ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆಯಾಗಿದ್ದು, ಬೆಳೆಗಳಿಗೆ ನಿರೀಕ್ಷಿತ ಇಳುವರಿ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಬ್ಯಾಡಗಿ ತಾಲೂಕನ್ನು ಕೂಡಲೇ ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ತಾಲೂಕು ಘಟಕದ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬ್ಯಾಡಗಿ: ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆಯಾಗಿದ್ದು, ಬೆಳೆಗಳಿಗೆ ನಿರೀಕ್ಷಿತ ಇಳುವರಿ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಬ್ಯಾಡಗಿ ತಾಲೂಕನ್ನು ಕೂಡಲೇ ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ತಾಲೂಕು ಘಟಕದ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಬಿಜೆಪಿ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಕಾಕೋಳ ರಸ್ತೆ ಮೂಲಕ ಸಾಗಿತು. ಬಳಿಕ ತಹಸೀಲ್ದಾರ್ ಕಚೇರಿಗೆ ತೆರಳಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಬರಗಾಲ ಘೋಷಣೆಗೆ ಆಗ್ರಹಿಸಿದರು.ಈ ವೇಳೆ ಮಾತನಾಡಿದ ಮಾಜಿ ಶಾಸಕ ಹಾಗೂ ಬಿಜೆಪಿ ಹಾವೇರಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, "ತಾಲೂಕಿನಲ್ಲಿ ವಾಡಿಕೆಗಿಂತ ಮಳೆಯ ಪ್ರಮಾಣ ಕಡಿಮೆಯಾಗಿದೆ. ಕೆಲವು ಕಡೆ ಬೆಳೆಗಳು ಹಸಿರಾಗಿ ಕಾಣಿಸುತ್ತಿದ್ದರೂ, ನಿರೀಕ್ಷಿತ ಪ್ರಮಾಣದ ಇಳುವರಿ ಬರುತ್ತಿಲ್ಲ. ಮಳೆ ಕೊರತೆಯಿಂದಾಗಿ ಪ್ರಮುಖ ವಾಣಿಜ್ಯ ಹಾಗೂ ಕೃಷಿ ಬೆಳೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಬ್ಯಾಡಗಿ ತಾಲೂಕಿನ ಪ್ರಮುಖ ಬೆಳೆಯಾದ ಮೆಕ್ಕೆಜೋಳಕ್ಕೂ ಮಳೆ ಕೊರತೆಯ ಬಿಸಿ ತಟ್ಟಿದೆ. ರೈತರು ಬಿತ್ತನೆ, ಗೊಬ್ಬರ, ಔಷಧಿ ಸೇರಿದಂತೆ ಕೃಷಿಗಾಗಿ ಸಾವಿರಾರು ರುಪಾಯಿ ಖರ್ಚು ಮಾಡಿದ್ದರೂ, ಇದೀಗ ಇಳುವರಿ ಕುಂಠಿತವಾಗುವ ಆತಂಕ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಹಾವೇರಿ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆಗಳ ಪಟ್ಟಿಯಿಂದ ಕೈಬಿಟ್ಟಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತರ ಸಂಕಷ್ಟವನ್ನು ಕೇವಲ ಹೊಲದ ಹಸಿರು ಬಣ್ಣ ನೋಡಿ ಅಳೆಯಬಾರದು. ಮಳೆಯ ಪ್ರಮಾಣ, ಮಣ್ಣಿನ ತೇವಾಂಶ, ಬೆಳೆಗಳ ಸ್ಥಿತಿ, ಇಳುವರಿ ಹಾಗೂ ರೈತರ ಆರ್ಥಿಕ ನಷ್ಟವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ವಾಸ್ತವ ಪರಿಸ್ಥಿತಿಯನ್ನು ಸರಕಾರ ಅರಿಯಬೇಕು. ಕೂಡಲೇ ಹಾವೇರಿ ಜಿಲ್ಲೆ ಹಾಗೂ ಬ್ಯಾಡಗಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಅಗತ್ಯ ಪರಿಹಾರ ಹಾಗೂ ಸರಕಾರದ ಸೌಲಭ್ಯಗಳನ್ನು ಒದಗಿಸಬೇಕು " ಎಂದು ಆಗ್ರಹಿಸಿದರು.ಮಳೆಯಾಧಾರಿತ ಕೃಷಿಗೆ ಪೆಟ್ಟು: ಬಿಜೆಪಿ ತಾಲೂಕು ಅಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಮಾತನಾಡಿ, "ಬ್ಯಾಡಗಿ ತಾಲೂಕಿನಲ್ಲಿ ಯಾವುದೇ ನದಿ ಹರಿಯುತ್ತಿಲ್ಲ. ಇಲ್ಲಿನ ಕೃಷಿ ಸಂಪೂರ್ಣವಾಗಿ ಮಳೆ ಆಧಾರಿತವಾಗಿದೆ. ಮಳೆ ಕೈಕೊಟ್ಟರೆ ರೈತರ ಬದುಕೇ ಸಂಕಷ್ಟಕ್ಕೆ ಸಿಲುಕುತ್ತದೆ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಆಣೂರ-ಬುಡುಪನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತರಲಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯೋಜನೆಯ ಉದ್ದೇಶ ಈಡೇರದೆ, ಕೆರೆಗಳು ಸಮರ್ಪಕವಾಗಿ ತುಂಬುತ್ತಿಲ್ಲ ಎಂದು ದೂರಿದರು.ಮುಖಂಡ ಎಂ.ಎಸ್. ಪಾಟೀಲ ಮಾತನಾಡಿ, ಒಂದೆಡೆ ಮಳೆ ಕೊರತೆ, ಮತ್ತೊಂದೆಡೆ ಬೆಳೆಗಳಿಗೆ ಸೂಕ್ತ ಇಳುವರಿ ಇಲ್ಲ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ನಿಲ್ಲಬೇಕಾದ ಸರಕಾರ ಬರಗಾಲ ಘೋಷಣೆ ಮಾಡದೆ ರೈತರಿಗೆ ಅನ್ಯಾಯ ಮಾಡುತ್ತಿದೆ. ಸರಕಾರ ಕೂಡಲೇ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ ಬ್ಯಾಡಗಿ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಬೇಕು " ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ರೈತರು ಪಾಲ್ಗೊಂಡಿದ್ದರು. ಬಳಿಕ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ, ತಾಲೂಕಿನಲ್ಲಿ ಮಳೆ ಕೊರತೆ ಹಾಗೂ ಬೆಳೆ ನಷ್ಟದ ಕುರಿತು ಸಮಗ್ರ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಒತ್ತಾಯಿಸಲಾಯಿತು.