ಜನರಿಗೆ ಭರವಸೆ ನೀಡುವುದು, ಅಧಿಕಾರಕ್ಕೆ ಬಂದ ನಂತರ ಆ ಭರವಸೆಗಳನ್ನು ಮರೆತು ಬಿಡುವುದು ಕಾಂಗ್ರೆಸ್ ಸರ್ಕಾರದ ಆಡಳಿತದ ವೈಖರಿಯಾಗಿದೆ. ರಾಜ್ಯದ ಜನರು ಇದೀಗ ಬೆಲೆ ಏರಿಕೆ, ತೆರಿಗೆ ಹೊರೆ, ರೈತರ ಸಂಕಷ್ಟ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ರೈತರು, ಆಶಾ ಕಾರ್ಯಕರ್ತೆಯರು, ಜನರು ಎದುರಿಸುತ್ತಿರುವ ಸಮಸ್ಯೆ ಪರಿಹರಿಸಿ, ಬೆಲೆ ಏರಿಕೆ ನಿಯಂತ್ರಿಸುವ ಜೊತೆಗೆ ಚುನಾವಣಾ ವೇಳೆ ನೀಡಿದ್ದ ಭರವಸೆ ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಎದುರು ಬಿಜೆಪಿ ತಾಲೂಕು ಅಧ್ಯಕ್ಷ ಪೀಹಳ್ಳಿ ರಮೇಶ್ ನೇತೃತ್ವದಲ್ಲಿ ಸೇರಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ನಂತರ ರಮೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಜನರಿಗೆ ನೂರಾರು ಭರವಸೆ ನೀಡಿ ಅಧಿಕಾರಕ್ಕೆ ಬಂದು, ಮೂರು ಮುಕ್ಕಾಲು ವರ್ಷ ಕಳೆದರೂ ರೈತರು, ಕಾರ್ಮಿಕರು, ಮಹಿಳೆಯರು, ಆಶಾ ಕಾರ್ಯಕರ್ತೆಯರು ಹಾಗೂ ಸಾಮಾನ್ಯ ಜನರ ಬದುಕಿನಲ್ಲಿ ನಿರೀಕ್ಷಿತ ಬದಲಾವಣೆ ಕಂಡುಬಂದಿಲ್ಲ ಎಂದು ದೂರಿದರು.

ಜನರಿಗೆ ಭರವಸೆ ನೀಡುವುದು, ಅಧಿಕಾರಕ್ಕೆ ಬಂದ ನಂತರ ಆ ಭರವಸೆಗಳನ್ನು ಮರೆತು ಬಿಡುವುದು ಕಾಂಗ್ರೆಸ್ ಸರ್ಕಾರದ ಆಡಳಿತದ ವೈಖರಿಯಾಗಿದೆ. ರಾಜ್ಯದ ಜನರು ಇದೀಗ ಬೆಲೆ ಏರಿಕೆ, ತೆರಿಗೆ ಹೊರೆ, ರೈತರ ಸಂಕಷ್ಟ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಈ ಕೂಡಲೇ ರೈತರ ಬರ ಪರಿಹಾರ ಬಿಡುಗಡೆ ಮಾಡಬೇಕು. ರೈತರಿಗೆ 2500 ಪರಿಹಾರ ನೀಡುವುದಾಗಿ ಘೋಷಿಸಬೇಕು. ರಾಜ್ಯದಲ್ಲಿ 3500 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ರೈತರ ಆತ್ಮಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ರಾಜ್ಯ ರೈತಮೋರ್ಚ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರ ಹಾಲಿನ ದರ, ವಿದ್ಯುತ್ ದರ, ಬಸ್ ಮತ್ತು ಮೆಟ್ರೋ ಪ್ರಯಾಣ ದರ ಏರಿಕೆ, ಹುಟ್ಟಿನಿಂದ ಸಾವಿನವರೆಗೂ ವಿಧಿಸುತ್ತಿರುವ ತೆರಿಗೆ ಹೊರೆ ನೀತಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಆಸ್ಪತ್ರೆಗಳ ಶುಲ್ಕ ಏರಿಕೆ ಹಿಂಪಡೆದು ಧಾರ್ಮಿಕ ಕ್ಷೇತ್ರಗಳ ಸೇವಾ ಶುಲ್ಕ ಹೆಚ್ಚಳ ಮರು ಪರಿಶೀಲಿಸಬೇಕು. ಜೊತೆಗೆ ಆಶಾ ಕಾರ್ಯಕರ್ತೆಯರಿಗೆ ನೀಡಿದ ಭರವಸೆ ಈಡೇರಿಸುವ ಮೂಲಕ ಈ ಹಿಂದೆ ಚುನಾವಣಾ ಪ್ರಣಾಳಿಕೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ 15 ಸಾವಿರ ರು. ಗೌರವಧನ ನೀಡುವ ಭರವಸೆ ಈಡೇರಿಸದ ಕಾರಣ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಕಿಡಿಕಾರಿದರು.

ರೈತರ ಕಣ್ಣೀರು ಒರೆಸಬೇಕಾದ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸದಿರುವುದು ವಿಷಾದನೀಯ. ಜನರ ಕಷ್ಟಗಳಿಗೆ ಆದ್ಯತೆ ನೀಡಬೇಕಾದ ಸರ್ಕಾರ ದುಬಾರಿ ಯೋಜನೆಗಳಿಗೆ ಆದ್ಯತೆ ನೀಡುತ್ತಿರುವುದು ಖಂಡಿಸಿ ಕೂಡಲೇ ಎಲ್ಲಾ ಬೇಡಿಕೆ ಗಂಭೀರವಾಗಿ ಪರಿಗಣಿಸಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಸೀಲ್ದಾರ್ ಚೇತನಾಯಾದವ್ ಅವರ ಮೂಲಕ ರಾಜ್ಯಪಾಲರು ಹಾಗೂ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಸುಧಾಕರ್, ಮುಖಂಡರಾದ ಬಿ.ಸಿ.ಕೃಷ್ಣೇಗೌಡ, ಉಮೇಶ್ ಕುಮಾರ್, ಮಂಜುನಾಥ, ಯತಿರಾಜು, ಮಹದೇವು, ಬಿ.ಸಿ ಸಂತೋಷ್ ಕುಮಾರ್, ಹೇಮಂತ್ ಕುಮಾರ, ಕಿರಣ್ ಸಿಂಗ್, ಉಂಡವಾಡಿ ಮಹದೇವು, ರಾಮಚಂದ್ರು, ಮಹಲಿಂಗು, ಮಹಿಳಾಧ್ಯಕ್ಷೆ ಮಾನಸ, ಜಯಲಕ್ಷ್ಮಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.