ಗೊಂದಲ ಸೃಷ್ಟಿಸಲೆಂದೇ ಬಿಜೆಪಿ ಪ್ರತಿಭಟನೆ

| Published : Nov 05 2024, 01:39 AM IST

ಸಾರಾಂಶ

ಕೊಪ್ಪ: ವಕ್ಫ್ ವಿಚಾರಕ್ಕೆ ಸಂಬಂಧಿಸಿದಂತೆ ನೋಟಿಸ್‌ ನೀಡಿದ ವಿಚಾರ ತಿಳಿದ ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೋಟಿಸ್ ಹಿಂಪಡೆಯುವಂತೆಯೂ ಪಹಣಿಯಲ್ಲಿ ತಿದ್ದುಪಡಿ ಆಗಿದ್ದಲ್ಲಿ ರದ್ದು ಮಾಡುವಂತೆಯೂ, ರೈತರಿಗೆ ಯಾವುದೇ ರೀತಿಯ ತೊಂದರೆ ನೀಡದಂತೆಯೂ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಹೀಗಿದ್ದೂ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್.ರವೀಂದ್ರ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೪ರಲ್ಲಿ ಪ್ರಧಾನಿ ಮೋದಿಯವರು ೫೨ ಪುಟಗಳ ಪ್ರಣಾಳಿಕೆಯನ್ನು ನೀಡಿದ್ದರು. ಅದರಲ್ಲಿ ೧೭ನೇ ಪ್ರಣಾಳಿಕೆ ಅಲ್ಪಸಂಖ್ಯಾತರು ಮತ್ತು ಸಮಾನ ಅವಕಾಶ ಎಂಬ ಕಲಂ ಅಡಿಯಲ್ಲಿ ವಕ್ಫ್ ಆಸ್ತಿಯ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಇದರಲ್ಲಿ ಧಾರ್ಮಿಕ ಮಂಡಳಿಯವರ ಸಮ್ಮುಖದಲ್ಲಿ ಚರ್ಚಿಸಿ ವಕ್ಫ್ ಆಸ್ತಿಗಳ ಅತಿಕ್ರಮಣಗಳನ್ನು ಮತ್ತು ಸಮಸ್ಯೆಗಳನ್ನ ಬಗೆಹರಿಸುತ್ತೇವೆ ಎಂದು ಹೇಳಿತ್ತು. ಬಿಜೆಪಿಯ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ, ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗಲು ವಕ್ಫ್‌ ಬೋರ್ಡ್ನಿಂದ ನೋಟಿಸ್ ನೀಡಿತ್ತು. ಆದರೆ ಸಮಸ್ಯೆ ಬಗೆಹರಿಸಿಲ್ಲ. ಬಿಜೆಪಿ ಈಗ ರಾಜಕಾರಣ ಮಾಡಲು ಗೊಂದಲ ಸೃಷ್ಟಿಸಲು ಚಳುವಳಿ ಪ್ರತಿಭಟನೆ ನಡೆಸುತ್ತಿರುವುದು ದುರಾದೃಷ್ಟಕರ ಎಂದರು.ಬ್ಲಾಕ್ ಕಾಂಗ್ರೆಸ್ ವಕ್ತಾರ ನವೀನ್ ಕರುವಾನೆ ಮಾತನಾಡಿ, ಬಸವರಾಜ್ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಾಗ ಮುಸ್ಲಿಮರನ್ನು ಉದ್ದೇಶಿಸಿ ವಕ್ಫ್ ಬೋರ್ಡಿನ ಆಸ್ತಿ ಮರಳಿ ಬರುವವರೆಗು ಮುಸ್ಲಿಮರು ಸುಮ್ಮನೆ ಕೂರಬಾರದು ಎಂದು ಹೇಳಿದ್ದರು. ಆಗ ಈ ಬಿಜೆಪಿಯವರು ಪ್ರತಿಭಟನೆ ಮಾಡದೆ ಈಗ ಪ್ರತಿಭಟನೆ ಮಾಡುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಗೊಂದಲ ಸೃಷ್ಟಿಸುವುದೇ ಪ್ರತಿಭಟನೆಯ ಇಂದಿನ ಉದ್ದೇಶವೇ ಹೊರತು ಜನಹಿತಕ್ಕಾಗಿ ಮಾಡಿದ ಪ್ರತಿಭಟನೆಯಲ್ಲ. ಬಿಜೆಪಿಯವರು ನೈಜ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಲಿ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಬ್ಲಾಕಾ ಕಾಂಗ್ರೆಸ್ ಉಪಾಧ್ಯಕ್ಷ ಜೇಸುದಾಸ್, ಕಸಬಾ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಪೂಜಾರಿ, ಸಹ ವಕ್ತಾರ ಸಂತೋಷ್ ಕುಲಾಸೋ, ಪ.ಪಂ. ನಾಮನಿರ್ದೇಶನ ಸದಸ್ಯ ಸಂದೇಶ್ ಇದ್ದರು.