ಬಿಜೆಪಿಯವರದ್ದು ಪ್ರಚಾರವಷ್ಟೇ, ಅಭಿವೃದ್ಧಿ ಇಲ್ಲ: ಡಿ.ಸುಧಾಕರ್

| Published : Mar 03 2024, 01:37 AM IST

ಬಿಜೆಪಿಯವರದ್ದು ಪ್ರಚಾರವಷ್ಟೇ, ಅಭಿವೃದ್ಧಿ ಇಲ್ಲ: ಡಿ.ಸುಧಾಕರ್
Share this Article
  • FB
  • TW
  • Linkdin
  • Email

ಸಾರಾಂಶ

2008ರಲ್ಲಿ ನಾನು ಈ ಭಾಗದಲ್ಲಿ ಓಡಾಡುವಾಗ ಇಲ್ಲಿನ ಮಹಿಳೆಯರು ನಮಗೆ ಬೇರೇನೂ ಬೇಡ ಶುದ್ಧ ಕುಡಿಯುವ ನೀರು ಒದಗಿಸಿ ಎಂದು ಕೇಳುತ್ತಿದ್ದರು. ನಾನು ಅಂದೇ ಈ ಭಾಗಕ್ಕೆ ನೀರು ಒದಗಿಸುವ ಸಂಕಲ್ಪ ಮಾಡಿ ಸಂಬಂಧಪಟ್ಟವರ ಭೇಟಿಯಾಗಿ ಈ ಯೋಜನೆಗೆ ಚಾಲನೆ ನೀಡಿದ್ದೆ. ಯಾವುದೇ ರಾಜಕಾರಣಿಯಾಗಲಿ ಕುಡಿಯುವ ನೀರು, ವಸತಿ ಮತ್ತು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು.

ಕನ್ನಡಪ್ರಭ ವಾರ್ತೆ ಹಿರಿಯೂರು

ಬಿಜೆಪಿಯವರದ್ದು ಬರೀ ಪ್ರಚಾರದ ರಾಜಕಾರಣವಷ್ಟೇ, ಅಭಿವೃದ್ಧಿ ಮತ್ತು ಬಡವರ ಬಗೆಗಿನ ಕಾಳಜಿ ಅವರಿಗೆಂದೂ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಆರೋಪಿಸಿದರು.

ತಾಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಶನಿವಾರ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಶಂಕುಸ್ಥಾಪನೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಹರ್ತಿಕೋಟೆ ಮತ್ತು ಇತರೆ 37 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ನೀಡುವ ಯೋಜನೆ ಶುರುವಾಗುತ್ತಿದೆ. 2008ರಲ್ಲಿ ನಾನು ಈ ಭಾಗದಲ್ಲಿ ಓಡಾಡುವಾಗ ಇಲ್ಲಿನ ಮಹಿಳೆಯರು ನಮಗೆ ಬೇರೇನೂ ಬೇಡ ಶುದ್ಧ ಕುಡಿಯುವ ನೀರು ಒದಗಿಸಿ ಎಂದು ಕೇಳುತ್ತಿದ್ದರು. ನಾನು ಅಂದೇ ಈ ಭಾಗಕ್ಕೆ ನೀರು ಒದಗಿಸುವ ಸಂಕಲ್ಪ ಮಾಡಿ ಸಂಬಂಧಪಟ್ಟವರ ಭೇಟಿಯಾಗಿ ಈ ಯೋಜನೆಗೆ ಚಾಲನೆ ನೀಡಿದ್ದೆ. ಯಾವುದೇ ರಾಜಕಾರಣಿಯಾಗಲಿ ಕುಡಿಯುವ ನೀರು, ವಸತಿ ಮತ್ತು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.

ಕಾಂಗ್ರೆಸ್ ನೇತೃತ್ವದ ಸರ್ಕಾರ ಈಗಾಗಲೇ ಬಡವರ ಪರವಿರುವ ಹಲವು ಯೋಜನೆಗಳ ಜಾರಿಗೆ ತಂದು ಬಡವರ ಪರ ನಿಂತಿದೆ. ಬಿಜೆಪಿಯವರ ರೀತಿಯ ಜಾತಿ ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸಿ ರಾಜಕಾರಣವನ್ನು ನಾವೆಂದೂ ಮಾಡುವುದಿಲ್ಲ. ಬಿಜೆಪಿಗರು ಒಂದು ರೂಪಾಯಿಯಷ್ಟು ಬಡವರ ಪರ ಕೆಲಸ ಮಾಡುವುದಿಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾದವು. ಬಡವರು ಹಾಗೂ ರೈತರ ಸಾಲಮನ್ನಾಗಳಾದವು. ನಾವು ಬಡವರ ಸಾಲಮನ್ನಾ ಮಾಡುತ್ತೇವೆ. ಬಿಜೆಪಿಗರು ಶ್ರೀಮಂತರ ಸಾಲಮನ್ನಾ ಮಾಡುತ್ತಾರೆ. ನಮಗೂ ಅವರಿಗೂ ಇರುವ ವ್ಯತ್ಯಾಸ ಇಷ್ಟೇ ಎಂದರು.

617ಕ್ಕೂ ಹೆಚ್ಚು ಪದವೀಧರರು ನೋಂದಣಿ:

ತಹಸೀಲ್ದಾರ್ ರಾಜೇಶ್ ಕುಮಾರ್ ಮಾತನಾಡಿ ಸಮೀಕ್ಷೆಗಳ ಪ್ರಕಾರ ಸಹಾಯಧನ ನೀಡುವುದರಿಂದ ಜನರ ಜೀವನ ಮಟ್ಟ ಸುಧಾರಿಸುತ್ತದೆ ಎನ್ನಲಾಗಿದೆ. ಈಗಾಗಲೇ ತಾಲೂಕಿನಲ್ಲಿ ಎಲ್ಲಾ ಹಳ್ಳಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಚಾಲ್ತಿಯಲ್ಲಿದೆ. ಗೃಹಜ್ಯೋತಿ ಯೋಜನೆಯಡಿ 63 ಸಾವಿರಕ್ಕೂ ಹೆಚ್ಚು ಕುಟುಂಬಗಳು ಸರ್ಕಾರದ ಯೋಜನೆ ಲಾಭ ಪಡೆಯುತ್ತಿವೆ. 617ಕ್ಕೂ ಹೆಚ್ಚಿನ ಪದವೀಧರರು ಯುವನಿಧಿಗೆ ನೋಂದಾಯಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಒ ಸತೀಶ್ ಕುಮಾರ್, ಸಿಡಿಪಿಒ ರಾಘವೇಂದ್ರ, ಟಿಎಚ್‌ಒ ಡಾ.ವೆಂಕಟೇಶ್, ಸಮಾಜ ಕಲ್ಯಾಣ ಅಧಿಕಾರಿ ದಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈರಲಿಂಗೇಗೌಡ, ಮುಖಂಡರಾದ ಕಲ್ಲಟ್ಟಿ ತಿಪ್ಪೇಸ್ವಾಮಿ, ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಜಿಎಲ್ ಮೂರ್ತಿ,ಪ್ರತಾಪ್ ಸಿಂಹ, ಕಂದಿಕೆರೆ ಜಗದೀಶ್, ಬಿ. ಮಹoತೇಶ್, ದಯಾನಂದ, ಪಾಂಡಪ್ಪ, ಶಿವರಂಜಿನಿ ಹಾಗೂ ಏಳು ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಏಳು ಗ್ರಾಮ ಪಂಚಾಯ್ತಿಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಜರಿದ್ದರು.

ಪ್ರತಿಯೊಂದು ಹಳ್ಳಿಗೂ ಶುದ್ಧ ಕುಡಿಯುವ ನೀರು ಕೊಡುವ ನಿರ್ಧಾರ ಮಾಡಿ ಈಗಾಗಲೇ ಕಾರ್ಯರೂಪಕ್ಕೆ ಇಳಿದಿದ್ದೇವೆ. ಅಭಿವೃದ್ಧಿ ಕಾರ್ಯಗಳಿಗೂ ರಾಜ್ಯ ಸರ್ಕಾರ ಹಣ ಕೊಡಲು ಶುರು ಮಾಡಿದೆ. ಬರುವ ದಿನಗಳಲ್ಲಿ ತೀರಾ ಹದಗೆಟ್ಟು ಹೋಗಿರುವ ರಸ್ತೆಗಳ ದುರಸ್ತಿಗೆ ಆದ್ಯತೆ ನೀಡಲಾಗುವುದು. ಆದ್ದರಿಂದ ಬಡವರ ಪರವಿರುವ ಕಾಂಗ್ರೆಸ್ ಪಕ್ಷಕ್ಕೇ ಆಶೀರ್ವಾದ ಮುಂದೆಯೂ ಇರಬೇಕು.

ಡಿ. ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ