ರೈತ ಸಂಕುಲ ಉಳಿವಿಗಾಗಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಕೂಡಲೇ ನೀರು ಹರಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕಾರಟಗಿ: ರೈತ ಸಂಕುಲ ಉಳಿವಿಗಾಗಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಕೂಡಲೇ ನೀರು ಹರಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ನವಲಿ ರಸ್ತೆಯಲ್ಲಿನ ಬಿಜೆಪಿ ಕಾರ್ಯಾಲಯದಿಂದ ಬಸ್ ನಿಲ್ದಾಣದ ವರೆಗೆ ಪಾದಯಾತ್ರೆ ಮೂಲಕ ಆಗಮಿಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು, ಎಡದಂಡೆ ನಾಲೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುಗಡೆ ಮಾಡಲೇಬೇಕು, ರಾಜ್ಯ ಸರ್ಕಾರ ರೈತರನ್ನು ನಿರ್ಲಕ್ಷ್ಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಘೊಷಣೆ ಕೂಗುತ್ತ ನವಲಿ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು, ಅಲ್ಲಿ ಕೆಲ ಹೊತ್ತು ರಸ್ತೆಯ ಮೇಲೆ ಕೂತು ಪ್ರತಿಭಟನೆ ನಡೆಸಿದರು.ಹೋರಾಟದ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಬಸವರಾಜ ದಢೇಸೂಗೂರು ಮಾತನಾಡಿ, ಈಗಾಗಲೇ ರಾಜ್ಯ ಸರ್ಕಾರ ಮತ್ತು ಜಿಲ್ಲೆಯ ಜನಪ್ರತಿನಿಧಿಗಳ ತಪ್ಪಿನಿಂದ ರೈತರು ಒಂದು ಬೆಳೆ ಕಳೆದುಕೊಂಡಿದ್ದಾರೆ. ಭತ್ತದ ಕಣಜದಲ್ಲಿ ಕೋಲಾಹಲ ಆಗುವ ಮುನ್ನವೇ ಕೂಡಲೇ ನೀರು ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.
ತುಂಗಭದ್ರಾ ಜಲಾಶಯದಲ್ಲಿ ಈಗಾಗಲೇ 80 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಆದರೆ, ಕಾಲುವೆಗಳಿಗೆ ಮಾತ್ರ ಇನ್ನೂ ನೀರು ಹರಿಸುವ ಬಗ್ಗೆ ನಿರ್ಧಾರ ಮಾಡದೆ ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆ. ನಮ್ಮ ಆಡಳಿತಾವಧಿಯಲ್ಲಿ ಜಲಾಶಯದಲ್ಲಿ 25ರಿಂದ 30 ಟಿಎಂಸಿ ನೀರು ಇದ್ದಾಗಲೇ ರೈತರಿಗೆ ತೊಂದರೆಯಾಗಬಾರದು ಎಂದು ನೀರು ಹರಿಸಿದ ಎಷ್ಟು ಉದಾಹರಣೆಗಳನ್ನು ಕೊಡಬೇಕು ಹೇಳಿ ನಿಮಗೆ ಎಂದರು.ಜಲಾಶಯದಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಇದ್ದರೂ ಕುಡಿಯಲು, ಆಂಧ್ರದ ಹೆಸರು ಹೇಳುತ್ತ ರೈತರ ಬದುಕಿನೊಂದಿಗೆ ಆಟವಾಡುತ್ತಿರುವ ನಿಮಗೆ ಒಳ್ಳೆಯದಾಗುವುದಿಲ್ಲ. ಕಳೆದ ಬಾರಿ ನೀರು ಇದ್ದಾಗಲೇ ಒಂದು ಬೆಳೆ ತಪ್ಪಿಸಿ ರೈತರ ಬದುಕನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿರುವ ನಿಮಗೆ ಅವರ ಶಾಪ ತಟ್ಟದೇ ಇರದು. ರೈತರಿಗೆ ಯಾವ ಸಮಯದಲ್ಲಿ ನೀರು ಹರಿಸಬೇಕು ಎನ್ನುವ ಕನಿಷ್ಠ ಜ್ಞಾನವಿಲ್ಲದೇ, ಅವರ ಬದುಕಿನೊಂದಿಗೆ ಚೆಲ್ಲಾಟವಾಟಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಳಂಬ ಧೋರಣೆ ಕೈಬಿಟ್ಟು ನಾಳೆಯಿಂದಲೇ ನೀರು ಹರಿಸಿದರೆ ಸರಿ, ಇಲ್ಲದಿದ್ದರೆ, ನಮ್ಮ ಪಕ್ಷವು ನಿಮ್ಮ ವಿರುದ್ಧ ಬೀದಿಗಿಳಿದು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಬಿಜೆಪಿಯ ಮುಖಂಡ, ಹೋರಾಟಗಾರ ತಿಪ್ಪೇರುದ್ರಸ್ವಾಮಿ, ಎಚ್. ಗಿರೇಗೌಡ, ಎಚ್. ದುರ್ಗಾರಾವ್, ರಮೇಶ ನಾಡಿಗೇರ್, ಅಶೋಕ ಗುಳದಳ್ಳಿ, ನಾಗರಾಜ್ ಬಿಲ್ಗಾರ್, ಮಂಜುನಾಥ್ ಮಸ್ಕಿ, ಪಂಪನಗೌಡ ಜಂತಗಲ್ ಮಾತನಾಡಿದರು.ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬರೆದ ಮನವಿಯನ್ನು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಲಾಯಿತು.
ಉದ್ಯಮಿ ಜಿ. ತಿಮ್ಮನಗೌಡ, ಚಂದ್ರಶೇಖರ ಮುಸಾಲಿ, ಎ. ರಾಮರಾವ್, ಉಮೇಶ್ ಸಜ್ಜನ್, ಬಿ. ಕಾಶಿ ವಿಶ್ವನಾಥ, ಚಂದ್ರಶೇಖರ ಬೆನ್ನೂರು, ರತ್ನಕುಮಾರಿ, ಶಾಂತಾ ಪವಾರ್, ಮೌನೇಶ್ ದಢೇಸೂಗೂರು, ಬಸವರಾಜ ಎತ್ತಿನಮನಿ, ಶರಣಬಸವ ರೆಡ್ಡಿ, ವಿಕ್ರಮ್ ಮೇಟಿ, ದೇವರಾಜ ನಾಯಕ, ಶರಣಪ್ಪ ನಾಗೋಜಿ, ಶರಣಪ್ಪ ಶಿವಪೂಜಿ, ಸುರೇಶ ಚಳ್ಳೂರು, ದುರುಗೇಶ್ ಹೊಸಕೇರಾ ಇದ್ದರು.