ಕೊಪ್ಪಕ್ಷೇತ್ರದಲ್ಲಿ ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ವ್ಯವಸ್ಥಿತವಾಗಿ ತೆಗೆದುಹಾಕಲು ಬಿಜೆಪಿ ಮುಖಂಡರು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ, ಶೃಂಗೇರಿ ಶಾಸಕ ಟಿ. ಡಿ. ರಾಜೇಗೌಡರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯ ಕರ್ತರು ಹಾಗೂ ಮುಖಂಡರು ಕೊಪ್ಪ ತಾಲೂಕು ಕಚೇರಿ ಎದುರು ಬೃಹತ್ ಧರಣಿ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಶಾಸಕ ಟಿ.ಡಿ. ರಾಜೇಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ । ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಆಗ್ರಹ ।
ಕನ್ನಡಪ್ರಭ ವಾರ್ತೆ ಕೊಪ್ಪಕ್ಷೇತ್ರದಲ್ಲಿ ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ವ್ಯವಸ್ಥಿತವಾಗಿ ತೆಗೆದುಹಾಕಲು ಬಿಜೆಪಿ ಮುಖಂಡರು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ, ಶೃಂಗೇರಿ ಶಾಸಕ ಟಿ. ಡಿ. ರಾಜೇಗೌಡರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯ ಕರ್ತರು ಹಾಗೂ ಮುಖಂಡರು ಕೊಪ್ಪ ತಾಲೂಕು ಕಚೇರಿ ಎದುರು ಬೃಹತ್ ಧರಣಿ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಶಾಸಕ ಟಿ. ಡಿ. ರಾಜೇಗೌಡ ಸ್ಥಳೀಯ ಬಿಜೆಪಿ ಮುಖಂಡ ಅವರ ಸಹಚರರು ಜನಾಂಗೀಯ ದ್ವೇಷ ಹಾಗೂ ರಾಜಕೀಯ ದುರುದ್ದೇಶದಿಂದ ಫಾರಂ-7 (Form 7) ದುರುಪಯೋಗಪಡಿಸಿಕೊಂಡು, ತಪ್ಪು ಮಾಹಿತಿ ನೀಡಿ ಬರೋಬ್ಬರಿ 243 ಅರ್ಹ ಮತದಾರರ ವಿರುದ್ಧ ಆಕ್ಷೇಪಣೆ ಸಲ್ಲಿಸಿದ್ದಾರೆ. ಮತದಾರರ ಪಟ್ಟಿಯಿಂದ ಅಲ್ಪ ಸಂಖ್ಯಾತರು ಹಾಗೂ ನಮ್ಮವರ ಹೆಸರುಗಳನ್ನು ಡಿಲೀಟ್ ಮಾಡಲು ಹೀನ ಕೃತ್ಯ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎನ್.ಆರ್. ಪುರದಲ್ಲೂ 1,336 ಜನರ ಹೆಸರು ಕೈಬಿಡಲು ಯತ್ನ:
ಇದೇ ರೀತಿ ಅಕ್ರಮ ಎನ್.ಆರ್. ಪುರ ವ್ಯಾಪ್ತಿಯಲ್ಲೂ ವ್ಯಾಪಕವಾಗಿ ನಡೆದಿದೆ. ಅಲ್ಲಿಯೂ 1,336 ಅರ್ಹ ಮತದಾರರ ವಿರುದ್ಧ ತಪ್ಪು ಮಾಹಿತಿ ನೀಡಿ ಹೆಸರು ಕೈಬಿಡಲು ಪ್ರಯತ್ನಿಸಲಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಇಂತಹ ಅಕ್ರಮವನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದು ಎಚ್ಚರಿಸಿದರು.ಸಾಕ್ಷಿ ನಾಶ ಯತ್ನ: ಸುಧೀರ್ ಕುಮಾರ್ ಮುರೊಳ್ಳಿ ಕಿಡಿ:
ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ ಚುನಾವಣೆಯನ್ನು ನೇರವಾಗಿ ಎದುರಿಸಲು ಧೈರ್ಯವಿಲ್ಲದ ಬಿಜೆಪಿ, ಇಂತಹ ಹಿಂಬಾಗಿಲ ಕುತಂತ್ರಗಳ ಮೂಲಕ ಸಂವಿಧಾನ ನೀಡಿದ ಮೂಲಭೂತ ಹಕ್ಕನ್ನೇ ಕಸಿಯಲು ಹೊರಟಿದೆ. ತಾಲೂಕು ಕಚೇರಿ ಕ್ಲರ್ಕ್ ಈ ಅಪರಾಧಿಗಳ ಜೊತೆ ಸಾಮೀಲಾಗಿ ಸಾಕ್ಷ್ಯಾಧಾರ ನಾಶಮಾಡಲು ಯತ್ನಿಸುತ್ತಿರುವುದು ಅಕ್ಷಮ್ಯ ಅಪರಾಧ. ಕಂದಾಯ ಇಲಾಖೆ ಕಡತಗಳನ್ನು ಕೂಡಲೇ ಭದ್ರಪಡಿಸಬೇಕು ಹಾಗೂ ತಪ್ಪು ಮಾಹಿತಿ ನೀಡಿದ ಕಿಡಿಗೇಡಿಗಳು ಮತ್ತು ಅವರಿಗೆ ನೆರವಾದ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು ಎಂದು ತೀವ್ರವಾಗಿ ಆಗ್ರಹಿಸಿದರು.ಚುನಾವಣಾ ಆಯೋಗಕ್ಕೆ ಶಿಫಾರಸ್ಸಿಗೆ ಒತ್ತಾಯ:
ತಾಲೂಕು ಆಡಳಿತ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಬೇಕು ಮತ್ತು ಅರ್ಹ ಮತದಾರರ ಹೆಸರನ್ನು ಯಾವುದೇ ಕಾರಣಕ್ಕೂ ಕೈಬಿಡದೆ ರಕ್ಷಿಸಬೇಕೆಂದು ಮುಖಂಡರು ಮನವಿ ಮೂಲಕ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.ಧರಣಿಯಲ್ಲಿ ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನುಗ್ಗಿ ಮಂಜುನಾಥ್, ಸಾಧಿಕ್ ನಾರ್ವೆ, ಮುಖಂಡರಾದ ದಿನೇಶ್, ವಿಜಯಾನಂದ, ರಶೀದ್ ಸೇರಿದಂತೆ ಪಕ್ಷದ ಎಲ್ಲಾ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.