ಪುತ್ತೂರು ಬಿಜೆಪಿ ವಿಧಾನಸಭಾ ಕ್ಷೇತ್ರದ ಪುತ್ತೂರು ನಗರ ಹಾಗೂ ಗ್ರಾಮಾಂತರ ಮಂಡಲದ ಮುಂದಿನ ಸಂಘಟನಾ ಅವಧಿಗೆ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಈ ಸ್ಥಾನಗಳಲ್ಲಿ ಈ ಹಿಂದೆ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡವರಿದ್ದರು. ಅವರನ್ನು ಪರೋಕ್ಷವಾಗಿ ಬದಿಗೆ ಸರಿಸಿ ನೂತನ ಸಾರಥಿಗಳನ್ನು ಬಿಜೆಪಿ ನೇಮಕಗೊಳಿಸಿದೆ.
ಪುತ್ತೂರು: ಬಿಜೆಪಿ ತನ್ನ ಪದಾಧಿಕಾರಿಗಳ ಪಟ್ಟಿ ಬದಲಾವಣೆಗೊಳಿಸಿದ್ದು, ಪುತ್ತೂರು ಬಿಜೆಪಿ ವಿಧಾನಸಭಾ ಕ್ಷೇತ್ರದ ಪುತ್ತೂರು ನಗರ ಹಾಗೂ ಗ್ರಾಮಾಂತರ ಮಂಡಲದ ಮುಂದಿನ ಸಂಘಟನಾ ಅವಧಿಗೆ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಈ ಸ್ಥಾನಗಳಲ್ಲಿ ಈ ಹಿಂದೆ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡವರಿದ್ದರು. ಅವರನ್ನು ಪರೋಕ್ಷವಾಗಿ ಬದಿಗೆ ಸರಿಸಿ ನೂತನ ಸಾರಥಿಗಳನ್ನು ಬಿಜೆಪಿ ನೇಮಕಗೊಳಿಸಿದೆ.
ಇದರ ಬೆನ್ನಲ್ಲೇ ಅವರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಜವಾಬ್ದಾರಿ ವಹಿಸಿ, ವಿವಿಧ ಸ್ಥಾನಗಳನ್ನು ನೀಡಿ ಹೊಸ ಬೆಳವಣಿಗೆಗೆ ನಾಂದಿ ಹಾಡಿದೆ. ಪುತ್ತಿಲ ಪರಿವಾರದಲ್ಲಿದ್ದ ಬಿಜೆಪಿಯಲ್ಲಿ ಸ್ಥಾನ ಪಡೆದುಕೊಂಡಿದ್ದ ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ, ಪ್ರಶಾಂತ್ ನೆಕ್ಕಿಲಾಡಿ ಹಾಗೂ ನಾಗೇಶ್ ಅವರಿಗೆ ಈ ಹಿಂದೆ ನಗರ ಹಾಗೂ ಗ್ರಾಮಾಂತರ ಮಂಡಲದ ಜವಾಬ್ದಾರಿ ನೀಡಲಾಗಿತ್ತು. ಆದರೆ ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಅವರಿಗೆ ಬಿಜೆಪಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡದ ಕಾರಣಕ್ಕೆ ಅವರು ಬಿಜೆಪಿ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು ಎನ್ನಲಾಗಿದೆ. ಇದೀಗ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರು ಅವರ ಸ್ಥಾನಗಳನ್ನು ಬದಲಾವಣೆಗೊಳಿಸಿ ಪುತ್ತೂರು ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾಗಿ ಸುನೀಲ್ ದಡ್ಡು ಹಾಗೂ ಲೋಕೇಶ್ ಚಾಕೋಟೆ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾಗಿ ಯುವರಾಜ್ ಪೆರಿಯತ್ತೋಡಿ ಹಾಗೂ ಶಶಿಧರ್ ನಾಯಕ್ ಅವರನ್ನು ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಪುತ್ತಿಲ ಪರಿವಾರದ ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ, ಪ್ರಶಾಂತ್ ನೆಕ್ಕಿಲಾಡಿ ಹಾಗೂ ನಾಗೇಶ್ ಅವರನ್ನು ನಗರ ಹಾಗೂ ಗ್ರಾಮಾಂತರ ಮಂಡಲದ ಜವಾಬ್ದಾರಿಯಿಂದ ವಿಮುಕ್ತಿಗೊಳಿಸಲಾಗಿದೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಗಮಿಸಿದ್ದ ಅಟಲ್ ವಿರಾಸತ್ ಸಮಾವೇಶಕ್ಕೂ ಗೈರಾಗಿದ್ದರು ಅಲ್ಲದೆ ಪಕ್ಷದ ಸಭೆಗಳಿಗಳಲ್ಲಿಯೂ ಅವರು ಭಾಗವಹಿಸದೆ ದೂರವಾಗಿದ್ದರು. ಈ ಎಲ್ಲಾ ಆಯಾಮಗಳಿಂದ ಅವರು ಪಕ್ಷದ ಚಟುವಟಿಕೆಯಲ್ಲಿ ನಿಷ್ಕ್ರಿಯಗೊಂಡಿರುವ ಕಾರಣಕ್ಕೆ ನೂತನ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ ಎಂದು ಪುತ್ತೂರು ಬಿಜೆಪಿ ಘಟಕ ತಿಳಿಸಿದೆ.ಟ್ರಸ್ಟ್ ಜವಾಬ್ದಾರಿ: ಪುತ್ತಿಲ ಪರಿವಾದವರಾಗಿದ್ದು ಪುತ್ತೂರು ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಉಮೇಶ್ ಕೋಡಿಬೈಲು ಮತ್ತು ಪ್ರಶಾಂತ್ ನೆಕ್ಕಿಲಾಡಿ ಹಾಗೂ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ಅವರನ್ನು ಬದಲಾಯಿಸಿ, ಆ ಸ್ಥಾನಗಳಿಗೆ ಬಿಜೆಪಿ ನೂತನ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿದ ಬೆನ್ನಲ್ಲೇ ಆ ಮೂವರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನಲ್ಲಿ ಜಿಲ್ಲಾ ಮಟ್ಟದ ಜವಾಬ್ದಾರಿಯ ಸ್ಥಾನಗಳನ್ನು ನೀಡಲಾಗಿದೆ.ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿದ್ದ ಉಮೇಶ್ ಕೋಡಿಬೈಲು ಅವರನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ, ಪ್ರಶಾಂತ್ ನೆಕ್ಕಿಲಾಡಿ ಮತ್ತು ಅನಿಲ್ ತೆಂಕಿಲ ಅವರನ್ನು ಟ್ರಸ್ಟ್ ಸಹ ಸಂಘಟನಾ ಸಂಚಾಲಕರಾಗಿ ಟ್ರಸ್ಟ್ ಸಂಚಾಲಕ ಅರುಣ್‌ಕುಮಾರ್ ಪುತ್ತಿಲ ಅವರು ನೇಮಕ ಮಾಡಿದ್ದಾರೆ.