ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಪಿಎಸ್‌ಐ ಪರೀಕ್ಷೆ ಅಕ್ರಮ ಆರೋಪಿ ಆರ್‌ಡಿ ಪಾಟೀಲ್ ಮನೆಗೆ ಕಲಬುರಗಿ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಭೇಟಿ ನೀಡಿರೋದನ್ನು ಕಟುವಾಗಿ ಟೀಕಿಸಿರುವ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಸೋಲಿನ ಹತಾಶೆಯಲ್ಲಿ ಬಿಜೆಪಿಯಲ್ಲಿನ ಮುಖಂಡರು, ಲೋಕಸಭೆ ಅಖಾಡದಲ್ಲಿರುವವರು ಹೀಗೆಲ್ಲಾ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆಂದು ಟೀಕಿಸಿದ್ದಾರೆ.ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಡಾ. ಅಜಯ್‌ಸಿಂಗ್ ಅವರು, ಬಿಜೆಪಿ ಇತ್ತೀಚೆಗೆ ಬಿಡುಗಡೆ ಮಾಡಿರುವ ತನ್ನ ರಾಷ್ಟ್ರೀಯ ಪ್ರನಾಳಿಕೆಯಲ್ಲಿ ಯುವಕರಿಗಾಗಿ ಕೆಲವು ಸಂಗತಿ ಹೇಳಿದೆ, ಅವುಗಳಲ್ಲಿ ಪರೀಕ್ಷಾ ಅಕ್ರಮ ತಡೆಯಲು ಕಾಯ್ದೆ ತರುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ. ಮತ್ತೊಂದು ಕಡೆ ಮೋದಿ ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮದ ಮಾತುಗಳನ್ನಾಡುತ್ತಿದ್ದಾರೆ. ಕಲಬುರಗಿಯಲ್ಲಿ ನೋಡಿದರೆ ಅದೇ ಪಕ್ಷದಿಂದ ಪುನರಾಯ್ಕೆ ಬಯಿಸಿ ಕಣದಲ್ಲಿರೋ ಅಭ್ಯರ್ಥಿ ಡಾ. ಜಾಧವ್ ಭ್ರಷ್ಟಾಚಾರಿಗಳ ಮನೆಗೆ ಹೋಗಿ ಬರುತ್ತಾರೆಂದರೆ ಇದೇನು ಸಂದೇಶ ಸಾರುತ್ತದೆ ಎಂಬುದನ್ನು ಜನ ಗಮನಿಸಬೇಕು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಪಂಚ ಗ್ಯಾರಂಟಿ ಯಶಸ್ವಿ ಅನುಷ್ಠಾನದಿಂದ ಜನ ಖುಷಿಯಲ್ಲಿದ್ದಾರೆ. ಇಡೀ ರಾಷ್ಟ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಯುವ, ನಾರಿ, ಕಾರ್ಮಿಕ ನ್ಯಾಯ ಎಂದು 25ಕ್ಕೂ ಹೆಚ್ಚು ಗ್ಯಾರಂಟಿ ಘೋಷಿಸಿದೆ. ಇವುಗಳಿಂದ ಜನ ಕಾಂಗ್ರೆಸ್ ಪರ ಒಲವು ತೋರುತ್ತಿದ್ದಾರೆ. ಇದರಿಂದ ವಿಚಲಿತವಾಗಿರುವ ಬಿಜೆಪಿಯವರು ಒತ್ತಡಕ್ಕೆ ಸಿಲುಕಿ ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ಮರೆತು ವರ್ತಿಸುತ್ತಿದ್ದಾರೆಂದು ಡಾ. ಅಜಯ್ ಸಿಂಗ್ ಮಾತಲ್ಲೇ ಬಿಜೆಪಿಯವರನ್ನು ಕುಟುಕಿದ್ದಾರೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಕಾಂಗ್ರೆಸ್ ಗೆಲ್ಲುತ್ತದೆ. ಕಲ್ಯಾಣ ನಾಡಲ್ಲಿ ಕಲಬುರಗಿ, ಬೀದರ್, ರಾಯಚೂರು ಸೇರಿದಂತೆ ಎಲ್ಲಾ ಪಂಚ ಸ್ಥಾನಗಳನ್ನೂ ಕಾಂಗ್ರೆಸ್ ಗೆಲ್ಲಲಿದೆ ಎಂದು ಡಾ. ಅಜಯ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಸಾವಿರಾರು ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಪಿಎಸ್ಐ ಪರೀಕ್ಷೆ ಅಕ್ರಮ ಹಗರಣದ ಆರೋಪಿ ಮನೆಗೆ ಹೋಗಿ ಬೆಂಬಲ ಕೋರಿ ಬಂದಿರುವ ಸಂಸದ ಚುನಾವಣೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ನಡೆಯ ಬಗ್ಗೆ ಜಿಲ್ಲೆಯ ಜನರೇ ಕಣ್ಣು ತೆರೆದು ನೋಡುತ್ತಿದ್ದಾರೆ. ಅವರ ಧರಣೆ, ನಡೆ, ನುಡಜಿಗಳ ಬಗ್ಗೆ ಜನರೇ ಈ ಚುನಾವಣೆಯಲ್ಲಿ ಪಕ್ಕಾ ತೀರ್ಮಾನ ಕೈಗೊಳ್ಳುತ್ತಾರೆ. ಕಾಂಗ್ರೆಸ್ ಕೈ ಹಿಡಿದು ಬಿಜೆಪಿಯನ್ನ ಮನೆಗೆ ಕಳುಹಿಸೋದು ಗ್ಯಾರಂಟಿ ಎಂದು ಡಾ. ಅಜಯ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.