ಕನ್ನಡಪ್ರಭ ವಾರ್ತೆ ಮಂಡ್ಯ
ತಮಿಳುನಾಡಿಗೆ ನಿತ್ಯ ೧೨ ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಜಮಾವಣೆಗೊಂಡ ಕಾರ್ಯಕರ್ತರು ತಮಿಳುನಾಡು ಸರ್ಕಾರ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೆಲ ಕಾಲ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕುಳಿತು ರಸ್ತೆ ಸಂಚಾರಕ್ಕೆ ತಡೆಯೊಡ್ಡಿದರು.
ಕಾವೇರಿ ಕಣಿವೆ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕೊರತೆ ಇದೆ. ರಾಜ್ಯದ ರೈತರಿಗೆ ಬೆಳೆ ಬೆಳೆಯಲು ನೀರು ಕೊಡಲಾಗದೆ ಸಂಕಷ್ಟ ಅನುಭವಿಸುತ್ತಿದ್ದೇವೆ. ನೀರಿಲ್ಲದೆ ಬೆಳೆಗಳು ಒಣಗಿನಿಂತಿವೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ನೀಡಿರುವ ಆದೇಶ ರಾಷ್ಟ್ರೀಯ ದುರಂತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಬರದ ಛಾಯೆ ಎದುರಾಗಿದೆ. ಕೆರೆ- ಕಟ್ಟೆಗಳು ಒಣಗುತ್ತಿವೆ. ಜನ-ಜಾನುವಾರುಗಳು ನೀರಿನ ಬವಣೆಯನ್ನು ಎದುರಿಸುತ್ತಿದ್ದರೂ ನೀರು ಬಿಡುಗಡೆ ಮಾಡಬೇಕೆಂಬ ಪ್ರಾಧಿಕಾರದ ಆದೇಶ ಕುರುಡುತನದ್ದಾಗಿದೆ ಎಂದು ದೂರಿದರು.
ಈಗಾಗಲೇ ಕರ್ನಾಟಕ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಪೂರ್ವ ಸಿದ್ದತೆಯನ್ನು ಆರಂಭಿಸಿರುವಂತೆ ತಮಿಳುನಾಡು ಕೂಡ ಹೆಚ್ಚುವರಿಯಾಗಿ ಪೋಲಾಗುತ್ತಿರುವ ನೀರನ್ನು ರಕ್ಷಿಸಿಕೊಳ್ಳಲು ಅಣೆಕಟ್ಟೆಯನ್ನು ನಿರ್ಮಿಸಿಕೊಳ್ಳುವಂತೆ ಒತ್ತಾಯಿಸಿದರು.
ರಾಜ್ಯಸರ್ಕಾರ ಜಿಲ್ಲೆಯ ರೈತರ ಹಿತವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು, ರಾಜ್ಯದ ನೀರಿನ ಪರಿಸ್ಥಿತಿ ಮತ್ತು ಬೆಳೆಗಳ ಅವಶ್ಯಕತೆಯನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ರೈತಪರ ಸಂಘಟನೆಗಳ ಹೋರಾಟಗಾರರ ಅಭಿಪ್ರಾಯವನ್ನು ಆಲಿಸಿ ನ್ಯಾಯಸಮ್ಮತ ಕ್ರಮ ಕೈಗೊಳ್ಳಬೇಕು, ಕಾವೇರಿ ವಿಚಾರದಲ್ಲಿ ಕಾವೇರಿ ಕಣಿವೆ ರೈತರ ಹಿತಾಸಕ್ತಿಯನ್ನು ದೃಢವಾಗಿ ಪ್ರತಿಪಾದಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಬ್ ಇನ್ಸ್‌ಪೆಕ್ಟರ್‌ಗೆ ಗಾಯ:ಪ್ರತಿಭಟನಾಕಾರರು ರಸ್ತೆ ಮಧ್ಯದಲ್ಲಿ ಟೈರ್ ಇಟ್ಟು ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲು ಯತ್ನಿಸಿದರು. ಆಗ ಮಧ್ಯಪ್ರವೇಶಿಸಿದ ಪೊಲೀಸರು ಟೈರ್‌ನ್ನು ವಶಕ್ಕೆ ಪಡೆಯಲು ಮುಂದಾದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಅಂತಿಮವಾಗಿ ಟೈರ್ ಕಿತ್ತುಕೊಳ್ಳಲು ಯತ್ನಿಸಿದಾಗ ಪಿಎಸ್‌ಐ ಮಣಿ ಅವರ ಕೈಗೆ ಗಾಯವಾಯಿತು. ನಂತರ ಟೈರ್‌ನ್ನು ಕಿತ್ತುಕೊಂಡು ದೂರಕ್ಕೆ ಕೊಂಡೊಯ್ಯುವಲ್ಲಿ ಪೊಲೀಸರು ಯಶಸ್ವಿಯಾದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್, ಮುಖಂಡರಾದ ಎಚ್.ಆರ್. ಅಶೋಕ್, ಸಿ.ಟಿ. ಮಂಜುನಾಥ್, ಶಿವಕುಮಾರ್ ಆರಾಧ್ಯ, ಪ್ರಸನ್ನಕುಮಾರ್, ಶಿವಣ್ಣ, ಸಿದ್ದರಾಜು, ಶಂಕರ್, ನಿತ್ಯಾನಂದ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.