ಸಿಎಂ ರಾಜಿನಾಮೆ ನೀಡಿ ಸಿಬಿಐ ತನಿಖೆ ಎದುರಿಸಲು ಆಗ್ರಹಿಸಿ ಮಂಗಳೂರಲ್ಲಿ ಬಿಜೆಪಿ ಪ್ರತಿಭಟನೆ

| Published : Sep 25 2024, 12:46 AM IST

ಸಿಎಂ ರಾಜಿನಾಮೆ ನೀಡಿ ಸಿಬಿಐ ತನಿಖೆ ಎದುರಿಸಲು ಆಗ್ರಹಿಸಿ ಮಂಗಳೂರಲ್ಲಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ಮೂಡಾ ಹಗರಣದಲ್ಲಿ ರಾಜ್ಯಪಾಲರ ತನಿಖೆ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜಿನಾಮೆ ನೀಡಿ ಸಿಬಿಐ ತನಿಖೆ ಎದುರಿಸಬೇಕು. ತಪ್ಪಿದಲ್ಲಿ ಬಿಜೆಪಿ ರಸ್ತೆಗಿಳಿದು ಹೋರಾಟ ನಡೆಸಲಿದೆ ಎಂದು ದ.ಕ.ಜಿಲ್ಲೆಯ ಬಿಜೆಪಿ ಶಾಸಕರು ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿ ಎದುರು ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಬೆಳ್ತಂಗಡಿ ಶಾಸಕ ಹಾಗೂ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್‌ ಪೂಂಜಾ, ಇಂತಹ ಆರೋಪ ಬಂದಾಗ ಬೇರೆಯವರಿಗೆ ರಾಜಿನಾಮೆ ನೀಡಿ ಎನ್ನುವ ಸಿಎಂ ಸಿದ್ದರಾಮಯ್ಯ, ತನ್ನ ವಿರುದ್ಧ ಆರೋಪ ಬಂದಾಗ ನಾನು ಯಾಕೆ ರಾಜಿನಾಮೆ ನೀಡಬೇಕು ಎಂದು ಉಡಾಫೆಯಿಂದ ವರ್ತಿಸುತ್ತಿದ್ದಾರೆ. ರಾಜ್ಯಪಾಲರ ಪ್ರಾಸಿಕ್ಯೂಷನ್‌ ಅನುಮತಿಯನ್ನು ಹೈಕೋರ್ಟ್‌ ಎತ್ತಿಹಿಡಿದಿರುವುದರಿಂದ ಸಿಎಂ ಅಧೀನದ ಲೋಕಾಯುಕ್ತ ಬದಲು ಸಿಬಿಐ ತನಿಖೆ ಎದುರಿಸಬೇಕು ಎಂದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಮಾತನಾಡಿ, ಕಪ್ಪು ಚುಕ್ಕಿ ಇಲ್ಲದ ರಾಜಕಾರಣಿ ಎನ್ನುತ್ತಿದ್ದ ಸಿದ್ದರಾಮಯ್ಯ ಅವರು ಈಗ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದರೂ ರಾಜಿನಾಮೆ ನೀಡದೆ ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ. ಸಿಎಂ ಹಾಗೂ ಸರ್ಕಾರ ಹಗರಣಗಳಲ್ಲಿ ನಲುಗಿದೆ. ಸಿಎಂ ಸ್ಥಾನದ ಬಗ್ಗೆ ಗೌರವ ಇದ್ದರೆ ಕೂಡಲೇ ರಾಜಿನಾಮೆ ನೀಡಿ ಎಂದು ಆಗ್ರಹಿಸಿದರು.

ಸುಳ್ಯ ಶಾಸಕಿ ಭಾಗೀರಥಿ ಮಾತನಾಡಿ, ಪ್ರಾಮಾಣಿಕ ರಾಜಕಾರಣಿಯಾಗಿದ್ದರೆ, ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ತಕ್ಷಣವೇ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಮಂಗಳೂರು ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ, ವಿನಾ ಕಾರಣ ವಿಪಕ್ಷದ ಶಾಸಕರ ಮೇಲೆ ಕೇಸು ದಾಖಲಿಸುತ್ತಿರುವ ಸಿದ್ದರಾಮಯ್ಯ ಅವರು ತಾನು ಭ್ರಷ್ಟಾಚಾರ ಆರೋಪಕ್ಕೆ ಒಳಗಾದರೂ ಸುಮ್ಮನಿರುವುದು ಹಾಸ್ಯಾಸ್ಪದ. ಈ ಕೂಡಲೇ ರಾಜಿನಾಮೆ ನೀಡಿ ತನಿಖೆ ಎದುರಿಸಲಿ ಎಂದರು.

ಈ ಸಂದರ್ಭ ಮೇಯರ್‌ ಮನೋಜ್‌ ಕುಮಾರ್‌, ಉಪ ಮೇಯರ್‌ ಭಾನುಮತಿ, ಮಾಜಿ ಮೇಯರ್‌ ಸುಧೀರ್‌ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ಮುಖಂಡರಾದ ರವೀಂದ್ರ ಶೆಟ್ಟಿ, ಯತೀಶ್ ಆರ್ವಾರ್‌, ಜಗದೀಶ್‌ ಶೇಣವ, ಶಕೀಲಾ ಕಾವ, ಪೂಜಾ ಪೈ, ದಿವಾಕರ್‌ ಪಾಂಡೇಶ್ವರ, ಡಾ.ಮಂಜುಳಾ ರಾವ್‌, ಮಹೇಶ್‌ ಜೋಗಿ, ಸಂದೇಶ್‌ ಶೆಟ್ಟಿ, ನಂದನ್‌ ಮಲ್ಯ ಮತ್ತಿತರರಿದ್ದರು.

ಸಿಎಂ ಸಿದ್ದರಾಮಯ್ಯ ರಾಜಿನಾಮೆ ನೀಡುವಂತೆ ಪ್ರತಿಭಟನಾಕಾರರು ಘೋಷಣೆ ಕೂಗಿದರು.