ಸಾರಾಂಶ
ಹಾವೇರಿ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪಾಸಿಕ್ಯೂಶನ್‌ಗೆ ಅವಕಾಶ ನೀಡಿರುವುದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಮಂಗಳವಾರ ಸಂಜೆ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕೆಲಕಾಲ ರಸ್ತೆತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ, ರಾಜ್ಯಪಾಲರ ಅನುಮತಿ ಧಿಕ್ಕರಿಸಿ ಕೋರ್ಟ್‌ಗೆ ಹೋಗಿ ಸಿಎಂ ಸಿದ್ದರಾಮಯ್ಯ ಬಂಡತನ ಪ್ರದರ್ಶನ ಮಾಡಿದ್ದಾರೆ. ಹೈಕೋರ್ಟ್‌ನಲ್ಲಿ ಈಗ ಮುಖಭಂಗ ಆಗಿದೆ. ಹಾವೇರಿಯಿಂದ ಬೆಂಗಳೂರಿನ ವಿಧಾನಸೌಧವರೆಗೆ ಪಾದಯಾತ್ರೆ ನಡೆಸಿ ಮುತ್ತಿಗೆ ಹಾಕುತ್ತೇವೆ. ಕಪ್ಪುಚುಕ್ಕೆ ಇಲ್ಲದೆ ಆಡಳಿತ ನಡೆಸಿದ್ದೇನೆ ಎಂದು ಬೆನ್ನು ತಟ್ಟಿಕೊಂಡು, ಕಾನೂನಿಗೆ ಗೌರವ ಕೊಡುವುದಾದರೆ ಗೌರವಯುತವಾಗಿ ರಾಜೀನಾಮೆ ನೀಡಿ ಮನೆಗೆ ಹೋಗಬೇಕು. ರಾಜ್ಯ ಕಂಡ ಭ್ರಷ್ಟ, ನೀಚ ಮುಖ್ಯಮಂತ್ರಿ ಆಗಿದ್ದಾರೆ. ಅಹಿಂದ ಸಮಾಜಕ್ಕೆ ಗೌರವ ತರುವ ಕೆಲಸ ಮಾಡದೆ, ಅಗೌರವ ತೋರಿದ್ದಾರೆ. ಡಿಕೆಶಿ ನಿಮ್ಮ ಪರ ಇಲ್ಲ, ನಿಮ್ಮಿಂದ ರಾಜೀನಾಮೆ ಕೊಡಿಸಿ ಸಿಎಂ ಆಗಲು ಹೊರಟಿದ್ದಾರೆ ಎಂದರು. ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಮುಡಾ ವಿಚಾರದಲ್ಲಿ ರಾಜ್ಯಪಾಲರು ತೆಗೆದುಕೊಂಡಿರುವ ತೀರ್ಮಾನ ಸರಿಯಾಗಿದೆ ಎಂದು ಹೈಕೋರ್ಟ್ ತನಿಖೆಗೆ ಆದೇಶ ನೀಡಿದ್ದು ಸ್ವಾಗತಾರ್ಹ. ಸಿಎಂ ಸಿದ್ದರಾಮಯ್ಯಗೆ ಪ್ರಾಮಾಣಿಕತೆ ಇದ್ದರೆ ರಾಜೀನಾಮೆ ಕೊಡಬೇಕು. ದುರಹಂಕಾರಿ ಸಿಎಂ ಅನೇಕ ಹಗರಣದಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯ ಕಂಡ ಅತ್ಯಂತ ಭ್ರಷ್ಟ ಮುಖ್ಯಮಂತ್ರಿಯಾಗಿದ್ದಾರೆ. ಅಹಿಂದ, ಜಾತ್ಯತೀತ ನಾಯಕ ಎಂದು ಸೋಗಲಾಡಿತನ ಪ್ರದರ್ಶನ ಮಾಡಿದ್ದಾರೆ. ಕೇವಲ ೧೬ ತಿಂಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಯಾಗಿಲ್ಲ. ಗ್ಯಾರಂಟಿ ಹೆಸರಲ್ಲಿ ಜನರಿಗೆ ಮೋಸ ಮಾಡಿ, ರೈತರು, ಬಡವರ ಬಗ್ಗೆ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ ಎಂದು ಕಿಡಿಕಾರಿದರು. ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಎಸ್ಸಿ, ಎಸ್ಟಿ ಅನುದಾನ ವರ್ಗಾವಣೆ, ವಾಲ್ಮೀಕಿ ಹಗರಣ, ಮೂಡ ಹಗರಣ ಹೀಗೆ ಒಂದಿಲ್ಲೊಂದು ಹಗರಣದ ಸರಮಾಲೆಯಲ್ಲಿ ತಳುಕು ಹಾಕಿಕೊಂಡಿರುವ ಕಾಂಗ್ರೆಸ್ ಸರ್ಕಾರದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಹೈಕೋರ್ಟ್ ತೀರ್ಪು ಸ್ವಾಗತಿಸುತ್ತೇನೆ. ಸಿಎಂಗೆ ಆತ್ಮಸಾಕ್ಷಿ, ನೈತಿಕತೆ ಎಂಬುದು ಇದ್ದರೇ ರಾಜೀನಾಮೆ ನೀಡಿ, ಮತ್ತೊಮ್ಮೆ ಚುನಾವಣೆ ಎದುರಿಸಲಿ ಎಂದರು.ರಾಜ್ಯ ಉಪಾಧ್ಯಕ್ಷ ಡಾ.ಬಸವರಾಜ ಕೆಲಗಾರ, ಮಾಜಿ ಜಿಪಂ ಸದಸ್ಯ ಸಿದ್ದರಾಜ ಕಲಕೋಟಿ, ಎನ್.ಎಂ. ಈಟೇರ ಮಾತನಾಡಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಂಜುಂಡೇಶ ಕಳ್ಳೇರ, ಸಂತೋಷ ಆಲದಕಟ್ಟಿ, ಜಗದೀಶ ಮಲಗೋಡ, ನೀಲಪ್ಪ ಚಾವಡಿ, ವಿಜಯಕುಮಾರ ಚಿನ್ನಿಕಟ್ಟಿ, ಕಿರಣ ಕೋಣನವರ, ಪ್ರಭು ಹಿಟ್ನಳ್ಳಿ, ಲಲಿತಾ ಗುಂಡೇನಹಳ್ಳಿ, ಚೆನ್ನಮ್ಮ ಬ್ಯಾಡಗಿ, ಕಲ್ಯಾಣಕುಮಾರ ಶೆಟ್ಟರ, ವೀರಣ್ಣ ಅಂಗಡಿ, ಸುರೇಶ ಹೊಸಮನಿ, ಅಶೋಕ ಹಾವೇರಿ, ಮಹೇಶ ಕಮಡೊಳ್ಳಿ, ರಮೇಶ ಗುತ್ತಲ, ಜಗದೀಶ ಕನವಳ್ಳಿ, ವಿದ್ಯಾ ಶೆಟ್ಟಿ, ಶಿವಯೋಗಿ ಶಿರೂರ, ವೆಂಕಟೇಶ ನಾರಾಯಣಿ, ಪ್ರಕಾಶ ಉಜ್ಜಿನಿಕೊಪ್ಪ, ಗುಡ್ಡಪ್ಪ ಭರಡಿ, ಅಭಿಷೇಕ ಗುಡಗೂರ ಮೊದಲಾದವರು ಇದ್ದರು.