ಇದುವರೆಗೂ ಇ.ಡಿ. ಬಿಜೆಪಿ ಪಕ್ಷದ ಯಾವೊಬ್ಬ ಶಾಸಕ, ಸಚಿವರು, ಪ್ರಭಾವಿ ನಾಯಕರ ಮೇಲೆ ದಾಳಿ ನಡೆಸಿಲ್ಲ. ಎಲ್ಲಾ ದಾಳಿಯೂ ಕಾಂಗ್ರೆಸ್ ಬೆಂಬಲಿತ ಉದ್ಯಮಿಗಳು, ಶಾಸಕರು, ಸಚಿವರು ಹಾಗೂ ಅವರ ಆಪ್ತರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್‌ಕುಮಾರ್‌ರವರ ಚುನಾವಣಾ ಪ್ರಕ್ರಿಯೆ, ನೀತಿ-ನಿಯಮಗಳು ಕಾನೂನು ಬಾಹೀರವಾಗಿರುವುದರಿಂದ ಎಸ್‌ಐಆರ್ ಪ್ರಕ್ರಿಯೆ ರದ್ದಾಗಬೇಕು, ಜ್ಞಾನೇಶ್‌ಕುಮಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರಿನಿಂದ ಮೆರವಣಿಗೆಯಲ್ಲಿ ಆಗಮಿಸಿದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮುಖ್ಯ ಚುನಾವಣಾಧಿಕಾರಿ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕುಮಾರ್ ಕೊಪ್ಪ ಮಾತನಾಡಿ, ಬಿಜೆಪಿ ಅಧಿಕಾರದಲ್ಲಿ ಭದ್ರವಾಗಿ ನೆಲೆಯೂರಬೇಕೆಂಬ ದೃಷ್ಟಿಯಿಂದ ಮತ ಬ್ಯಾಂಕ್‌ಗೆ ನೇರವಾಗಿ ಕೈ ಹಾಕಿದೆ. ಕಾಂಗ್ರೆಸ್ ಮತ ಬ್ಯಾಂಕ್ ಹೊಂದಿರುವವರನ್ನೇ ಟಾರ್ಗೆಟ್ ಮಾಡಿಕೊಂಡಿದೆ. ಆದಾಯ ತೆರಿಗೆ ಇಲಾಖೆ, ಇ.ಡಿ ಸೇರಿದಂತೆ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಇದುವರೆಗೂ ಇ.ಡಿ. ಬಿಜೆಪಿ ಪಕ್ಷದ ಯಾವೊಬ್ಬ ಶಾಸಕ, ಸಚಿವರು, ಪ್ರಭಾವಿ ನಾಯಕರ ಮೇಲೆ ದಾಳಿ ನಡೆಸಿಲ್ಲ. ಎಲ್ಲಾ ದಾಳಿಯೂ ಕಾಂಗ್ರೆಸ್ ಬೆಂಬಲಿತ ಉದ್ಯಮಿಗಳು, ಶಾಸಕರು, ಸಚಿವರು ಹಾಗೂ ಅವರ ಆಪ್ತರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಕಾಂಗ್ರೆಸ್ ಪಕ್ಷದೊಳಗೆ ಬಿಜೆಪಿಗೆ ಪ್ರಭಾವಿ ಎದುರಾಳಿಗಳಿರಬಾರದು ಎಂಬ ಕಾರಣಕ್ಕೆ ಅವರ ಮೇಲೆ ದಾಳಿ ನಡೆಸಿ ಕುಗ್ಗಿಸುವ ಪ್ರಯತ್ನವನ್ನು ಅಧಿಕಾರದುದ್ದಕ್ಕೂ ಮಾಡಿಕೊಂಡು ಬಂದಿದೆ ಎಂದು ದೂರಿದರು.

ಕಾನೂನು ಬದ್ಧವಾಗಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಬೇಕಾದ ಚುನಾವಣಾ ಆಯೋಗ ಕೂಡ ಬಿಜೆಪಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಅದರ ನೀತಿ-ನಿಯಮಗಳೆಲ್ಲವೂ ಬಿಜೆಪಿ ಕಾರ್ಯಕಾರಿಣಿ ಮಂಡಳಿಯಲ್ಲಿ ನಿರ್ಧಾರವಾಗುತ್ತಿದೆ. ಕಾಂಗ್ರೆಸ್ ಪರವಾಗಿದ್ದ ಅಲ್ಪಸಂಖ್ಯಾತರು, ದಲಿತ ಸಮುದಾಯದವರನ್ನು ಗುರಿಯಾಗಿಸಿಕೊಂಡೇ ಬಿಜೆಪಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಕೈಗೆತ್ತಿಕೊಂಡಿತು. ಅಲ್ಪಸಂಖ್ಯಾತರು, ಕ್ರಿಶ್ಚಿಯನ್ನರು ಕಾಂಗ್ರೆಸ್ ಬಿಟ್ಟು ಬಿಜೆಪಿ ಕಡೆ ಹೋಗುವುದಿಲ್ಲ. ಇನ್ನು ಅನಕ್ಷರಸ್ಥ ದಲಿತ ಸಮುದಾಯದವರನ್ನು ಮತಪಟ್ಟಿಯಿಂದ ತೆಗೆದುಹಾಕಿದರೂ ಪ್ರಶ್ನಿಸುವುದಿಲ್ಲವೆಂಬ ಧೈರ್ಯದೊಂದಿಗೆ ನೇರವಾಗಿ ಮತಪಟ್ಟಿ ಪರಿಷ್ಕರಣೆಗಿಳಿದು ಪ್ರತಿ ರಾಜ್ಯದಲ್ಲೂ ಕೋಟ್ಯಂತರ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ, ಪರಿಷ್ಕರಣೆ ಹೆಸರಿನಲ್ಲಿ ಮತದಾರರ ಮಾರಣಹೋಮ ನಡೆಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯನ್ನು ರಾಹುಲ್‌ ಗಾಂಧಿ ಟೀಕಿಸಿದಾಗ ಎಲ್ಲರೂ ಅವರನ್ನು ಅಪಹಾಸ್ಯ ಮಾಡಿದರು. ಪತ್ರಕರ್ತೆ ರಿತಿಕಾ ಚೋಪ್ರಾ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಹಿಂದಿನ ಕುತಂತ್ರವನ್ನು ಬಯಲಿಗೆಳೆದರು. ಬಿಜೆಪಿಯಲ್ಲಿರುವ ಚುನಾವಣಾ ತಂತ್ರಗಾರಿಕೆ ವಿಭಾಗ ಪ್ರಧಾನಿ ಮೋದಿ ನೇತೃತ್ವದಲ್ಲಿದ್ದು ಅದರ ಮುಖ್ಯ ಸಲಹೆಗಾರ ಜ್ಞಾನೇಶ್‌ಕುಮಾರ್ ಆಗಿದ್ದಾರೆ. ಅವರು ಮುಂದಿನ ದಿನಗಳಲ್ಲಿ ರಾಜಕಾರಣ ಸೇರಿ ಸಂಸದರು, ಸಚಿವರಾಗುವ ಸಾಧ್ಯತೆಗಳೂ ಇವೆ. ಅದಕ್ಕಾಗಿ ಬಿಜೆಪಿ ಹೇಳಿದಂತೆ ನಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ಸರ್ವೋಚ್ಛ ನ್ಯಾಯಾಲಯ ಸಂವಿಧಾನದ ೧೪೨ನೇ ವಿಧಯನ್ನು ಬಳಸಿ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್‌ಕುಮಾರ್ ವಿರುದ್ಧ ದೇಶದ್ರೋಹ ಮೊಕದ್ದಮೆ ದಾಖಲಿಸಿ ಬಂಧಿಸಬೇಕು. ಅವರ ನೇತೃತ್ವದಲ್ಲಿ ನಡೆದ ಎಲ್ಲಾ ಚುನಾವಣೆಗಳು ರದ್ದಾಗಬೇಕು. ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ನೀತಿ-ನಿಯಮಗಳನ್ನೊಳಗೊಂಡ ೨೦೨೩ರ ತಿದ್ದುಪಡಿ ಕಾಯಿದೆ ರದ್ದಾಗಬೇಕು. ಚುನಾವಣೆ ಪ್ರಕ್ರಿಯೆಯಲ್ಲಿ ಎವಿಎಂ ಪದ್ಧತಿ ರದ್ದುಗೊಂಡು ಬ್ಯಾಲೆಟ್ ಪೇಪರ್ ಪದ್ಧತಿಯನ್ನು ಮರು ಜಾರಿಗೊಳಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ನಾಗೇಂದ್ರಕುಮಾರ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ನಗರಸಭೆ ಮಾಜಿ ಸದಸ್ಯ ಶ್ರೀಧರ್, ಮುಖಂಡರಾದ ಚಿಕ್ಕಬಳ್ಳಿ ಕೃಷ್ಣ, ಸಿ.ಎಂ.ದ್ಯಾವಪ್ಪ, ಸುರೇಶ್, ರುದ್ರಪ್ಪ, ಚಿನಕುರಳಿ ರಮೇಶ್, ಚನ್ನಪ್ಪ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶುಭದಾಯಿನಿ, ಶಕುಂತಲ, ನಾಗಮ್ಮ, ಕಮಲಾ, ಯಶೋದಾ, ಜಯಲಕ್ಷ್ಮೀ, ಆಸಿಫ್ ಪಾಷಾ, ಮತ್ತಿತರರಿದ್ದರು.

ಪ್ರತಿಕೃತಿ ದಹನಕ್ಕೆ ಯತ್ನ: ಮಾತಿನ ಚಕಮಕಿಕನ್ನಡಪ್ರಭ ವಾರ್ತೆ ಮಂಡ್ಯಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್‌ಕುಮಾರ್‌ ಪ್ರತಿಕೃತಿಯನ್ನು ದಹಿಸಲು ಕಾಂಗ್ರೆಸ್‌ ಕಾರ್ಯಕರ್ತರು ಮುಂದಾದಾಗ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ತೆರಳುವ ವೇಳೆ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಪ್ರತಿಕೃತಿಯನ್ನು ದಹಿಸಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾದರು. ಇದನ್ನು ಕಂಡ ಪೊಲೀಸರು ಅವಕಾಶ ಕೊಡದೆ ಪ್ರತಿಕೃತಿಯನ್ನು ಕಿತ್ತುಕೊಂಡರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಕೆಲ ಹೊತ್ತು ವಾಗ್ವಾದ, ತಳ್ಳಾಟ-ನೂಕಾಟ ನಡೆಯಿತು. ಪೊಲೀಸರಿಂದ ಪ್ರತಿಕೃತಿಯನ್ನು ಕಿತ್ತುಕೊಂಡ ಕಾರ್ಯಕರ್ತರು ದಹಿಸಲು ಮುಂದಾದರು. ಆದರೆ, ಬೆಂಕಿ ಹಚ್ಚುವ ವೇಳೆಗೆ ಪೊಲೀಸರು ಮತ್ತೆ ಪ್ರತಿಕೃತಿಯನ್ನು ಕಸಿದುಕೊಂಡು ದೂರಕ್ಕೆ ಕೊಂಡೊಯ್ದರು.