ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಚಾಮರಾಜನಗರದಲ್ಲಿ ಬಿಜೆಪಿ ಪ್ರತಿಭಟನೆ

| Published : Sep 14 2024, 01:53 AM IST

ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಚಾಮರಾಜನಗರದಲ್ಲಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿ ನಗರದಲ್ಲಿ ಜಿಲ್ಲಾ ಬಿಜೆಪಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಮೋರ್ಚಾ ವತಿಯಿಂದ ಕಾಂಗ್ರೆಸ್ ಹಠಾವೋ ಮೀಸಲಾತಿ ಬಚಾವೋ ಎಂಬ ಘೋಷಣೆ ಕೂಗುತ್ತಾ ಚಾಮರಾನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಾವು ಅಧಿಕಾರಕ್ಕೆ ಬಂದರೆ ಸೂಕ್ತ ಕಾಲದಲ್ಲಿ ಮೀಸಲಾತಿಯನ್ನು ರದ್ದುಪಡಿಸುತ್ತೇವೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿ ನಗರದಲ್ಲಿ ಜಿಲ್ಲಾ ಬಿಜೆಪಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಮೋರ್ಚಾ ವತಿಯಿಂದ ಕಾಂಗ್ರೆಸ್ ಹಠಾವೋ ಮೀಸಲಾತಿ ಬಚಾವೋ ಎಂಬ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಲಾಯಿತು.ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಅಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ ಮಾನವ ಸರಪಳಿ ನಡೆಸಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹಾಗೂ ಕಾಂಗ್ರೆಸ್ ಹಠಾವೋ ಮೀಸಲಾತಿ ಬಚಾವೋ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಜಿ ಸಚಿವ ಎನ್. ಮಹೇಶ್ ಮಾತನಾಡಿ, ನಿಜವಾದ ಮೀಸಲಾತಿ ಹಾಗೂ ಸಂವಿಧಾನ ವಿರೋಧಿಗಳು ಕಾಂಗ್ರೆಸ್‌ನವರು ಎಂಬುದನ್ನು ಅಮೇರಿಕಾದಲ್ಲಿ ರಾಹುಲ್ ಗಾಂಧಿ ಹೇಳಿಕೆ ನೀಡುವ ಮೂಲಕ ಸಾಬೀತುಪಡಿಸಿದ್ದಾರೆ ಎಂದರು.ಅಮೇರಿಕಾ ಪ್ರವಾಸಲ್ಲಿರುವ ರಾಹುಲ್‌ಗಾಂಧಿ ಅವರು ಜಾರ್ಜ್‌ಟೌನ್ ವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿರುವ ಸಂವಾದದಲ್ಲಿ ಭಾರತದಲ್ಲಿರುವ ಮೀಸಲಾತಿ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷವೇ ಮೀಸಲಾತಿಯನ್ನು ತೆಗೆಯಲು ಸಾಧ್ಯ ಎಂಬ ಹೇಳಿಕೆಯನ್ನು ನೀಡಿರುವುದು ದುರದೃಷ್ಟಕರ ಎಂದರು. ಕಾಂಗ್ರೆಸ್ ಪಕ್ಷ ನಾವು ಮೀಸಲಾತಿ ಪರ ಹಾಗೂ ಸಂವಿಧಾನ ರಕ್ಷಕರು ಎಂದು ಹೇಳಿಕೊಂಡು ಆ ವರ್ಗಗಳ ಮತಗಳನ್ನು ಪಡೆದು ಅನ್ಯಾಯ ಮಾಡುತ್ತಾಲೇ ಬಂದಿದೆ ಎಂದರು. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವ ಹಾಗೂ ನಂತರವು ಸಹ ಮೀಸಲಾತಿ ವಿರುದ್ಧವಾಗಿತ್ತು. ಗಾಂಧೀಜಿ ಹಾಗೂ ಜವಾಹರಲಾಲ್‌ ನೆಹರು ಮೀಸಲಾತಿ ನೀಡುವುದನ್ನು ವಿರೋಧಿಸುತ್ತಿದ್ದರು. ಅಂಬೇಡ್ಕರ್ ಅವರ ಆಶಯದ ವಿರುದ್ಧವಾಗಿದ್ದವರು ಎಂದರು.

ಹಿಂದಿನಿಂದಲೂ ಕಾಂಗ್ರೆಸ್ ಪಕ್ಷ ಮೀಸಲಾತಿ ವಿರುದ್ಧದ ನಿಲವು ಹೊಂದಿದೆ. ಸಂವಿಧಾನದಲ್ಲಿ ಅಡಕವಾಗಿರುವ ಶೈಕ್ಷಣಿಕ, ಉದ್ಯೋಗ, ರಾಜಕೀಯ ಮೀಸಲಾತಿಯನ್ನು ರಾಹುಲ್ ಗಾಂಧಿ ಅಲ್ಲ ಅವರ ಅಪ್ಪ ಬಂದರೂ ಸಹ ಸಂವಿಧಾನದತ್ತವಾಗಿ ನೀಡಿರುವ ಮೀಸಲಾತಿಯನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಇಂತಹ ಹೇಳಿಕೆ ನೀಡಿರುವ ರಾಹುಲ್ ಗಾಂಧೀ ಅವರ ಸಂಸತ್ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್ ಗಾಂಧಿ ಸಮರ್ಥಿಕೊಳ್ಳುವ ಮೂಲಕ ಮೀಸಲಾತಿ ವಿರೋಧಿಯಾಗಿದ್ದಾರೆ, ಒಳ ಮೀಸಲಾತಿ ಬಗ್ಗೆ ನಿಮ್ಮ ನಿಲುವೇನು ಎಂದು ಪ್ರಶ್ನಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಜನಧ್ವನಿ ವೆಂಕಟೇಶ್, ಅರಕಲವಾಡಿ ನಾಗೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಮಹದೇವಸ್ವಾಮಿ, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರಶೇಖರ್, ವಿರಾಟ್ ಶಿವು, ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಮಾಂಬಳ್ಳಿ ಮೂಡಹಳ್ಳಿ ಮೂರ್ತಿ, ಆರ್. ಪುಟ್ಟಮಲ್ಲಪ್ಪ, ಸೂರ್ಯ, ಅನಂದ್ ಭಗೀರಥ, ರಾಮಣ್ಣ, ಅಗರರಾಜು, ಗೋಪಾಲ ಕೃಷ್ಣ, ಪಿ. ರಂಗಸ್ವಾಮಿ ಮಂಜುನಾಥ್ ಇತರರು ಭಾಗವಹಿಸಿದ್ದರು.

೧೩ಸಿಎಚ್‌ಎನ್ ೧ ಮತ್ತು ೨ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿ ನಗರದಲ್ಲಿ ಜಿಲ್ಲಾ ಬಿಜೆಪಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಮೋರ್ಚಾ ವತಿಯಿಂದ ಕಾಂಗ್ರೆಸ್ ಹಠಾವೋ ಮೀಸಲಾತಿ ಬಚಾವೋ ಎಂಬ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಲಾಯಿತು.