ದೇಶದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಉದ್ದೇಶಿತ ದ್ವೇಷ ಭಾಷಣದ ಮಸೂದೆ ಜಾರಿಗೆ

ಕನ್ನಡಪ್ರಭ ವಾರ್ತೆ ನಂಜನಗೂಡುರಾಜ್ಯ ಸರ್ಕಾರ ಅನುಷ್ಟಾನಕ್ಕೆ ತರಲುದ್ದೇಶಿಸಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿದೇಯಕ-2025 ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಿದ್ದು ಈ ಮಸೂದೆಯನ್ನು ರಾಜ್ಯ ಪಾಲರು ತಿರಸ್ಕರಿಸಬೇಕು ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಒತ್ತಾಯಿಸಿದರು.ಪಟ್ಟಣದ ತಾಲೂಕು ಕಚೇರಿ ಮುಂಭಾಗ ಭಾರತೀಯ ಜನತಾ ಪಕ್ಷದಿಂದ ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ದೇಶದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಉದ್ದೇಶಿತ ದ್ವೇಷ ಭಾಷಣದ ಮಸೂದೆ ಜಾರಿಗೆ ತಂದು ನಾಗರೀಕರಿಗೆ ವಾಕ್ ಸ್ವಾತಂತ್ರ್ಯವನ್ನು ನಿರ್ಭಂಧಿಸುವ ಕಾರ್ಯಕ್ಕೆ ಮುಂದಾಗಿದ್ದು, ಜೊತೆಗೆ ಮಾಧ್ಯಮಗಳನ್ನು ಹತ್ತಿಕ್ಕುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ದ್ವೇಷ ಭಾಷಣ ವಿಧೇಯಕದ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವವರನ್ನು ನಿಯಂತ್ರಿಸುವ ಯೋಜನೆ ರೂಪಿಸಲಾಗಿದೆ, ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸುವ ಹಾಗೂ ವ್ಯಂಗ ಮಾಡುವವರ ಮೇಲೂ ಮೊಕದ್ದಮೆ ದಾಖಲು ಮಾಡಿ ಜೈಲಿಗೆ ಕಳುಹಿಸುವ ಸಂಚು ನಡೆಸಲಾಗಿದೆ, ಹೀಗಾಗಿ ಉದ್ದೇಶಿತ ಮಸೂದೆಯನ್ನು ವಿರೋಧಿಸಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.ಬಿಜೆಪಿ ಜಿಲ್ಲಾಧ್ಯಕ್ಷ ಕುಂಬರಳ್ಳಿ ಸುಬ್ಬಣ್ಣ ಮಾತನಾಡಿ, ಪ್ರತಿಪಕ್ಷಗಳನ್ನು ಹತ್ತಿಕ್ಕುವ ಜೊತೆಗೆ ಸರ್ಕಾರದ ವಿರುದ್ಧ ಧ್ವನಿ ಎತ್ತುವವರನ್ನು ಜೈಲಿಗೆ ಕಳುಹಿಸುವ ಸಂಚಿನೊಂದಿಗೆ ಉದ್ದೇಶಿತ ಕಾಯಿದೆಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಸರ್ಕಾರವನ್ನು ವಿರೋಧಿಸುವ ರೈತರು ಹಾಗೂ ಜನಸಾಮಾನ್ಯರನ್ನೂ ಹತ್ತಿಕ್ಕುವ ಯೋಜನೆಯನ್ನು ವಿರೋಧಿಸಿ ಭಾರತೀ ಜನತಾ ಪಕ್ಷದಿಂದ ರಾಜ್ಯ ವ್ಯಾಪಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಹೋರಾಟವನ್ನು ತೀವ್ರ ಗೊಳಿಸಲಾಗುವುದು ಎಂದು ಎಚ್ಚರಿಸಿದರು.ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಉದ್ದೇಶಿತ ಮಸೂದೆಯ ಪ್ರತಿಯನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ಕೃಷ್ಣಪ್ಪಗೌಡ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ಸಿದ್ಧರಾಜು, ಜಿಪಂ ಮಾಜಿ ಸದಸ್ಯ ಸಿಂಧುವಳ್ಳಿ ಕೆಂಪಣ್ಣ, ಬಿ.ಎಸ್. ಮಹದೇವಪ್ಪ, ಪ್ರೇಮಾ ಶಂಭಯ್ಯ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹದೇವಪ್ರಸಾದ್, ಮಹೇಶ್, ಬದನವಾಳು ರಾಮು, ರವೀಂದ್ರ, ಪರಶಿವಮೂರ್ತಿ, ಬಾಲಚಂದ್ರು, ಮಹೇಶ್ ಬಾಬು, ಶಿವಣ್ಣ, ಹೊರಳವಾಡಿ ಮಹೇಶ್ ಭಾಗವಹಿಸಿದ್ದರು.