ಪಾಕಿಸ್ತಾನಿಗಳ ಗಡಿಪಾರಿಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

| Published : May 07 2025, 12:46 AM IST

ಸಾರಾಂಶ

ಹಿಂದೂಗಳನ್ನು ಗುರಿಯಾಗಿಸಿ ಪಹಲ್ಗಾಂನಲ್ಲಿ ನಡೆದ ಭೀಕರ ಉಗ್ರದಾಳಿ ಹಿನ್ನೆಲೆಯಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನ ವಿಚಾರದಲ್ಲಿ ಅತ್ಯಂತ ಕಠಿಣ ನಿರ್ಣಯಗಳನ್ನು ಕೈಗೊಂಡಿದ್ದು, ರಾಷ್ಟ್ರೀಯ ಭದ್ರತೆಯ ದೃಷ್ಠಿಯಿಂದ ಕೇಂದ್ರ ಗೃಹ ಸಚಿವಾಲಯ ಪಾಕಿಸ್ತಾನಿ ಪ್ರಜೆಗಳ ಗಡಿಪಾರಿಗೆ ಆಜ್ಞಾಪತ್ರ ಹೊರಡಿಸಿದ್ದು, ಕೂಡಲೇ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪ್ರಧಾನಿಗಳು ಭಾರತೀಯ ಸೇನಾ ಪಡೆಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಮುಕ್ತ ಅನುಮತಿ ನೀಡಿದ್ದಾರೆ. ನಮ್ಮ ಸೇನಾ ಪಡೆಗಳು ಉಗ್ರರನ್ನು ನಾಶ ಮಾಡೇ ತೀರುತ್ತವೆ ಎಂಬ ದೃಢ ವಿಶ್ವಾಸವಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಹಿಂದೂಗಳನ್ನು ಗುರಿಯಾಗಿಸಿ ಪಹಲ್ಗಾಂನಲ್ಲಿ ನಡೆದ ಭೀಕರ ಉಗ್ರದಾಳಿ ಹಿನ್ನೆಲೆಯಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನ ವಿಚಾರದಲ್ಲಿ ಅತ್ಯಂತ ಕಠಿಣ ನಿರ್ಣಯಗಳನ್ನು ಕೈಗೊಂಡಿದ್ದು, ರಾಷ್ಟ್ರೀಯ ಭದ್ರತೆಯ ದೃಷ್ಠಿಯಿಂದ ಕೇಂದ್ರ ಗೃಹ ಸಚಿವಾಲಯ ಪಾಕಿಸ್ತಾನಿ ಪ್ರಜೆಗಳ ಗಡಿಪಾರಿಗೆ ಆಜ್ಞಾಪತ್ರ ಹೊರಡಿಸಿದ್ದು, ಕೂಡಲೇ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್‌ ನಾಗೇಂದ್ರ ಮಾತನಾಡಿ, ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ನೆರವಿನಿಂದ ೨೬ ಜನ ಅಮಾಯಕ ಭಾರತೀಯ ಪ್ರಜೆಗಳನ್ನು ಉಗ್ರರು ಧರ್ಮವನ್ನು ಕೇಳಿ ತಿಳಿದು ಗುಂಡಿಕ್ಕಿ ಕೊಂದಿರುವುದನ್ನು ನೋಡಿ ಇಡೀ ದೇಶ ದಿಗ್ಬ್ರಾಂತವಾಗಿದೆ. ಈ ಅತ್ಯಂತ ದಾರುಣವಾದಂತಹ ದಾಳಿಯನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯಾದ ಐ.ಎಸ್.ಐ. ನೆರವಿನಿಂದ ಪಾಕಿಸ್ತಾನ ಸೇನೆ ಇಡೀ ದಾಳಿಯ ಯೋಜನೆಯನ್ನು ರೂಪಿಸಿ ಇಂತಹ ಬರ್ಬರ ಹತ್ಯಾಕಾಂಡವನ್ನು ಅರಗಿಸಿಕೊಳ್ಳಲಾಗದೆ ಇಡೀ ದೇಶ ಅತ್ಯಂತ ದೊಡ್ಡ ಆಘಾತಕ್ಕೊಳಗಾಗಿದೆ ಹಾಗೂ ಜಗತ್ತಿನ ಎಲ್ಲಾ ದೊಡ್ಡ ಶಕ್ತಿಶಾಲಿ ರಾಷ್ಟ್ರಗಳು ಭಾರತದ ಜೊತೆ ನಿಲ್ಲುವುದಾಗಿ ಘೋಷಿಸಿವೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಕುಕೃತ್ಯಕ್ಕೆ ಕಾರಣರಾದವರು ಯಾರೇ ಆಗಿರಲಿ, ಜಗತ್ತಿನ ಯಾವುದೇ ಮೂಲೆಯಲ್ಲಿ ಅಡಗಿ ಕುಳಿತಿದ್ದರೂ ಅವರನ್ನು ಹಾಗೂ ಅವರಿಗೆ ಪ್ರೇರಣೆ ನೀಡಿದವರ ರುಂಡವನ್ನು ಚೆಂಡಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಪ್ರಧಾನಿಗಳು ಭಾರತೀಯ ಸೇನಾ ಪಡೆಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಮುಕ್ತ ಅನುಮತಿ ನೀಡಿದ್ದಾರೆ. ನಮ್ಮ ಸೇನಾ ಪಡೆಗಳು ಉಗ್ರರನ್ನು ನಾಶ ಮಾಡೇ ತೀರುತ್ತವೆ ಎಂಬ ದೃಢ ವಿಶ್ವಾಸವಿದೆ ಎಂದರು.

ದೇಶದ ಇಡೀ ೧೪೦ ಕೋಟಿ ಜನರು ಪ್ರಧಾನ ಮಂತ್ರಿಗಳು ಹಾಗೂ ಸೇನಾ ಪಡೆಗಳ ಜೊತೆಗೆ ತೊಡೆತಟ್ಟಿ ನಿಂತಿದ್ದಾರೆ. ಈ ದುರ್ಘಟನೆಯ ನಂತರದಲ್ಲಿ ಕೇಂದ್ರ ಸರ್ಕಾರವು ಸಿಂಧೂ ನದಿ ನೀರಿನ ಒಪ್ಪಂದಕ್ಕೆ ಇತಿಶ್ರೀ ಹಾಡಿ ಐತಿಹಾಸಿಕ ನಿರ್ಣಯ ತೆಗೆದುಕೊಂಡಿರುವುದು ಮಾತ್ರವಲ್ಲದೇ ಪಾಕಿಸ್ತಾನದೊಂದಿಗಿನ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಿ ಹಾಗೂ ಪಾಕಿಸ್ತಾನಿ ಪ್ರಜೆಗಳಿಗೆ ಭಾರತಕ್ಕೆ ಬರುವ ವೀಸಾ ನಿಲ್ಲಿಸಿದೆ ಹಾಗೂ ನಿಯಮಿತ ಸಮಯದಲ್ಲಿ ಭಾರತರಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳು ಹಿಂತಿರುಗುವಂತೆ ಕಟ್ಟಾಜ್ಞೆ ಹೊರಡಿಸಿದೆ. ಪಾಕಿಸ್ತಾನಿ ಪ್ರಜೆಗಳಿಗೆ ಭಾರತದ ವೀಸಾ ವಿತರಣೆಯನ್ನು ಅಮಾನತ್ತಿನಲ್ಲಿಡಲಾಗಿದೆ. ಈ ನಿಟ್ಟಿನಲ್ಲಿ (ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ) ನಮ್ಮ ಜಿಲ್ಲೆಯಲ್ಲಿರುವ ಅಕ್ರಮವಾಗಿ ನೆಲೆಸುತ್ತಿರುವ ಪಾಕಿಸ್ತಾನಿಗಳು, ಅಧಿಕೃತ ದಾಖಲಾತಿಗಳಿಲ್ಲದೇ ರದ್ದಾಗಿರುವ ವೀಸಾಗಳು ಹಾಗೂ ಅಮಾನತ್ತಿನಲ್ಲಿರುವ ವೀಸಾಗಳನ್ನು ಹೊಂದಿಕೊಂಡು ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿಬೇಕೆಂದು ಮನವಿ ಮಾಡುತ್ತೇವೆ ಎಂದು ಹೇಳಿದರು. ಇದು ಅತ್ಯಂತ ಪ್ರಬಲವಾದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯ. ಹಾಗಾಗಿ ಅಂತಹ ವ್ಯಕ್ತಿಗಳನ್ನು ಪಟ್ಟಿಮಾಡಿ ಯಾವುದೇ ವಿಳಂಬ ಮಾಡದೇ ಈ ಕೂಡಲೇ ಎಲ್ಲಾ ಕಾನೂನುಬದ್ಧವಾದ ಕ್ರಮವನ್ನು ಈ ಕೂಡಲೇ ತೆಗೆದುಕೊಳ್ಳಬೇಕಾಗಿದೆ ಎಂದು ಕೋರಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಶೋಭನ್ ಬಾಬು, ಎಚ್.ಎನ್. ನಾಗೇಶ್, ಚನ್ನಕೇಶವ, ಹರ್ಷಿತ್, ವೇದಾವತಿ, ಬಿಜೆಪಿ ಸಂಘಟನಾ ಪರ್ವ ಜಿಲ್ಲಾ ಸಂಚಾಲಕ ರಾಜಕುಮಾರ್ ಇತರರು ಉಪಸ್ಥಿತರಿದ್ದರು.