ಸಿದ್ದರಾಮಯ್ಯ ಸರ್ಕಾರ ಕೆಡವಲು ಬಿಜೆಪಿ ಹುನ್ನಾರ: ಸಚಿವ ಸಂತೋಷ ಲಾಡ್

| Published : Feb 06 2024, 01:33 AM IST

ಸಿದ್ದರಾಮಯ್ಯ ಸರ್ಕಾರ ಕೆಡವಲು ಬಿಜೆಪಿ ಹುನ್ನಾರ: ಸಚಿವ ಸಂತೋಷ ಲಾಡ್
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ ಕರ್ನಾಟಕ ಕಲಾ ಕಾಲೇಜು ಮೈದಾನದಲ್ಲಿ ಸೋಮವಾರ ಧಾರವಾಡ ಗ್ರಾಮೀಣ ಹಾಗೂ ಹು-ಧಾ ಪಶ್ಚಿಮ‌ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ನಡೆಯಿತು.

ಧಾರವಾಡ: ₹58 ಸಾವಿರ ಕೋಟಿ ಮೊತ್ತದ ಗ್ಯಾರಂಟಿ ಯೋಜನೆ ನೀಡಿ ಬಡ ಜನರ ಬಾಳಿಗೆ ಬೆಳಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಕಾರ್ಮಿಕ ಸಚಿವ, ಜಿಲ್ಲಾ ಉಸ್ತುವಾರಿ ಸಂತೋಷ ಲಾಡ್‌ ಆರೋಪಿಸಿದರು.

ಇಲ್ಲಿಯ ಕರ್ನಾಟಕ ಕಲಾ ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ ಧಾರವಾಡ ಗ್ರಾಮೀಣ ಹಾಗೂ ಹು-ಧಾ ಪಶ್ಚಿಮ‌ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂಚ ಗ್ಯಾರಂಟಿ ಮೂಲಕ ಇಡೀ ದೇಶದಲ್ಲಿಯೇ ಪ್ರಸಿದ್ಧರಾಗಿದ್ದಾರೆ. ಸಮಾನತೆಯ ಕಡೆಗೆ ಆಡಳಿತ ನಡೆಸುತ್ತಿದ್ದಾರೆ. ಇಂತಹ ನಾಯಕನ ಪರವಾಗಿ ನಿಲ್ಲಬೇಕಾದುದು ನಮ್ಮ-ನಿಮ್ಮೆಲ್ಲರ ಕರ್ತ‍ವ್ಯ. ಅವರ ಪರವಾಗಿ ಜನತೆ ಗಟ್ಟಿಯಾಗಿ ನಿಲ್ಲಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆ ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ. ಆದರೆ, ಬಿಜೆಪಿ ನಾಯಕರು ಜನರಿಗೆ ಗ್ಯಾರಂಟಿ ತಲುಪಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಮೈದಾನದಲ್ಲಿ ಸೇರಿದ ಸಾವಿರಾರು ಫಲಾನುಭವಿಗಳ ಮುಖದಲ್ಲಿನ ಮಂದಹಾಸವನ್ನು ಮಾಧ್ಯಮಗಳು ಬಿಜೆಪಿ ಮುಖಂಡರಿಗೆ ಸಾಕ್ಷಿಯಾಗಿ ತೋರಿಸಲಿ ಎಂದು ಭಾವುಕರಾಗಿ ಮಾತನಾಡಿದ ಲಾಡ್‌, ಜನರಿಗೆ ಅಕ್ಕಿ ಕೊಡುವ ಯೋಜನೆ ಬಿಜೆಪಿಯದಲ್ಲ, ದೇಶದ ಜನತೆ ಹಸಿವಿನಿಂದ ಬಳಲಬಾರದು ಎಂಬ ಕಾರಣಕ್ಕೆ ಯುಪಿಎ ಸರ್ಕಾರ ನೀಡಿದ ಕೊಡುಗೆ. ಇದನ್ನೇ ಮುಂದುವರಿಸಿದ ಬಿಜೆಪಿ ಮೋದಿ ಫಲಕ ಹಾಕಿದ್ದಾರೆ ಎಂದು ಆರೋಪ ಮಾಡಿದರು.

ಹಿಂದೂ ಹಾಗೂ ಹಿಂದುತ್ವದ ಬಗ್ಗೆ ಮಾತಾಡುವ ಬಿಜೆಪಿಗರು ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆ. ಹಿಂದೂ ಬಿಲ್ ಕೋಡ್ ತಂದಿದ್ದೇ ಡಾ. ಅಂಬೇಡ್ಕರ್. ಈ ಕಾನೂನು ಜಾರಿಗೆ ತಂದ ಕಾರಣಕ್ಕೆ ಇಂದು ಎಲ್ಲರಿಗೂ ಹಿರಿಕರ ಆಸ್ತಿ ಲಭಿಸುತ್ತಿದೆ. ಹಿಂದೂ ಬಿಲ್ ವಿರೋಧಿಸಿದ್ದೇ ಬಿಜೆಪಿಗರು. ಈ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ ಲಾಡ್, ಹಿಂದೂ ಸಮಾಜ ಡಾ. ಅಂಬೇಡ್ಕರ್ ಅವರಿಗೆ ದೇವಸ್ಥಾನದಲ್ಲಿ ಪ್ರವೇಶ ಕಲ್ಪಿಸಿಲ್ಲ ಎನ್ನುವುದು ದುರಂತದ ಸಂಗತಿ ಎಂದರು.

ಬಿಜೆಪಿಗರು ಟಿವಿಗಳಲ್ಲಿ ದೇವರು ತೋರಿಸುತ್ತಾರೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ನಿಜವಾದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಈ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಧರ್ಮಸ್ಥಳದ ಡಾ. ವೀರೇಂದ್ರೆ ಹೆಗ್ಗಡೆ ಸರ್ಕಾರಕ್ಕೆ ಪತ್ರ ಬರೆದು ಶ್ಲಾಘಿಸಿದ್ದಾರೆ. ಧಾರವಾಡ ಜಿಲ್ಲೆಯ ಏಳು ಕೋಟಿಗೂ ಹೆಚ್ಚು ಮಹಿಳೆಯರು ಶಕ್ತಿ ಯೋಜನೆ ಬಳಸಿಕೊಂಡಿದ್ದಾರೆ ಎಂದು ಸಚಿವ ಸಂತೋಷ ಲಾಡ್ ತಿಳಿಸಿದರು.

ಸಮಾವೇಶದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಣೆ ಮಾಡಲಾಯಿತು. ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಪ್ರಾಸ್ತಾವಿಕ ಮಾತನಾಡಿದರು.

ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಸದಸ್ಯರಾದ ಡಾ. ಮಯೂರ ಮೋರೆ, ಕವಿತಾ ಕಬ್ಬೇರ, ಶಂಭು ಸಾಲಮನಿ ಇದ್ದರು. ಎರಡೂ ಕ್ಷೇತ್ರಗಳ ಸುಮಾರು 10 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಆಗಮಿಸಿದ್ದರು.