ಸಿರುಗುಪ್ಪ ರಸ್ತೆಯಲ್ಲಿ ಜ.1ರಂದು ಜರುಗಿದ ಬ್ಯಾನರ್ ಗಲಭೆ ಪ್ರಕರಣ ಖಂಡಿಸಿ ಇಲ್ಲಿನ ಎಪಿಎಂಸಿ ಬಳಿಯ ಮೈದಾನದಲ್ಲಿ ಬಿಜೆಪಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶ ಕಮಲ ನಾಯಕರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಗರದ ಸಿರುಗುಪ್ಪ ರಸ್ತೆಯಲ್ಲಿ ಜ.1ರಂದು ಜರುಗಿದ ಬ್ಯಾನರ್ ಗಲಭೆ ಪ್ರಕರಣ ಖಂಡಿಸಿ ಇಲ್ಲಿನ ಎಪಿಎಂಸಿ ಬಳಿಯ ಮೈದಾನದಲ್ಲಿ ಬಿಜೆಪಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶ ಕಮಲ ನಾಯಕರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಅಲ್ಲದೆ, ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆಗಳ ವಿರುದ್ಧ ಬಳ್ಳಾರಿಯಿಂದಲೇ ನಾಡಿನಾದ್ಯಂತ ಚಳವಳಿ ವಿಸ್ತರಿಸುವ ಕಮಲ ನಾಯಕರ ಪ್ರತಿಧ್ವನಿ ಮೊಳಗಿತು.

ಸಮಾವೇಶದಲ್ಲಿ ಭಾಗವಹಿಸಿದ್ದ ಬಿಜೆಪಿಯ ನಾಯಕರು, ರಾಜ್ಯದಲ್ಲಿ ಎದುರಾಗಿರುವ ಕಾನೂನು ಸುವ್ಯವಸ್ಥೆಯ ವೈಫಲ್ಯ, ನಾರಾ ಭರತರೆಡ್ಡಿಯಂತಹ ಶಾಸಕನ ದುರಹಂಕಾರ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತನನ್ನೇ ಕೊಲೆಗೈದರೂ ಕೊಲೆಗಡುಕರನ್ನು ಬಂಧಿಸದ ಸರ್ಕಾರದ ಧೋರಣೆ, ಬ್ಯಾನರ್ ಗಲಭೆ ನಿಯಂತ್ರಿಸಬೇಕಾದ ಪೊಲೀಸ್ ಅಧಿಕಾರಿಗಳೇ ಶಾಸಕನ ಜೊತೆ ಕೈ ಜೋಡಿಸಿದ ವರ್ತನೆ, ಇಷ್ಟಾಗಿಯೂ ಮುಖ್ಯಮಂತ್ರಿ ಮೌನಕ್ಕೆ ಶರಣಾಗಿದ್ದಾರೆ ಎಂದು ಸಮಾವೇಶದಲ್ಲಿ ಆರೋಪಿಸಿದ ಬಿಜೆಪಿ ನಾಯಕರು, ಬಳ್ಳಾರಿಯಿಂದ ಶುರುವಾಗಿರುವ ಜನಾಂದೋಲನ ಹೋರಾಟ ಇಡೀ ರಾಜ್ಯದಾದ್ಯಂತ ವಿಸ್ತರಿಸುವುದಾಗಿ ಪ್ರಕಟಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುವ ಹೊತ್ತಿನಲ್ಲಾದರೂ ನಿಷ್ಪಕ್ಷಪಾತವಾಗಿ ವರ್ತಿಸಿ, ಶಾಸಕ ಭರತ್‌ರನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಿ. ತಾವೊಬ್ಬ ಮುತ್ಸದ್ಧಿ ರಾಜಕಾರಣಿ ಎಂಬುದನ್ನು ಸಾಬೀತುಪಡಿಸಲಿ ಎಂದು ಸಮಾವೇಶದಲ್ಲಿ ಮುಖಂಡರು ಆಗ್ರಹಿಸಿದರು. ಭರತ್ ರೆಡ್ಡಿಯನ್ನು ಬಂಧಿಸಬೇಕು, ಬ್ಯಾನರ್ ಗಲಭೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪಕ್ಷದ ಎಲ್ಲ ನಾಯಕರು ಒಕ್ಕೊರಲಿನ ಆಗ್ರಹ ವ್ಯಕ್ತಪಡಿಸಿದರು.

ಶಾಸಕ ಭರತ್‌ ರೆಡ್ಡಿ ಅವರ ಆಪ್ತ ಸತೀಶ ರೆಡ್ಡಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಆಕ್ರೋಶ ಉಂಟಾಯಿತು. ರಾಮುಲು-ರೆಡ್ಡಿ ನಡುವಿನ ಮುನಿಸಿನಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್‌ ಬೆಳೆಯಲು ಕಾರಣವಾಗಿದೆ. ನೀವು ಮಾಡಿದ ಚಿಕ್ಕ ತಪ್ಪಿಗೆ ಇಂದು ಬೆಲೆ ತೆರುತ್ತಿದ್ದೀರಿ. ಇನ್ನಾದರೂ ಇಬ್ಬರು ಒಟ್ಟಾಗಿ ಹೋಗಿ ಎಂದು ಗಣ್ಯರು ಬುದ್ಧಿ ಮಾತು ಹೇಳಿದರು.

ಹೋರಾಟ ಕೇವಲ ರ್‍ಯಾಲಿಗೆ ಸೀಮಿತವಲ್ಲ:

ಬಳ್ಳಾರಿಯಲ್ಲಿ ನಡೆದ ಬ್ಯಾನರ್‌ ಗಲಾಟೆ ಹಾಗೂ ತದ ನಂತರ ನಡೆದ ಗುಂಡಿನ ದಾಳಿ, ಓರ್ವ ಅಮಾಯಕನ ಹತ್ಯೆ ಪ್ರಕರಣವನ್ನು ನಾವು ಇಷ್ಟಕ್ಕೇ ಬಿಡುವುದಿಲ್ಲ, ಕೇವಲ ಸಮಾವೇಶಕ್ಕೆ ನಮ್ಮ ಹೋರಾಟ ಸೀಮಿತವಲ್ಲ. ಲಜ್ಜಗೇಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಂದೋಲನ ಮುಂದುವರಿಯುತ್ತದೆ.

-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ.ರೆಡ್ಡಿ, ರಾಮುಲು ಜೊತೆ ನಾವು ನಿಲ್ಲುತ್ತೇವೆ:ಶಾಸಕ ಭರತ್ ರೆಡ್ಡಿ ಐದು ನಿಮಿಷದಲ್ಲಿ ಬಳ್ಳಾರಿಯನ್ನು ಸುಟ್ಟು ಭಸ್ಮ ಮಾಡುತ್ತೇನೆ ಎನ್ನುತ್ತಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಇಂತಹ ಶಾಸಕನ ಬೆಂಬಲಕ್ಕೆ ನಿಲ್ಲುತ್ತೇನೆ ಎನ್ನುತ್ತಾರೆ. ಬಾಂಬ್ ಹಾಕುವವರಿಗೆ ಬ್ರದರ್ಸ್ ಎನ್ನುವ ಡಿಕೆಶಿ ರಾಜ್ಯಕ್ಕೆ ಯಾವ ಸಂದೇಶ ನೀಡಲು ಹೊರಟಿದ್ದಾರೆ.

-ಆರ್.ಅಶೋಕ್, ಪ್ರತಿಪಕ್ಷ ನಾಯಕ.