ವಕ್ಫ್‌ ವಿರುದ್ಧ ಬಿಜೆಪಿ ಪ್ರತಿಭಟನೆ

| Published : Nov 23 2024, 12:31 AM IST

ಸಾರಾಂಶ

ಮುಡಾ ಹಗರಣ, ರೇಷನ್‌ ಕಾರ್ಡ್‌ ರದ್ದು, ವಾಲ್ಮೀಕಿ ನಿಗಮದ ಹಣ ಲೂಟಿ ಮೂಲಕ ಗ್ಯಾರಂಟಿಗೆ ಹಣ ಜೋಡಿಸುವ ಕಾರ್ಯವಾಗಿದೆ. ಮತ ನೀಡಿ ಬೆಂಬಲ ನೀಡಿದ ರಾಜ್ಯದ ಜನರ ಹಣವನ್ನು ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ.

ಧಾರವಾಡ:

ಮಠ-ಮಂದಿರ, ರೈತರ ಹಾಗೂ ಸಾರ್ವಜನಿಕರ ಆಸ್ತಿಗಳನ್ನು ವಕ್ಫ್‌ ಮಂಡಳಿ ತನ್ನ ಹೆಸರು ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ಭೂ ಜಿಹಾದ್‌ ನಡೆಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಶಾಸಕ ಮಹೇಶ ಟೆಂಗಿನಕಾಯಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿ ಆಡಳಿತ ನಡೆಸುತ್ತಿದೆ. ಉಳಿದ ಸಮುದಾಯ ಕಣ್ಣಿಗೆ ಕಾಣುತ್ತಿಲ್ಲ. ಬರೀ ವಿಜಯಪುರ ಜಿಲ್ಲೆಯಲ್ಲಿ ಮಾತ್ರ 14 ಸಾವಿರ ಎಕರೆ ವಕ್ಫ್‌ ಆಸ್ತಿ ಎನ್ನಲಾಗುತ್ತಿದ್ದು ರಾಜ್ಯಾದ್ಯಂತ ಲಕ್ಷಗಟ್ಟಲೇ ಎಕರೆ ವಕ್ಫ್‌ ಹೆಸರಿನಲ್ಲಿ ಆಗಿರುವುದು ದುರಂತದ ಸಂಗತಿ. ಈ ಮೊದಲು ಲವ್‌ ಜಿಹಾದ್‌ ನಡೆಯುತ್ತಿದ್ದು ಇದೀಗ ಮುಂದುವರಿದು ಭೂ ಜಿಹಾದ್‌ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಡಾ ಹಗರಣ, ರೇಷನ್‌ ಕಾರ್ಡ್‌ ರದ್ದು, ವಾಲ್ಮೀಕಿ ನಿಗಮದ ಹಣ ಲೂಟಿ ಮೂಲಕ ಗ್ಯಾರಂಟಿಗೆ ಹಣ ಜೋಡಿಸುವ ಕಾರ್ಯವಾಗಿದೆ. ಮತ ನೀಡಿ ಬೆಂಬಲ ನೀಡಿದ ರಾಜ್ಯದ ಜನರ ಹಣವನ್ನು ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ. ದುರಾಡಳಿತದಿಂದ ಸಿದ್ದರಾಮ್ಯಯ ಸರ್ಕಾರದ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ. ರಾಜ್ಯದ ಜನರು ತಮ್ಮ ಆಸ್ತಿ-ಪಾಸ್ತಿ ಕಾಪಾಡಿಕೊಳ್ಳುವುದೇ ದುಸ್ತರವಾಗಿದೆ. ಇಂತಹ ಸರ್ಕಾರದ ವಿರುದ್ಧ ಜನರೂ ಸಹ ಧ್ವನಿ ಎತ್ತಬೇಕೆಂದರು. ಮಾಜಿ ಶಾಸಕಿ ಸೀಮಾ ಮಸೂತಿ, ಮುಖಂಡ ಮೋಹನ ರಾಮದುರ್ಗ ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು.