ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಕೇವಲ ‘ಗಿಮಿಕ್’ ಎಂದು ಕರೆದಿರುವ ಅರಣ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿಯವರಿಗೆ ಈಗ ಕೆಲಸವಿಲ್ಲದೆ ಬಿಡುವಾಗಿದೆ. 100-200 ಕಿಲೋಮೀಟರ್ ಪಾದಯಾತ್ರೆ ಮಾಡಿದರೆ ಅವರ ಆರೋಗ್ಯ ಚೆನ್ನಾಗಿರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್‌

ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಕೇವಲ ‘ಗಿಮಿಕ್’ ಎಂದು ಕರೆದಿರುವ ಅರಣ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿಯವರಿಗೆ ಈಗ ಕೆಲಸವಿಲ್ಲದೆ ಬಿಡುವಾಗಿದೆ. 100-200 ಕಿಲೋಮೀಟರ್ ಪಾದಯಾತ್ರೆ ಮಾಡಿದರೆ ಅವರ ಆರೋಗ್ಯ ಚೆನ್ನಾಗಿರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಬುಧವಾರ ಬೀದರ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ಆರೋಪ ಹಾಗೂ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಹರಿಹಾಯ್ದರು.

ರಾಜ್ಯದ ಕೇಂದ್ರ ಸಚಿವರ ವಿರುದ್ಧವೂ ಆರೋಪಗಳಿವೆ, ಸರಿಪಡಿಸಿಕೊಳ್ಳಲಿ: ಕೇಂದ್ರದ ಬಿಜೆಪಿ ಸರ್ಕಾರದ ಹಲವು ಸಚಿವರ ಮೇಲೆ ಗಂಭೀರ ಆರೋಪಗಳಿವೆ. ಅಷ್ಟೇ ಅಲ್ಲ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಮಂತ್ರಿಗಳ ಮೇಲೂ ಆರೋಪಗಳಿವೆ. ಮೊದಲು ಬಿಜೆಪಿ ನಾಯಕರು ತಮ್ಮ ಪಕ್ಷದ ಕೇಂದ್ರ ಸಚಿವರ ರಾಜೀನಾಮೆ ಪಡೆಯಲಿ, ಆನಂತರ ಸಚಿವ ನಾಗೇಂದ್ರ ಅವರ ರಾಜೀನಾಮೆ ಕೇಳಲಿ. ಬಿಜೆಪಿಗರು ಕೆಲಸ ಮಾಡುವವರಲ್ಲ, ಬರೀ ಮಾತುಗಾರರು, ಎಂದು ತಿರುಗೇಟು ನೀಡಿದರಲ್ಲದೆ, 2029ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೂಳಿಪಟವಾಗಿ ವಿಪಕ್ಷದಲ್ಲಿ ಕುಳಿತುಕೊಳ್ಳಲಿದೆ, ರಾಜ್ಯದಲ್ಲಂತೂ ಅದರ ಹೆಸರೇ ಇರೋಲ್ಲ ಎಂದು ಭವಿಷ್ಯ ನುಡಿದರು.

ಮಹಿಳೆಗೆ ಸಚಿವ ಸ್ಥಾನ ಪಕ್ಕಾ, ಹೈಕಮಾಂಡ್‌ ಕೈಗೊಳ್ಳಲಿದೆ ನಿರ್ಧಾರ : ಶಾಸಕರೆಲ್ಲರೂ ಸಚಿವ ಸ್ಥಾನ ಕೇಳುವುದು ಸಹಜ, ಆದರೆ ಎಲ್ಲರಿಗೂ ನೀಡಲು ಸಾಧ್ಯವಿಲ್ಲ. ಮುಂಬರುವ ಸಂಪುಟ ವಿಸ್ತರಣೆಯಲ್ಲಿ ಒಬ್ಬ ಮಹಿಳಾ ಶಾಸಕಿಗೆ ಮಂತ್ರಿ ಸ್ಥಾನ ಸಿಗುವುದು ಖಚಿತ. ಹೈಕಮಾಂಡ್ ಯಾವ ಮಹಿಳಾ ನಾಯಕಿಗೆ ಅವಕಾಶ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ರಾಮಲಿಂಗಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಚಾಮರಾಜನಗರ ಎನ್‌ಕೌಂಟರ್‌, ದಾಳಿ ಸಿಐಡಿ ತನಿಖೆಗೆ : ಚಾಮರಾಜನಗರದಲ್ಲಿ ನಡೆದ ಮೂವರು ಬೇಟೆಗಾರರಎನ್‌ಕೌಂಟರ್‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಕುರಿತಂತೆ ಮತ್ತು ಇಲಾಖೆಯ ಕ್ಯಾಂಪ್‌ಗಳು, ಕಚೇರಿ ಧ್ವಂಸ ಪ್ರಕರಣಗಳು ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳ ತನಿಖೆಯ ಜವಾಬ್ದಾರಿಯನ್ನು ಸಿಐಡಿಗೆ ವಹಿಸಿದ್ದೇವೆ ಶೀಘ್ರದಲ್ಲಿ ವರದಿ ಸಿಗಲಿದೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ವಿಪಕ್ಷಗಳಿಂದ ಸದನದ ಸಮಯ ವ್ಯರ್ಥ- ಎಚ್‌.ಕೆ.ಪಾಟೀಲ್‌: ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯು ಪಾದಯಾತ್ರೆ ಕೈಗೊಳ್ಳುತ್ತಿರುವುದು ಹಾಗೂ ಸದನದಲ್ಲಿ ಗದ್ದಲ ಎಬ್ಬಿಸುತ್ತಿರುವುದಕ್ಕೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೀದರ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ವಿಚಾರದ ಕುರಿತು ನನಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ, ಈ ಒಂದೇ ವಿಷಯವನ್ನು ಇಟ್ಟುಕೊಂಡು ಪ್ರತಿಪಕ್ಷಗಳು ಇಡೀ ಅಧಿವೇಶನದ ಸಮಯವನ್ನು ಹಾಳು ಮಾಡಿವೆ ಎಂದು ಕಿಡಿಕಾರಿದರು.

ಬರಗಾಲ ಚರ್ಚೆ ಮರೆತ ವಿಪಕ್ಷಗಳು: ರಾಜ್ಯದಲ್ಲಿ ಭೀಕರ ಬರಗಾಲ ಸೇರಿದಂತೆ ಹಲವಾರು ಜ್ವಲಂತ ಜನಪರ ಸಮಸ್ಯೆಗಳಿವೆ. ವಿಪಕ್ಷಗಳು ಈ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಸರ್ಕಾರಕ್ಕೆ ಸೂಕ್ತ ಸಲಹೆ ನೀಡುವ ಮೂಲಕ ಅಧಿವೇಶನವನ್ನು ಅರ್ಥಪೂರ್ಣ ಹಾಗೂ ಯಶಸ್ವಿಯಾಗಿಸಬಹುದಿತ್ತು. ಆದರೆ, ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳುವ ಮತ್ತು ಜನಹಿತ ಕಾಯುವ ನಿಟ್ಟಿನಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಆರೋಪಿಸಿ ಸದನದ ಅಮೂಲ್ಯ ಸಮಯವನ್ನು ಕೇವಲ ರಾಜಕೀಯ ದುರುದ್ದೇಶದ ಚರ್ಚೆ ಗಷ್ಟೇ ವ್ಯರ್ಥ ಮಾಡಿ, ಸಾರ್ವಜನಿಕರ ಹಿತಾಸಕ್ತಿಯನ್ನು ಬಿಜೆಪಿ ಗಾಳಿಗೆ ತೂರಿದೆ ಎಂದು ಅವರು ಅಸಮಾಧಾನ ಹೊರಹಾಕಿದರು.