ಬಿಜೆಪಿ ಸೋಲಿಗೆ ಸಿದ್ದೇಶ್ವರ ಟೀಂ ಕಾರಣ

| Published : Jun 23 2024, 02:04 AM IST

ಸಾರಾಂಶ

ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ನೇತೃತ್ವದ ದಾವಣಗೆರೆ ಬಾಯ್ಸ್‌ ಟೀಂ ಸ್ವಯಂಕೃತಾಪರಾಧ ಕಾರಣವೇ ಹೊರತು, ಬೇರೆ ಯಾರೂ ಅಲ್ಲ ಎಂದು ಕ್ಷೇತ್ರದ ವಿವಿಧ ತಾಲೂಕುಗಳ ಬಿಜೆಪಿ ಮುಖಂಡರು, ಕಾರ್ಯಕರ್ತರು ದಾವಣಗೆರೆಯಲ್ಲಿ ತಿರುಗೇಟು ನೀಡಿದ್ದಾರೆ.

- ಸ್ವಯಂಕೃತ ಅಪರಾಧಕ್ಕೆ ಪಕ್ಷ ಸೋತಿದ್ದೇ ಹೊರತು, ರವೀಂದ್ರನಾಥ, ರೇಣುಕಾಚಾರ್ಯ ಕಾರಣರಲ್ಲ: ಸುರೇಶ ತಿರುಗೇಟು

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ನೇತೃತ್ವದ ದಾವಣಗೆರೆ ಬಾಯ್ಸ್‌ ಟೀಂ ಸ್ವಯಂಕೃತಾಪರಾಧ ಕಾರಣವೇ ಹೊರತು, ಬೇರೆ ಯಾರೂ ಅಲ್ಲ ಎಂದು ಕ್ಷೇತ್ರದ ವಿವಿಧ ತಾಲೂಕುಗಳ ಬಿಜೆಪಿ ಮುಖಂಡರು, ಕಾರ್ಯಕರ್ತರು ತಿರುಗೇಟು ನೀಡಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊನ್ನಾಳಿ ತಾಲೂಕು ಮಂಡಲ ಅಧ್ಯಕ್ಷ ಜೆ.ಕೆ.ಸುರೇಶ ಅವರು, ಬಿಜೆಪಿ ಸೋಲಿಗೆ ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ. ರೇಣುಕಾಚಾರ್ಯ, ಮಾಡಾಳ ವಿರೂಪಾಕ್ಷಪ್ಪ, ಮಾಡಾಳ ಮಲ್ಲಿಕಾರ್ಜುನ್‌ ಅವರ ರೆಬಲ್ ಟೀಂ ಕಾರಣವೆಂಬ ಎಸ್.ಎಂ. ವೀರೇಶ ಹನಗವಾಡಿ, ಯಶವಂತ ರಾವ್ ಜಾಧವ್, ಬಿ.ಎಸ್.ಜಗದೀಶ, ಎಚ್.ಎಸ್.ಶಿವಕುಮಾರ ತುಮ್ಕೋಸ್‌ ಆರೋಪ ಶುದ್ಧ ಸುಳ್ಳು ಎಂದರು.

ಹಿಂಬಾಲಕರ ಮಾತು ಕೇಳಿದ್ದಿರಿ:

ಸಿದ್ದೇಶ್ವರ ಜೊತೆಗಿದ್ದ ದಾವಣಗೆರೆ ಬಾಯ್ಸ್‌ಗಳ ಹೊಗಳಿಕೆ ಮಾತು, ಅತಿ ಆತ್ಮವಿಶ್ವಾಸ, ವಿವಿಧ ಕ್ಷೇತ್ರ, ತಾಲೂಕು ಮುಖಂಡರನ್ನು ಸರಿಯಾಗಿ ನಡೆಸಿಕೊಳ್ಳದಿರುವುದು ಬಿಜೆಪಿ ಸೋಲಿಗೆ ಕಾರಣ. ಹಿಂಬಾಲಕರ ಮಾತನ್ನು ಕೇಳಿಕೊಂಡು, ಕಳೆದ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಸಿದ್ದೇಶ್ವರ ಬರಲಿಲ್ಲ. ರೇಣುಕಾಚಾರ್ಯ ಅವರಿಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ಆದರೆ, ಹಿಂಬಾಲಕರ ಮಾತು ಕೇಳಿಕೊಂಡು ಸಿದ್ದೇಶ್ವರ ಸೋತಿದ್ದಾರೆ ಎಂದು ದೂರಿದರು.

ಅತಿಯಾದ ಆತ್ಮವಿಶ್ವಾಸದ ಫಲ:

ತಾವೇ ಗೆಲ್ಲುವ ಅತಿಯಾದ ಆತ್ಮವಿಶ್ವಾಸದಲ್ಲಿ ರೇಣುಕಾಚಾರ್ಯ ಅವರಿಗೆ ಪ್ರಚಾರಕ್ಕೆ ಕರೆಯಲಿಲ್ಲ. ಆದರೂ, ನಾವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿ, ರೇಣುಕಾಚಾರ್ಯರಿಗೆ ವಿಧಾನಸಭೆಗೆ ಬಂದ ಮತಕ್ಕಿಂತ ಹೆಚ್ಚು ಮತವನ್ನು ಲೋಕಸಭೆ ಚುನಾವಣೆಯಲ್ಲಿ ಹಾಕಿಸಿ, ಗೆದ್ದಿದ್ದೇವೆ. ಆದರೆ, ಸೋತ ನಂತರ ವಿನಾಕಾರಣ ರೇಣುಕಾಚಾರ್ಯ ಇತರರ ಮೇಲೆ ಅಪವಾದ ಹೊರಿಸುವುದು ಸರಿಯಲ್ಲ. ನಿಮ್ಮ ಹಿಂಬಾಲಕರ ಹೊಗಳಿ, ಅತಿ ವಿಶ್ವಾಸದ ಮಾತು ನಂಬಿ ಸೋತಿದ್ದು ನೀವೇ ಎಂದು ಟೀಕಿಸಿದರು.

ಅಹಿಂದ ಮುಖಂಡ ಚನ್ನಗಿರಿಯ ಉಮೇಶ ಕುಮಾರ ಮಾತನಾಡಿ, ಅವಿಭಜಿತ್ರ ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಎಸ್.ಎ.ರವೀಂದ್ರನಾಥ ಜಿಲ್ಲಾದ್ಯಂತ ಸುತ್ತಾಡಿ, ಪಕ್ಷ ಕಟ್ಟಿದವರು. ಈಗ ಮಾತನಾಡುತ್ತಿರುವವರು ಅಂದು ಎಲ್ಲಿದ್ದರು? ರವೀಂದ್ರನಾಥ ಬಗ್ಗೆ ಮಾತನಾಡುವ ನೈತಿಕತೆಯೇ ನಿಮಗ್ಯಾರಿಗೂ ಇಲ್ಲ. ಹೋಲಿಕೆಗೂ ಒಂದು ಮಿತಿ ಇದೆ. ಇನ್ನಾದರೂ ಬಾಯಿ ಮುಚ್ಚಿಕೊಂಡಿರಿ. ಹಿಂದೆ ರವೀಂದ್ರನಾಥ ಲೋಕಸಭೆಗೆ ಸ್ಪರ್ಧಿಸಿದ್ದಾಗ ಕೇವಲ 500 ಮತದಿಂದ ಸೋತಿದ್ದರು. ಇದನ್ನು ಮರೆಯಬೇಡಿ ಎಂದರು.

ಚುನಾವಣಾ ಫಲಿತಾಂಶದ ನಂತರ ಸಿದ್ದೇಶ್ವರ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭವು ಎಂಟೂ ಕ್ಷೇತ್ರಗಳ ಮುಖಂಡರು, ಕಾರ್ಯಕರ್ತರ ಸಮಾರಂಬ ಆಗಿರದೇ, ಹರಿಹರ ಕ್ಷೇತ್ರಕ್ಕಷ್ಟೆ ಸೀಮಿತವಾದಂತಿತ್ತು. ಅಲ್ಲಿ ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಮಾತನಾಡಿದ ಶಾಸಕ ಬಿ.ಪಿ.ಹರೀಶ ತಮ್ಮ ಕ್ಷೇತ್ರದಲ್ಲಿ ಬಿಜೆಪಿ ಹಿನ್ನಡೆಗೆ ಕಾರಣ ಏನೆಂಬುದನ್ನೂ ಸಹ ಬಹಿರಂಗಪಡಿಸಬೇಕು ಎಂದರು.

ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕುಬೇರಪ್ಪ, ಮುಖಂಡರಾದ ಅರಕೆರೆ ನಾಗರಾಜ, ನಲ್ಲೂರು ಮಂಜುನಾಥ, ಮಲ್ಲಿಕಾರ್ಜುನ, ಎನ್.ಎಚ್.ಹಾಲೇಶ, ಪ್ರವೀಣ ಜಾಧವ್‌, ಸುರೇಂದ್ರ ನಾಯ್ಕ, ಮಾರುತಿ ನಾಯ್ಕ, ನೆಲಹೊನ್ನೆ ಮಂಜುನಾಥ, ಸಂತೋಷ ಇತರರು ಇದ್ದರು.

- - -

ಬಾಕ್ಸ್‌ * 4 ಸಲ ಟಿಕೆಟ್‌ ಕೊಟ್ಟರೂ ಜಾದವ್‌ ಗೆದ್ದಿಲ್ಲ ದಾವಣಗೆರೆಯಲ್ಲಿ ಬಿಜೆಪಿಯನ್ನು ತಾನೇ ಕಟ್ಟಿ ಬೆಳೆಸಿದಂತೆ ಮಾತನಾಡುವ ಯಶವಂತ ರಾವ್ ಜಾದವ್ ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಲಿ. ದಕ್ಷಿಣದಲ್ಲಿ ಯಾವಾಗಲೂ ಕಾಂಗ್ರೆಸ್ಸಿಗೆ ಮುನ್ನಡೆಯಾಗಿದೆ. ಇದುವರೆಗೆ ಬಿಜೆಪಿಗೆ ಯಾಕೆ ಲೀಡ್ ಬಂದಿಲ್ಲ? ನಾಲ್ಕು ಸಲ ಯಶವಂತ ರಾವ್ ಜಾಧವ್‌ಗೆ ಟಿಕೆಟ್ ನೀಡಿದರೂ ಒಂದು ಸಲವೂ ಗೆಲ್ಲಲಿಲ್ಲ. ಮೊದಲು ದಕ್ಷಿಣದಲ್ಲಿ ಲೀಡ್ ಕೊಡಿಸಿ, ಆನಂತರ ಉಳಿದ ಕ್ಷೇತ್ರದ ಬಗ್ಗೆ ಯಶವಂತ ರಾವ್ ಮಾತನಾಡಲಿ. ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆಯಲ್ಲಿ ಯಾಕೆ ನೋಡುತ್ತಾರೆ ಎಂದು ಅಹಿಂದ ಮುಖಂಡ ಉಮೇಶ ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

- - -

ಕೋಟ್‌ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿಯಲ್ಲಿ ಆಗುತ್ತಿರುವ ಗೊಂದಲಗಳ ಬಗ್ಗೆ ರಾಜ್ಯ ನಾಯಕರಿಗೆ ಶೀಘ್ರವೇ ನಿಯೋಗ ಹೋಗಿ ದೂರು ನೀಡಲಿದ್ದೇವೆ. ಮತ್ತೊಮ್ಮೆ ಮುಖಂಡರು, ಕಾರ್ಯಕರ್ತರೊಂದಿಗೆ ಸಭೆ ಮಾಡಿ, ಮುಂದಿನ ತಿಂಗಳ ನಂತರ ದೂರು ನೀಡುತ್ತೇವೆ

- ಕುಬೇರಪ್ಪ, ರಾಜ್ಯ ಉಪಾಧ್ಯಕ್ಷ, ಒಬಿಸಿ ಮೋರ್ಚಾ

- - - -22ಕೆಡಿವಿಜಿ5:

ದಾವಣಗೆರೆಯಲ್ಲಿ ಶನಿವಾರ ಬಿಜೆಪಿ ಹೊನ್ನಾಳಿ ಅಧ್ಯಕ್ಷ ಜೆ.ಕೆ.ಸುರೇಶ, ಚನ್ನಗಿರಿ ಉಮೇಶಕುಮಾರ, ಕುಬೇರಪ್ಪ ಇತರರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.