜಸ್ವ ಹೋಗಿದೆ. ಆದರೆ ಅದರ ಕಾಲುಭಾಗವನ್ನು ಕೂಡ ವಾಪಸ್ ಜಿಲ್ಲೆಗೆ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ, ಕಾಂಗ್ರೆಸ್ ಮತ್ತೊಮ್ಮೆ ತುಷ್ಠೀಕರಣದ ತನ್ನ ಹಳೆ ಚಾಳಿ ಮುಂದುವರೆಸಿದೆ. ಸರ್ಕಾರಿ ಕಾಮಗಾರಿಗಳಲ್ಲಿ ಶೇ.೪ರಷ್ಟು ಮೀಸಲಾತಿ ಮುಸ್ಲಿಮರಿಗೆ ನೀಡುವುದು, ಹೊರದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ ನೀಡುವ ಸಹಾಯಧನವನ್ನು ₹೨೦ ಲಕ್ಷದಿಂದ ₹೩೦ ಲಕ್ಷಕ್ಕೆ ಹೆಚ್ಚಳ ಮಾಡಿರುವುದು, ಶಾದಿ ಭಾಗ್ಯಕ್ಕೆ ಹಣ ನೀಡುವ ನಿರ್ಧಾರ ತೆಗೆದುಕೊಂಡಿರುವುದು ಮತ್ತು ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾತ್ರ ಆತ್ಮರಕ್ಷಣೆಗಾಗಿ ವಿಶೇಷ ಅನುದಾನವನ್ನು ನೀಡುವುದು ತುಷ್ಠೀಕರಣದ ಮುಂದುವರಿದ ಭಾಗವಾಗಿದೆ. ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಬಿಜೆಪಿ ಜಿಲ್ಲಾ ಘಟಕ ಖಂಡಿಸುತ್ತದೆ ಎಂದು ಹೇಳಿದರು.

ನಾಗರಾಜ ನಾಯಕ ಮಾತನಾಡಿ, ಆಡಳಿತ ಪಕ್ಷದಲ್ಲಿ ಸಚಿವರಾಗಿರುವ ಹಿರಿಯೊಬ್ಬರು ನನ್ನ ಹನಿಟ್ರ್ಯಾಪ್ ಮಾಡುತ್ತಿದ್ದಾರೆ. ಹನಿಟ್ರ್ಯಾಪ್ ಮಾಡುವ ಫ್ಯಾಕ್ಟರಿಯಿದೆ ಎನ್ನುತ್ತಾರೆ. ಕರ್ನಾಟಕದ ಜನರು ತಲೆತಗ್ಗಿಸುವಂತಾಗಿದೆ. ಯಾವುದೇ ಹೆಣ್ಣು ಮಗಳು ಸಮಸ್ಯೆ ಹೇಳಿಕೊಳ್ಳಲು ಬಂದರೆ ಅನುಮಾನ ಪಡುವ ಪರಿಸ್ಥಿತಿ ನಿರ್ಮಾಣ ಮಾಡಿದ ಹೆಗ್ಗಳಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ನೀವು ಬೇರೆಯವರ ಹನಿಟ್ರ್ಯಾಪ್ ಮಾಡಿದರೆ ನಿಮ್ಮ ಮನೆಯವರ ಹನಿಟ್ರ್ಯಾಪ್ ಮಾಡುವ ಕಾಲ ದೂರವಿಲ್ಲ ಎನ್ನುವುದನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದರು.

ನಗರದ ಶಿವಾಜಿ ಸರ್ಕಲ್ ಬಳಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲಿಂದ ಎಂ.ಜಿ.ರಸ್ತೆಯ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಬಿಜೆಪಿಗರು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.

ಮಾಜಿ ಅಧ್ಯಕ್ಷ ವೆಂಕಟೇಶ ನಾಯಕ, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ, ಗೋವಿಂದ ನಾಯ್ಕ, ಸಂಜಯ ಸಾಳುಂಕೆ ಮುಂತಾದವರು ಇದ್ದರು.