ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಆಡಳಿತದ ವೈಫಲ್ಯ ಹಾಗೂ ಹೊಸನಗರ ತಾಲೂಕಿನ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರುತ್ತಿರುವುದನ್ನು ಆರೋಪಿಸಿ ಬಿಜೆಪಿ ತಾಲೂಕು ಮಂಡಳಿ ವತಿಯಿಂದ ಸೋಮವಾರ ಹೊಸನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಹೊಸನಗರ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಆಡಳಿತದ ವೈಫಲ್ಯ ಹಾಗೂ ಹೊಸನಗರ ತಾಲೂಕಿನ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರುತ್ತಿರುವುದನ್ನು ಆರೋಪಿಸಿ ಬಿಜೆಪಿ ತಾಲೂಕು ಮಂಡಳಿ ವತಿಯಿಂದ ಸೋಮವಾರ ಹೊಸನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ತಾಲೂಕು ಕಚೇರಿ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ರಾಜ್ಯಕ್ಕೆ ವಿದ್ಯುತ್ ನೀಡಲು ತನ್ನ ನೆಲ, ಜಮೀನು ಮತ್ತು ಮನೆಗಳನ್ನು ಕಳೆದುಕೊಂಡಿರುವ ಅನೇಕ ಕುಟುಂಬಗಳಿರುವ ಹೊಸನಗರ ತಾಲೂಕು ಇಂದು ವಿದ್ಯುತ್ ಹಾಗೂ ಮೂಲಸೌಕರ್ಯ ಸಮಸ್ಯೆಗಳಿಂದ ಬಳಲುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ಮೂರೂವರೆ ವರ್ಷ ಕಳೆದಿದ್ದರೂ ತಾಲೂಕಿನ ಅಭಿವೃದ್ಧಿಗೆ ಅಗತ್ಯ ಆದ್ಯತೆ ದೊರೆತಿಲ್ಲ. ಸರ್ಕಾರದ ಜನವಿರೋಧಿ ನೀತಿಗಳನ್ನು ಬಿಜೆಪಿ ವಿರೋಧಿಸುತ್ತಿದ್ದು, ಜನರು ಈಗಲೇ ಎಚ್ಚರಗೊಳ್ಳಬೇಕು ಎಂದು ಕರೆ ನೀಡಿದರು.

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಹೊಸನಗರ ತಾಲೂಕಿನಲ್ಲಿ ಸುಮಾರು 3,500 ಫಲಾನುಭವಿಗಳಿಗೆ ಕಳೆದ ಆರು ತಿಂಗಳಿಂದ ಹಣ ಪಾವತಿಯಾಗಿಲ್ಲ ಎಂದು ಆರೋಪಿಸಿದರು. ಪ್ರತಿ ತಿಂಗಳು ಸುಮಾರು ₹35 ಲಕ್ಷದಷ್ಟು ಹಣ ಫಲಾನುಭವಿಗಳಿಗೆ ತಲುಪದೆ ಉಳಿಯುತ್ತಿದೆ ಎಂದು ಹೇಳಿದರು.

ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕ್ಷೇತ್ರದ ಅಭಿವೃದ್ಧಿಗಿಂತ ಸಚಿವ ಸ್ಥಾನಕ್ಕಾಗಿ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂದು ಆರೋಪಿಸಿದ ಹಾಲಪ್ಪ, ತಾಲೂಕಿನಲ್ಲಿ ಬೆಳೆ ಪರಿಹಾರ, ಮಳೆಮಾಪನ, ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಹಲವು ಸಮಸ್ಯೆಗಳು ಬಾಕಿ ಉಳಿದಿವೆ ಎಂದರು.

ಬಿಜೆಪಿ ತಾಲೂಕು ಮಂಡಲದ ಅಧ್ಯಕ್ಷ ಸತೀಶ್ ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆಯಡಿ ಸುಮಾರು 35 ಸಾವಿರ ಪಿಂಚಣಿಗಳನ್ನು ರದ್ದುಪಡಿಸಲಾಗಿದ್ದು, ಫಲಾನುಭವಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಹಿರಿಯರಾದ ಉಮೇಶ್ ಕಂಚುಗಾರ್, ಎನ್.ಆರ್. ದೇವಾನಂದ್, ಶ್ರೀಪತಿರಾವ್, ಮಂಡಾನಿ ಮೋಹನ್, ಗಣಪತಿ ಬಿಳಗೋಡು, ಕೃಷ್ಣವೇಣಿ, ಎಂ.ಎನ್. ಸುದಾಕರ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.