ವಾಲ್ಮೀಕಿ ಅಭಿವೃದ್ಧಿ ನಿಗಮ ಭ್ರಷ್ಟಾಚಾರ ವಿರುದ್ಧ ಹಾಸನದಲ್ಲಿ ಬಿಜೆಪಿ ಪ್ರತಿಭಟನೆ

| Published : Jun 29 2024, 12:36 AM IST

ವಾಲ್ಮೀಕಿ ಅಭಿವೃದ್ಧಿ ನಿಗಮ ಭ್ರಷ್ಟಾಚಾರ ವಿರುದ್ಧ ಹಾಸನದಲ್ಲಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಸಂಬಂಧ ಮತ್ತು ಭ್ರಷ್ಟಾಚಾರಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ, ಭಾಗಿಯಾಗಿರುವ ಆರೋಪ ಹೊತ್ತ ಸಚಿವ ಶರಣ ಪ್ರಕಾಶ್ ಪಾಟೀಲ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಹಾಸನದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲ ಅವರಿಗೆ ಮನವಿ ಸಲ್ಲಿಸಿದರು.

187 ಕೋಟಿ ರು. ಅವ್ಯವಹಾರ ಆರೋಪ । ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹ । ಪ್ರತಿಭಟನಾ ಮೆರವಣಿಗೆ । ಎಡಿಸಿಗೆ ಮನವಿ

ಕನ್ನಡಪ್ರಭ ವಾರ್ತೆ ಹಾಸನ

ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಸಂಬಂಧ ಮತ್ತು ಭ್ರಷ್ಟಾಚಾರಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ, ಭಾಗಿಯಾಗಿರುವ ಆರೋಪ ಹೊತ್ತ ಸಚಿವ ಶರಣ ಪ್ರಕಾಶ್ ಪಾಟೀಲ್ ಮತ್ತು ನಿಗಮದ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲ ಅವರಿಗೆ ಮನವಿ ಸಲ್ಲಿಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್‌.ವೃತ್ತದಲ್ಲಿ ಕೆಲ ಸಮಯ ಮಾನವ ಸರಪಳಿ ನಿರ್ಮಿಸಿ ನಂತರ ಬಿ.ಎಂ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು. ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾಧ್ಯಮದೊಂದಿಗೆ ಮಾತನಾಡಿ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸುಮಾರು 187 ಕೋಟಿ ರು. ಭಾರಿ ಮೊತ್ತದ ಭ್ರಷ್ಟಾಚಾರ ನಡೆದಿದೆ. ಈ ಸಂಬಂಧ ಮುಖ್ಯಮಂತ್ರಿ, ಭಾಗಿಯಾಗಿರುವ ಆರೋಪ ಹೊತ್ತ ಸಚಿವ ಶರಣ ಪ್ರಕಾಶ್ ಪಾಟೀಲ್ ಮತ್ತು ನಿಗಮದ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಪರಿಶಿಷ್ಟ ಪಂಗಡಗಳ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರು. ಮೊತ್ತದ ಬೃಹತ್ ಹಗರಣದಲ್ಲಿ ಭಾಗಿಯಾದ ಕಾಂಗ್ರೆಸ್ ಸರ್ಕಾರ ಮತ್ತು ಹಣಕಾಸು ಇಲಾಖೆಯ ಜವಾಬ್ದಾರಿ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ವಿರುದ್ಧ ಈಗಾಗಲೇ ಎಸ್‌ಟಿ ಮೋರ್ಚಾ ರಾಜ್ಯಾದ್ಯಂತ ಹೋರಾಟ ಮಾಡುತ್ತಿದೆ. 187 ಕೋಟಿ ರು. ಹಣದಲ್ಲಿ ಬಹಳಷ್ಟು ಮೊತ್ತ ದುರ್ಬಳಕೆ ಆಗಿದೆ. 89 ಕೋಟಿ ರು. ಹಣವನ್ನು ಲೀಲಾಜಾಲವಾಗಿ ಬಳಸಿಕೊಂಡಿದ್ದಾರೆ. 700ಕ್ಕೂ ಅಧಿಕ ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ಮೂಲಕ ಹಣ ದುರ್ಬಳಕೆ ಆಗಿದೆ. ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ದಾವಣಗೆರೆ, ತೆಲಂಗಾಣದ ಹೈದರಾಬಾದ್ ಗಳಲ್ಲಿ ಖಾತೆ ತೆರೆಯಲಾಗಿತ್ತು ಎಂಬುದು ಇಲ್ಲಿ ಗಮನಾರ್ಹ ಅಂಶವಾಗಿದೆ ಎಂದು ದೂರಿದರು.

‘ಕೂಲಿ ಕಾರ್ಮಿಕರು, ದನ, ಎಮ್ಮೆ ಕಾಯುವ ಅಮಾಯಕ ವ್ಯಕ್ತಿಗಳಿಗೆ 2 ಲಕ್ಷ ರು.ನಿಂದ 5 ಲಕ್ಷ ರು.ವರೆಗೆ ಹಣ ಹಾಕಿ ವಿತ್ ಡ್ರಾ ಮಾಡಿ ಲೋಕಸಭಾ ಚುನಾವಣೆ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಗೆ ಬಳಸಿಕೊಂಡ ಮಾಹಿತಿ ಇದೆ. ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ತಮ್ಮ ಸಹಿ ಅಲ್ಲ ಎಂದು ಹೇಳಿದ್ದಾರೆ. ಆದರೆ ಅದು ಅವರದೇ ಸಹಿ ಎಂದು ಬ್ಯಾಂಕ್‌ನವರು ಹೇಳಿದ್ದಾರೆ. ಇದರಲ್ಲಿ ಯಾವುದು ಸತ್ಯ ಎಂಬುದು ಪತ್ತೆ ಆಗಬೇಕಿದೆ’ ಎಂದು ಒತ್ತಾಯಿಸಿದರು.

‘ಬೇರೊಂದು ಬ್ಯಾಂಕ್‌ನಲ್ಲಿ ಖಾತೆ ತೆರೆದಾಗ ಆರ್ಥಿಕ ಇಲಾಖೆ ಗಮನಕ್ಕೆ ಯಾಕೆ ಬರಲಿಲ್ಲ? ಸ್ವತಃ ಹಣಕಾಸು ಇಲಾಖೆ ಜವಾಬ್ದಾರಿ ನಿರ್ವಹಿಸುವ ಸಿದ್ದರಾಮಯ್ಯನವರು ಇದಕ್ಕೆ ಹೊಣೆಗಾರರಲ್ಲವೇ? ಆ ಹಣವನ್ನು ಮರು ವರ್ಗಾವಣೆ ಮಾಡಿಸಿದ ವ್ಯಕ್ತಿಗಳು ಯಾರ್ಯಾರು? ಯಾಕೆ ಅವರನ್ನು ಬಂಧಿಸಿಲ್ಲ? ಅವರನ್ನು ಯಾಕೆ ತನಿಖೆಗೆ ಒಳಪಡಿಸಿಲ್ಲ ಎಂಬ ಪ್ರಶ್ನೆಗಳಿಗೂ ಉತ್ತರ ಸಿಗಬೇಕಿದೆ. ಇದು ಬಹು ರಾಜ್ಯಗಳ ಹಗರಣವಾಗಿರುವ ಕಾರಣ ಸಮಗ್ರ ತನಿಖೆಯನ್ನು ಸಿಬಿಐ ನಡೆಸಬೇಕು ಎಂಬ ಹಕ್ಕೊತ್ತಾಯ ನಮ್ಮದು. ಈ ವಿಷಯಗಳನ್ನು ತಮ್ಮ ಅವಗಾಹನೆಗೆ ತರುತ್ತಿದ್ದು, ಹಗರಣದಲ್ಲಿ ಸಂಬಂಧಿತರ ರಾಜೀನಾಮೆಗೆ ಮತ್ತು ಸಿಬಿಐ ತನಿಖೆಗೆ ಆಗ್ರಹಿಸುತ್ತಿದ್ದೇವೆ’ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮೀತ್ ಶೆಟ್ಟಿ, ಯುವ ಮೋರ್ಚಾದ ಬಿ.ಎಚ್.ನಾರಾಯಣಗೌಡ, ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್, ಪಕ್ಷದ ಮುಖಂಡರಾದ ಶೋಭನ್ ಬಾಬು, ಚನ್ನಕೇಶವ, ಪ್ರೀತಿವರ್ಧನ್, ವೇದವತಿ, ವಿಜಯಲಕ್ಷ್ಮಿ, ರತ್ನಪ್ರಕಾಶ್, ವಕೀಲ ಶ್ರೀಕಾಂತ್, ಹರ್ಷಿತ್, ಮೋಹನ್, ಜಗದೀಶ್ ಇತರರು ಇದ್ದರು.