ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ದೇವರ ಹೆಸರಿನಲ್ಲಿ ಕೊಟ್ಟ ದಾನ, ಧರ್ಮ, ಮಾನವೀಯತೆ ಬಗ್ಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರಿಗೆ ಗೊತ್ತಿಲ್ಲ ಎಂದು ಜಾಗೃತ ಕರ್ನಾಟಕದ ರಾಜ್ಯ ಸಂಚಾಲಕ ಡಾ.ವಾಸು ಕಿಡಿಕಾರಿದರು.ನಗರದ ಮೈಸೂರು- ಬೆಂಗಳೂರು ರಸ್ತೆಯಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಎಂದಿಗೂ ಹಿಂದುತ್ವ ಹಾಗೂ ರಾಷ್ಟ್ರೀಯತೆ ಪ್ರತಿಪಾದಿಸುವುದಿಲ್ಲ. ಅದರಂತೆ ಮೋದಿಯವರಿಗೆ ಧರ್ಮವೂ ಗೊತ್ತಿಲ್ಲ ಮಾನವೀಯತೆಯೂ ಇಲ್ಲ ಜರಿದರು.
ದೇಶದ ಆದಿವಾಸಿಗಳು, ದಲಿತರು, ಹಿಂದುಳಿದವರು, ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಸೇರಿದಂತೆ ಎಲ್ಲಾ ಧರ್ಮದವರನ್ನು ಒಂದಾಗಿ ನೋಡುವುದು ರಾಷ್ಟ್ರೀಯತೆ. ಆದರೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರತಿಪಾದಿಸುತ್ತಿರುವುದು ರಾಷ್ಟ್ರೀಯತೆ ಅಲ್ಲ. ಒಂದು ಧರ್ಮದ ವಿರುದ್ಧ ನಿಂತಿರುವುದು ರಾಷ್ಟ್ರೀಯತೆಯೇ ಎಂದು ಪ್ರಶ್ನಿಸಿದರು.ಕೋವಿಡ್ ಬರುವ ಮುನ್ನ ಬಿಜೆಪಿ ಸರ್ಕಾರ ಜಾರಿಗೆ ತರಲು ಹೊರಟಿದ್ದ ಸಿಎಎ, ಎನ್ ಆರ್ ಸಿ ವಿರುದ್ಧ ದೆಹಲಿಯ ಶಾಹೀನ್ ಬಾಗ್ ನಲ್ಲಿ ಮುಸ್ಲಿಂ ಸಮುದಾಯದ ಕೋಟ್ಯಂತರ ಮಹಿಳೆಯರು ಬೀದಿಗಿಳಿದು ಚಳವಳಿ ನಡೆಸಿದರು. ಈ ಹೋರಾಟದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಸಿಎಎ, ಎನ್ಆರ್ ಸಿ ಜಾರಿಗೆ ತರಲಿಲ್ಲ ಎಂದರು.
ಮುಸಲ್ಮಾನ ಮಹಿಳೆಯರು ಮಾಡಿದ ಈ ಹೋರಾಟ ರೈತ ಚಳವಳಿಗೆ ಸ್ಪೂರ್ತಿಯನ್ನು ಕೊಟ್ಟಿದೆ. ಈಗ ಸುಪ್ರೀಂ ಕೋರ್ಟ್ ನಲ್ಲಿ ವಕ್ಫ್ ಮಸೂದೆ ವಿಚಾರಣೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ಸಂವಿಧಾನದ ಆಶಯಗಳ ಪರವಾಗಿಯೇ ಇರುತ್ತದೆ ಎಂದರು.ಬಿಜೆಪಿಯ ವಕ್ಫ್ ಕಾಯ್ದೆ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು, ದಲಿತರ ನಡುವೆ ಯಾವುದೇ ತಾರತಮ್ಯ ಮಾಡಬಾರದು. ಆದರೆ, ಬಿಜೆಪಿ ಸರ್ಕಾರ ಅದನ್ನು ಮಾಡುತ್ತಿದೆ ಎಂದು ದೂರಿದರು.
ಕನ್ನಡತಿ ಭಾನು ಮುಷ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿದೆ. ಅವರು ಕನ್ನಡ ಭಾಷೆ ಮತ್ತು ಸಾಹಿತ್ಯದ ಹಿರಿಮೆಯನ್ನು ಜಗತ್ತಿನಲ್ಲಿ ಸಾರಿದ್ದಾರೆ. ಅವರನ್ನು ಶ್ಲಾಘಿಸಿ ನರೇಂದ್ರ ಮೋದಿಯವರಿಗೆ ಒಂದು ಲೈನ್ ಬರೆಯಲು ಕೂಡ ಆಗಿಲ್ಲ ಎಂ ಬಿಜೆಪಿ,ಆರ್ ಎಸ್ ಎಸ್ ಅವರಿಗೆ ಈ ದೇಶದ ಸಂವಿಧಾನವೇ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಅಂಬಾನಿ ಮತ್ತು ಅದಾನಿಯ ವ್ಯಾಪಾರಕ್ಕಾಗಿ ವಕ್ಫ್ ಕಾಯ್ದೆ ತಂದಿದ್ದಾರೆ. ಇದರ ವಿರುದ್ಧ ಮುಸ್ಲಿಂ ಸಮುದಾಯ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.ಎಸ್ ಡಿಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮುಜೀದ್ ಮಾತನಾಡಿ, ವಕ್ಫ್ ಮಸೂದೆ ತಿದ್ದುಪಡಿ ಬಡ ಮುಸಲ್ಮಾನರ ಸಹಾಯಕ್ಕೆ ಎಂದು ಮೋದಿಯವರು ಹೇಳುತ್ತಿದ್ದಾರೆ. ಆದರೆ, ಮುಸ್ಲಿಂ ಮಕ್ಕಳಿಗೆ ನೀಡುತ್ತಿದ್ದ ಸ್ಕಾಲರ್ ಶಿಪ್ ರದ್ದು ಮಾಡಿದ್ದಾರೆ. ಬಜೆಟ್ ನಲ್ಲಿ ಇಟ್ಟಿದ್ದ ಅನುದಾನ ಕಡಿತ ಮಾಡಿದ್ದಾರೆ. ಇದೇನಾ ಮುಸ್ಲಿಂ ಸಮುದಾಯಕ್ಕೆ ಮಾಡುತ್ತಿರುವ ಸಹಾಯ ಎಂದು ಪ್ರಶ್ನಿಸಿದರು.
ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಜ್ಮಾ ನಜೀರ್ ಮಾತನಾಡಿ, ವಕ್ಫ್ ಮಸೂದೆ ತಿದ್ದುಪಡಿ ಮಾಡುತ್ತಿರುವುದು ಬಂಡವಾಳ ಶಾಹಿಗಳಿಗೆ. ಈ ಮಸೂದೆ ಜಾರಿಯಾದರೆ ನಮಾಜ್ ಮಾಡಲು ಮಸೀದಿ, ಹೆಣ ಹೂಳಲು ಖಬರಸ್ತಾನ್ ಕೂಡ ಇರಲ್ಲ. ಈಗ ಬಿಜೆಪಿ ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಬಿಜೆಪಿ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಇಫ್ತೆಕಾರ್ ಅಹಮದ್, ಹಾಮಿದುಲ್ ಹಸನ್ ಸಾಹೇಬ್, ರಿಜ್ವಾನ್ ಅಹ್ಮದ್, ಜಬೀವುಲ್ಲಾ, ಅಮ್ಜದ್ ಪಾಷ, ಜಾಗೃತ ಕರ್ನಾಟಕದ ಸುಹೇಲ್ ಅಹಮದ್, ಮೋಹನ್, ಜಿ.ಸಂತೋಷ್, ಕೃಷ್ಣ ಪ್ರಕಾಶ್, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಪೂರ್ಣಿಮಾ ಮತ್ತಿತರರಿದ್ದರು.