ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರಿಗೆ ಅವಮಾನಿಸಿರುವುದನ್ನು ಖಂಡಿಸಿ, ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಶನಿವಾರ ಉಪವಿಭಾಗಾಧಿಕಾರಿ ಕಚೇರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಸಾಗರ
ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರಿಗೆ ಅವಮಾನಿಸಿರುವುದನ್ನು ಖಂಡಿಸಿ, ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಶನಿವಾರ ಉಪವಿಭಾಗಾಧಿಕಾರಿ ಕಚೇರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಹಸೀಲ್ದಾರ್ ಅವರನ್ನು ಅವಮಾನಿಸಿರುವುದು ಮಹಿಳೆಯರಿಗೆ ಮಾಡಿದ ಅವಮಾನ. ತಹಸೀಲ್ದಾರ್ ಡಾ. ಪ್ರತಿಭಾ ಅವರು ಸಾಗರಕ್ಕೆ ಬಂದಾಗಿನಿಂದ ಅತ್ಯಂತ ಪ್ರಾಮಾಣಿಕ, ನಿರ್ಭೀತಿಯಿಂದ ಕೆಲಸ ಮಾಡುತ್ತಿದ್ದಾರೆ. ಅನೇಕ ಅಕ್ರಮಗಳನ್ನು ಬಯಲಿಗೆ ತರಲು ಶ್ರಮಿಸಿದ್ದು, ಇವು ಶಾಸಕರಿಗೆ ಇಷ್ಟವಿದ್ದಂತೆ ಕಾಣುತ್ತಿಲ್ಲ. ಆದ್ದರಿಂದ ಸಾರ್ವಜನಿಕವಾಗಿ ಅವರನ್ನು ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಅಧಿಕಾರಿಯನ್ನು ಅವಮಾನಿಸಿದ ಘಟನೆಯನ್ನು ಬಿಜೆಪಿ ಮಹಿಳಾ ಮೋರ್ಚಾ ಉಗ್ರವಾಗಿ ಖಂಡಿಸುತ್ತದೆ. ಕಾಂಗ್ರೆಸ್ ಪಕ್ಷ ಮಹಿಳಾ ದ್ವೇಷಿ ಎನ್ನುವುದು ಪದೇಪದೇ ಸಾಬೀತಾಗುತ್ತಿದೆ. ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಜಾರಿಗೆ ತರಲು ಮುಂದಾದರೆ ಕಾಂಗ್ರೆಸ್ ಅದಕ್ಕೆ ಅಡ್ಡಗಾಲು ಹಾಕಿದೆ. ಸ್ಥಳೀಯವಾಗಿ ಸಹ ಮಹಿಳಾ ಅಧಿಕಾರಿಗಳು ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದರು.ಬಿಜೆಪಿ ಮಹಿಳಾ ಪ್ರಮುಖರಾದ ಡಾ.ರಾಜನಂದಿನಿ ಕಾಗೋಡು ಮಾತನಾಡಿ, ತಹಸೀಲ್ದಾರ್ ಡಾ.ಪ್ರತಿಭಾ ಅತಿಹೆಚ್ಚು ಓದಿದ್ದು ಸಾಹಿತ್ಯ, ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಅವರು ಕರ್ತವ್ಯ ನಿರ್ವಹಿಸಿದ ಕಡೆ ಉತ್ತಮ ಅಧಿಕಾರಿ ಎಂದು ಹೆಸರು ಪಡೆದಿದ್ದಾರೆ. ತಾಲೂಕಿನಲ್ಲಿ ಅಕ್ರಮ ತಡೆಯಲು ತಮ್ಮದೇ ರೀತಿಯಲ್ಲಿ ಅವರು ಕಾರ್ಯಾಚರಣೆ ಮಾಡುತ್ತಿದ್ದಾರೆ. ದಾಳಿ ವೇಳೆ ಸರ್ಕಾರಿ ದಾಖಲೆಗೆ ವಿಡಿಯೋ ಚಿತ್ರೀಕರಣ ಮಾಡುವುದು ಸಹಜ. ಶಾಸಕರು ಉತ್ತಮ ಕೆಲಸ ಮಾಡುತ್ತಿರುವ ಅಧಿಕಾರಿಗೆ ಪ್ರೋತ್ಸಾಹ ನೀಡುವ ಬದಲು ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವ ರೀತಿಯಲ್ಲಿ ಅವಮಾನಿಸಿದ್ದು ಖಂಡನೀಯ. ತಕ್ಷಣ ಶಾಸಕರು ಕ್ಷಮೆಯಾಚಿಸಬೇಕು. ಯಾವುದೇ ಕಾರಣಕ್ಕೂ ಪ್ರತಿಭಾ ಅವರು ನಿರ್ಭೀತಿಯಿಂದ ಕೆಲಸ ಮಾಡಲು ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಬಿಜೆಪಿ ನಗರ ಮಂಡಳ ಅಧ್ಯಕ್ಷ ಕೆ.ಆರ್.ಗಣೇಶ್ ಪ್ರಸಾದ್ ಮಾತನಾಡಿದರು. ಗಾಯತ್ರಿ ಮಲ್ಲೇಶಪ್ಪ, ಸುಮಾ ರವಿ, ಮೈತ್ರಿ ಪಾಟೀಲ್, ಪ್ರೇಮ ಕಿರಣ್ ಸಿಂಗ್, ಭಾವನಾ ಸಂತೋಷ್, ದೇವೇಂದ್ರಪ್ಪ, ಶ್ವೇತಾ ಸಂತೋಷ್, ಸತೀಶ್ ಕೆ., ಸಂತೋಷ್, ಕವಿತಾ, ಕೃಷ್ಣ ಶೇಟ್, ವಿ.ಮಹೇಶ್, ಲಿಂಗರಾಜ್, ಬಿ.ಟಿ.ರವೀಂದ್ರ, ಪರಶುರಾಮ್ ಇನ್ನಿತರರು ಹಾಜರಿದ್ದರು.-----ಫೋಟೊ----೫ಕೆ.ಎಸ್.ಎ.ಜಿ.೧ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ನಡೆಯಿತು. ಮಧುರಾ ಶಿವಾನಂದ್, ಕೆ.ಆರ್.ಗಣೇಶ್ ಪ್ರಸಾದ್, ಗಾಯತ್ರಿ ಮಲ್ಲೇಶಪ್ಪ, ಸುಮಾ ರವಿ, ಮೈತ್ರಿ ಇತರರಿದ್ದರು.