ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ 22,750 ಮತಗಳ ಅಂತರದಿಂದ ಭರ್ಜರಿ ವಿಜಯ ಸಾಧಿಸಿದ್ದಾರೆ. ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಜಯಭೇರಿ ಬಾರಿಸಿದ ಡಾ.ಸರ್ಜಿ ತಮ್ಮ ಎದುರಾಳಿಗಳಿಗೆ ಯಾವುದೇ ಅವಕಾಶ ನೀಡಲಿಲ್ಲ.ಈ ಬಾರಿ ನೈಋತ್ಯ ಪದವೀಧರ ಕ್ಷೇತ್ರದಲ್ಲಿ 85 ಸಾವಿರ ಮತ ನೋಂದಣಿಯಾಗಿತ್ತು. ಚುನಾವಣೆಯಲ್ಲಿ 66,497 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ ಡಾ.ಧನಂಜಯ ಸರ್ಜಿಗೆ 37,627 ಮತ ಲಭಿಸಿದರೆ, ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ನ ಆಯನೂರು ಮಂಜುನಾಥ್ 13,516 ಮತಗಳು ಪಡೆದಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಪಿ.ದಿನೇಶ್ 2515 ಮತ, ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ 7039 ಮತ ಲಭಿಸಿದೆ.
ಚುನಾವಣಾ ಕಣದಲ್ಲಿ ಒಟ್ಟು 10 ಮಂದಿ ಸ್ಪರ್ಧಿಗಳಿದ್ದರು. ಒಟ್ಟು 66,497 ಮತ ಚಲಾವಣೆಯಾಗಿದೆ. ಈ ಪೈಕಿ ಮತಗಳು 61,382 ಸಿಂಧುವಾಗಿದ್ದವು.ವಿಶೇಷವೆಂದರೆ ಪದವೀಧರ ಕ್ಷೇತ್ರದಲ್ಲಿ 5115 ಮತಗಳು ತಿರಸ್ಕೃತಗೊಂಡಿದೆ. ಇದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಸ್. ಪಿ.ದಿನೇಶ್ ಪಡೆದ ಮತಕ್ಕಿಂತ ಸರಿ ಸುಮಾರು ಎರಡರಷ್ಟಿದೆ. ಆರಂಭದ ಸುತ್ತಿನಿಂದಲೂ ಡಾ. ಸರ್ಜಿ ಮುನ್ನಡೆ ಸಾಧಿಸುತ್ತಲೇ ಬಂದು ಬಳಿಕ ಅಂತಿಮವಾಗಿ ವಿಜಯದ ಗೆರೆ ದಾಟಿದರು. ಮತ ಎಣಿಕೆ ಮುಗಿದು ಫಲಿತಾಂಶ ಪ್ರಕಟವಾಗುವಾಗ ರಾತ್ರಿ 12 ಗಂಟೆ ದಾಟಿತ್ತು.
ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿದ್ದ ವೈದ್ಯ ಡಾ. ಧನಂಜಯ ಸರ್ಜಿ ಪ್ರಥಮ ಪ್ರಯತ್ನದಲ್ಲೇ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಗೆ ಸೋಲಿನ ರುಚಿ ತೋರಿಸಿದ್ದು, ವೃತ್ತಿಯಲ್ಲಿ ವೈದ್ಯರಾಗಿ ಅತ್ಯಂತ ಯಶಸ್ಸು ಕಂಡಿರುವ ಡಾ. ಸರ್ಜಿ ಇದೀಗ ಜನಪ್ರತಿನಿಧಿಯಾಗಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.ಮೈಸೂರಿನಲ್ಲಿ ಗುರುವಾರ ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮೊದಲನೇ ಪ್ರಾಶಸ್ತ್ಯದಲ್ಲೇ ಗೆಲುವಿನ ಘೋಷಣೆಯಾಗುತ್ತಿದ್ದಂತೆ ಹಾಜರಿದ್ದ ಬಿಜೆಪಿ ಹಿರಿಯ ನಾಯಕರು ಮತ್ತು ಕಾರ್ಯಕರ್ತರು ಸಂಭ್ರಮಾಚರಿಸಿದರು. ಚುನಾವಣಾಧಿಕಾರಿಗಳು ಡಾ.ಧನಂಜಯ ಸರ್ಜಿಗೆ ಪ್ರಮಾಣ ಪತ್ರ ವಿತರಿಸಿದರು.
ಈ ವೇಳೆ ಪತ್ನಿ ನಮಿತಾ ಸರ್ಜಿ, ಸೋದರ ಹರ್ಷ ಸರ್ಜಿ, ನಾಗವೇಣಿ ಸರ್ಜಿ ಹಾಗೂ ರಾಜ್ಯ ಪ್ರಕೋಷ್ಟಗಳ ಸಂಯೋಜಕ ಎಸ್. ದತ್ತಾತ್ರಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ. ಡಿ. ಮೇಘರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಿ. ಎಚ್. ಮಾಲತೇಶ್, ಶಿವರಾಜ್, ಜಿಲ್ಲಾ ಪ್ರಮುಖರಾದ ಮಧುಸೂದನ್, ದೇವರಾಜ್, ಡಾ. ಶ್ರೀನಿವಾಸ್ ರೆಡ್ಡಿ, ಎನ್. ಡಿ. ಸತೀಶ್, ವಿಕ್ರಮ್, ಧರ್ಮಪ್ರಸಾದ್, ವಿಕಾಸ್ ಯಳನೂರ್, ಸುರೇಖಾ ಮುರುಳೀಧರ್, ರಶ್ಮಿ ಶ್ರೀನಿವಾಸ್ ಮತ್ತಿತರರಿದ್ದರು.*ಡಾ.ಧನಂಜಯ ಸರ್ಜಿಗೆ ಅಭಿನಂದಿಸಿದ ಬಿಎಸ್ ವೈವಿಧಾನ ಪರಿಷತ್ ಚುನಾವಣೆಯಲ್ಲಿ ನೈಋತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಬಳಿಕ ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಧಾವಿಸಿದ ಡಾ.ಸರ್ಜಿ ಡಾಲರ್ಸ್ ಕಾಲನಿಯಲ್ಲಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾದರು. ಈ ವೇಳೆ ಡಾ. ಧನಂಜಯ ಸರ್ಜಿಯವರ ಯಡಿಯೂರಪ್ಪನವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಕಡೂರು ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಡಾ.ಧನಂಜಯ ಸರ್ಜಿ ಪತ್ನಿ ನಮಿತಾ ಸರ್ಜಿ, ಸೋದರ ಹರ್ಷ ಸರ್ಜಿ, ನಾಗವೇಣಿ ಸರ್ಜಿ ಮತ್ತಿತರರಿದ್ದರು.
ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಗಳು ಪಡೆದ ಮತಗಳ ವಿವರಧನಂಜಯ ಸರ್ಜಿ (ಬಿಜೆಪಿ) - 37627ಆಯನೂರು ಮಂಜುನಾಥ್ (ಕಾಂಗ್ರೆಸ್) -13516ರಘುಪತಿ ಭಟ್ (ಪಕ್ಷೇತರ)-7039ಎಸ್.ಪಿ. ದಿನೇಶ್ (ಪಕ್ಷೇತರ) -2518ಸಿರಾಜ್ ಮುಜಾಹಿದ್ ಸಿದ್ದಿಕಿ (ಪಕ್ಷೇತರ) -228ಷಡಾಕ್ಷರಪ್ಪ ಜಿ.ಆರ್ (ಪಕ್ಷೇತರ) 26ಡಾ. ಶೇಖ್ ಬಾವಾ (ಪಕ್ಷೇತರ) 77ಬಿ ಮೊಹಮ್ಮದ್ ತುಂಬ್ಲೆ (ಪಕ್ಷೇತರ) 221ದಿನಕರ್ ಉಳ್ಳಾಲ್ - (ಪಕ್ಷೇತರ)108ಸಿ.ಸಿ. ಪಾಟೀಲ್ -(ಪಕ್ಷೇತರ) 22