ಗೋಕಾಕ್‌ ಬಳಿಕ ದಾವಣಗೆರೆಯಲ್ಲಿ ಬಿಜೆಪಿ ರೆಬೆಲ್ಸ್ ಒಗ್ಗಟ್ಟು ಪ್ರದರ್ಶನ

| Published : Jul 09 2025, 12:18 AM IST

ಸಾರಾಂಶ

ಬಿಜೆಪಿಯೊಳಗಿನ ರೆಬೆಲ್ಸ್‌ ನಾಯಕರು ಬೆಳಗಾವಿ ಜಿಲ್ಲೆಯ ಗೋಕಾಕ್‌ ಬಳಿಕ ದಾವಣಗೆರೆಯಲ್ಲಿ ತಮ್ಮ ಒಗ್ಗಟ್ಟು ಪ್ರದರ್ಶನ ಮಾಡಿದ್ದು, ಈ ವೇಳೆ ಸಭೆ ನಡೆಸಿ ಪಕ್ಷದಲ್ಲಿನ ಪ್ರಸ್ತುತ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿಜೆಪಿಯೊಳಗಿನ ರೆಬೆಲ್ಸ್‌ ನಾಯಕರು ಬೆಳಗಾವಿ ಜಿಲ್ಲೆಯ ಗೋಕಾಕ್‌ ಬಳಿಕ ದಾವಣಗೆರೆಯಲ್ಲಿ ತಮ್ಮ ಒಗ್ಗಟ್ಟು ಪ್ರದರ್ಶನ ಮಾಡಿದ್ದು, ಈ ವೇಳೆ ಸಭೆ ನಡೆಸಿ ಪಕ್ಷದಲ್ಲಿನ ಪ್ರಸ್ತುತ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ.

ನಗರದಲ್ಲಿ ಹಮ್ಮಿಕೊಂಡಿದ್ದ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ 74ನೇ ಜನ್ಮದಿನ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ, ಸಂಸದ ಬಿ.ವಿ.ನಾಯಕ್, ಶಾಸಕ ಬಿ.ಪಿ.ಹರೀಶ್‌ ಎಲ್ಲರೂ ಒಟ್ಟಾಗಿ ಸೇರಿ ದಾವಣಗೆರೆಯ ಹೋಟೆಲ್‌ವೊಂದರಲ್ಲಿ ಬೆಣ್ಣೆ ದೋಸೆ ಸವಿದರು.

ಈ ಬಗ್ಗೆ ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿದ್ದು, ದಾವಣಗೆರೆಯಲ್ಲಿ ಯಾವುದೇ ಭಿನ್ನಮತದ ಸಭೆ ನಡೆಸಿಲ್ಲ. ಮಾಜಿ ಸಂಸದರ ಜನ್ಮದಿನದ ಆಚರಣೆ ಮಾಡಲಾಗಿದೆ. ಇನ್ನು 10 ದಿನದೊಳಗೆ ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷರ ಘೋಷಣೆ ಆಗುತ್ತದೆ ಎಂದಿದ್ದಾರೆ.

ಬಿಎಸ್‌ವೈ ಸಿಎಂ ಆಗಲು ಸಿದ್ದೇಶ್ವರ್‌ ಕಾರಣ: ಲಿಂಬಾವಳಿ

ನಗರದಲ್ಲಿ ಜಿ.ಎಂ.ಸಿದ್ದೇಶ್ವರ ಅಭಿಮಾನಿ ಬಳಗದಿಂದ ನಡೆದ ಸಿದ್ದೇಶ್ವರ್‌ ಅವರ 74ನೇ ಜನ್ಮದಿನ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಚಿವ ಲಿಂಬಾವಳಿ, ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಬಾಗಿಲನ್ನು ಬಡಿದಿದ್ದ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಮಾಡುವ ಜವಾಬ್ದಾರಿ ಪಡೆದ ಜಿ.ಎಂ.ಸಿದ್ದೇಶ್ವರ್‌ ಅವರು ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಮ್ಮ ಪಕ್ಷವನ್ನು ಬಿಟ್ಟುಹೋದ ಯಡಿಯೂರಪ್ಪ ಅವರು ಮತ್ತೆ ಯಾಕೆ ಬಂದರೋ ಗೊತ್ತಾಗಿಲ್ಲ ಎಂದರು.ಲೀ-ಮೆರೆಡಿಯನ್ ಹೋಟೆಲ್‌ನಲ್ಲಿ ಏನಾಯ್ತು ಎಂಬುದು ನನಗೆ ಗೊತ್ತಿದೆ. ಯಡಿಯೂರಪ್ಪ ಸಿಎಂ ಆಗುವಲ್ಲಿ ಅನೇಕರು ಕಾರಣರಾಗಿದ್ದು, ಅದರ ಮುಂದಾಳತ್ವ ವಹಿಸಿದ್ದು ಸಿದ್ದೇಶ್ವರ. ದಾವಣಗೆರೆಯಲ್ಲಷ್ಟೇ ಅಲ್ಲ, ಶಿಕಾರಿಪುರದಲ್ಲೂ ಬಿಜೆಪಿ ಗೆಲ್ಲುವಲ್ಲಿ ಸಿದ್ದೇಶ್ವರ ಪರಿಶ್ರಮ ಇದೆ ಎಂದು ತಿಳಿಸಿದರು. ಜನ್ಮದಿನಕ್ಕೆ ಬಾರದ ಬಿಎಸ್‌ವೈ

ವಿರುದ್ಧ ಲಿಂಬಾವಳಿ ಅಸಮಾಧಾನ

ನಮ್ಮ ಪಕ್ಷಕ್ಕೆ ಆರ್ಥಿಕ ನಷ್ಟ ಆದಾಗಲ್ಲೆಲ್ಲಾ ಸಿದ್ದೇಶ್ವರ ಸಹಕಾರ ನೀಡಿದ್ದಾರೆ. ಇದೇ ಎಸ್.ಎ.ರವೀಂದ್ರನಾಥ ಜನ್ಮದಿನಕ್ಕೆ ಹೋಗುವುದಕ್ಕೆ ಯಡಿಯೂರಪ್ಪ ಅವರಿಗೆ ಆಗುತ್ತದೆ. ಆದರೆ, ತಾವು ಮುಖ್ಯಮಂತ್ರಿ ಆಗಲು ಕಾರಣನಾದ ವ್ಯಕ್ತಿಯ ಜನ್ಮದಿನಕ್ಕೆ ಬರುವುದಕ್ಕೂ ಆಗದಷ್ಟು ಅಕ್ಷಮ್ಯ ಅಪರಾಧ ಏನು ಮಾಡಿದ್ದಾರೆ ಯಡಿಯೂರಪ್ಪನವರೇ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.