ಸಿಎಂ ಸಿದ್ರಾಮಯ್ಯ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

| Published : Sep 28 2024, 01:21 AM IST

ಸಾರಾಂಶ

ಶೃಂಗೇರಿ, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೆವಿಆರ್ ವೃತ್ತದಲ್ಲಿ ಸಮಾವೇಶಗೊಂಡು ರಸ್ತೆ ತಡೆ ಮಾಡಿ ಮಾನವ ಸರಪಳಿ ನಿರ್ಮಿಸಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ, ಶೃಂಗೇರಿ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೆವಿಆರ್ ವೃತ್ತದಲ್ಲಿ ಸಮಾವೇಶಗೊಂಡು ರಸ್ತೆ ತಡೆ ಮಾಡಿ ಮಾನವ ಸರಪಳಿ ನಿರ್ಮಿಸಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ತಲಗಾರು ಉಮೇಶ್ ಮಾತನಾಡಿ ಮುಡಾ ಹಗರಣದಲ್ಲಿ ತನಿಖೆ ನಡೆಸಲು ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿದ್ದರು. ಅದನ್ನು ಪ್ರಶ್ನಿಸಿ ಹೈಕೋರ್ಟಿಗೆ ಹೋಗಿದ್ದರೂ ಅಲ್ಲಿಯೂ ಅರ್ಜಿ ವಜಾ ಆಗಿದೆ. ಜನಪ್ರತಿನಿಧಿಗಳ ಕೋರ್ಟಿನಲ್ಲಿ ಎಫ್ಐಆರ್ ಹಾಕಿ 6 ವಾರದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ತೀರ್ಪು ನೀಡಿದ್ದರೂ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿಲ್ಲ.

ಭ್ರಷ್ಟಾಚಾರದ ಆರೋಪವಿದ್ದರೂ, ನ್ಯಾಯಾಲಯದ ತೀರ್ಪು ನೀಡಿದ್ದರೂ ಸಂವಿಧಾನ, ಕಾನೂನಿಗೆ ಗೌರವ ನೀಡದೇ ಸಾಂವಿಧಾನಿಕ ಹುದ್ದೆಗೆ ಕಳಂಕ ತಂದಿದ್ದಾರೆ. ತಪ್ಪು ಮಾಡಿಲ್ಲ ಎಂದರೆ ತನಿಖೆ ಎದುರಿಸಲಿ. ಅಧಿಕಾರದಲ್ಲಿದ್ದೇ ತನಿಖೆ ಎದುರಿಸುತ್ತೇನೆ ಎಂದರೆ ಸರಿಯಲ್ಲ. ಈ ಹಿಂದೆ ಅವರೇ ವಿರೋಧ ಪಕ್ಷದ ನಾಯಕರಾಗಿದ್ದಾಗ ಬಿಎಸ್ ಯುಡಿಯೂರಪ್ಪನವರಿಗೆ ರಾಜೀನಾಮೆ ನೀಡಲು ಪಟ್ಟು ಹಿಡಿದಿದ್ದರು. ಈಗ ಅದೇ ಕೆಲಸ ಅವರು ಮಾಡಲಿ. ಹೊಣೆಹೊತ್ತು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಬಿಜೆಪಿ ರೈತಮೋರ್ಚ ಅಧ್ಯಕ್ಷ ರಾಜೇಶ್ ಮೇಘಳಬೈಲು, ಪಪಂ ಅಧ್ಯಕ್ಷ ವೇಣುಗೋಪಾಲ್, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ಬಿಜೆಪಿ ಮುಖಂಡರಾದ ಕೆ.ಎಂ.ಶ್ರೀನಿವಾಸ್, ಬೆಟ್ಟಗೆದ್ದೆ ಸುದೀಂದ್ರ, ಅಂಬಳೂರು ಸುರೇಶ್ ಚಂದ್ರ,ಪಪಂ ಸದಸ್ಯ ಹರೀಶ್ ಶೆಟ್ಟಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.26 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸಿಎಂ ರಾಜೀನಾಮೆಗೆ ಒತ್ತಾಯಿಸಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು.