ಬಿಜೆಪಿಯಿಂದ ಬಂಡವಾಳಶಾಹಿ ಪರ ನೀತಿ

| Published : Apr 28 2025, 12:48 AM IST

ಸಾರಾಂಶ

ಕಾರ್ಮಿಕರ, ರೈತರ ಹಕ್ಕುಗಳ ಮೇಲೆ ದಾಳಿ ನಡೆಸಿದೆ. ವ್ಯವಸ್ಥೆಯು ಹೆಚ್ಚು ಹೆಚ್ಚು ಫ್ಯಾಸಿಸ್ಟ್ ಲಕ್ಷಣ ಪಡೆಯುತ್ತಿದೆ. ದೇಶದ ಸಮಸ್ಯೆಗಳ ವಿರುದ್ಧ ಹೋರಾಡುವವರನ್ನು, ಸರ್ಕಾರವನ್ನು ಪ್ರಶ್ನೆ ಮಾಡುವವರನ್ನು ಸುಳ್ಳು ಕೇಸುಗಳ ಮೂಲಕ ಜೈಲಿಗೆ ಕಳುಹಿಸಲಾಗುತ್ತಿದೆ

ಬಳ್ಳಾರಿ: ಬಹುಸಂಖ್ಯಾತ ಹಿಂದೂಗಳ ಅಸ್ತಿತ್ವವೇ ಅಪಾಯದಲ್ಲಿದೆ ಎಂಬ ಪ್ರಚಾರ ಬಿಜೆಪಿ-ಸಂಘ ಪರಿವಾರ ಮಾಡುತ್ತಲೇ ಇದೆ. ಇದರ ಮೂಲಕ ಬೆಲೆ ಏರಿಕೆ, ನಿರುದ್ಯೋಗ, ಶಿಕ್ಷಣದ ಖಾಸಗೀಕರಣ, ಭ್ರಷ್ಟಾಚಾರ, ಪರಿಸರ ನಾಶ ಮುಂತಾದ ಎಲ್ಲ ನೈಜ ಸಮಸ್ಯೆ ಮರೆಮಾಚಲಾಗುತ್ತಿದೆ ಎಂದು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಸೋಮಶೇಖರ್ ತಿಳಿಸಿದರು.

ಪಕ್ಷದ ಕಚೇರಿಯಲ್ಲಿ ಜರುಗಿದ ಎಸ್‌ಯುಸಿಐ(ಸಿ) ಪಕ್ಷದ 78ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 11 ವರ್ಷಗಳಿಂದ ಕೋಮುವಾದಿ, ಬಂಡವಾಳಶಾಹಿಪರ ನೀತಿಗಳನ್ನು ನಿರಂತರವಾಗಿ ಪಾಲಿಸುತ್ತಾ ಬಂದಿದೆ. ಕಾರ್ಮಿಕರ, ರೈತರ ಹಕ್ಕುಗಳ ಮೇಲೆ ದಾಳಿ ನಡೆಸಿದೆ. ವ್ಯವಸ್ಥೆಯು ಹೆಚ್ಚು ಹೆಚ್ಚು ಫ್ಯಾಸಿಸ್ಟ್ ಲಕ್ಷಣ ಪಡೆಯುತ್ತಿದೆ. ದೇಶದ ಸಮಸ್ಯೆಗಳ ವಿರುದ್ಧ ಹೋರಾಡುವವರನ್ನು, ಸರ್ಕಾರವನ್ನು ಪ್ರಶ್ನೆ ಮಾಡುವವರನ್ನು ಸುಳ್ಳು ಕೇಸುಗಳ ಮೂಲಕ ಜೈಲಿಗೆ ಕಳುಹಿಸಲಾಗುತ್ತಿದೆ. ಕಾಂಗ್ರೆಸ್ ಕೂಡ ಬಂಡವಾಳಶಾಹಿ ಪಕ್ಷವೇ ಆಗಿರುವುದರಿಂದ ಇಂತಹ ಫ್ಯಾಸಿಸ್ಟ್ ಕ್ರಮ ಪರಿಣಾಮಕಾರಿಯಾಗಿ ಪ್ರತಿರೋಧಿಸುತ್ತಿಲ್ಲ. ಬದಲಿಗೆ ಕರ್ನಾಟಕದಲ್ಲಿ ಆಳುತ್ತಿರುವ ಕಾಂಗ್ರೆಸ್ ಸರ್ಕಾರವು ಅಪ್ಪಟ ಜನವಿರೋಧಿ ನೀತಿ ಪಾಲಿಸುತ್ತಿದೆ. ಹಾಲು, ವಿದ್ಯುತ್, ಆಸ್ತಿ ತೆರಿಗೆ, ಡೀಸೆಲ್, ಸಾರಿಗೆ, ನೀರು, ಕೇಸ್ ವಿಲೇವಾರಿ ಸೇರಿದಂತೆ ಎಲ್ಲ ಅವಶ್ಯಕತೆಗಳ ದರ ಏರಿಕೆ ಮಾಡುತ್ತಿದೆ ಎಂದು ದೂರಿದರಲ್ಲದೆ, ಶೋಷಿತ ಜನತೆ ಸಂಘಟಿತರಾಗಿ, ಜನ ಸಮಿತಿ ರಚಿಸಿಕೊಂಡು, ಜ್ವಲಂತ ಸಮಸ್ಯೆಗಳ ವಿರುದ್ಧ ಶಿಸ್ತು ಬದ್ಧ, ಧೀರ್ಘಕಾಲಿನ ಹೋರಾಟಗಳಿಗೆ ಸನ್ನದ್ಧರಾಗಬೇಕು. ಈ ಮೂಲಕ ಬಂಡವಾಳಶಾಹಿ ವ್ಯವಸ್ಥೆ ಕೊನೆಗಾಣಿಸಿ ಸಮಾಜವಾದಿ ವ್ಯವಸ್ಥೆಗೆ ಮುನ್ನುಡಿ ಬರೆಯಬೇಕು ಎಂದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಮಾತನಾಡಿ, ಶಿವದಾಸ್ ಘೋಷ್ ಅವರು 1948ರಲ್ಲಿ ಈ ನೆಲದ ನೈಜ ಕಮ್ಯುನಿಸ್ಟ್ ಪಕ್ಷ ಎಸ್‌ಯುಸಿಐ(ಸಿ)ನ್ನು ಸ್ಥಾಪಿಸಿದರು. ಕಾರ್ಮಿಕ ವರ್ಗದ ಮಹಾನ್ ನಾಯಕರಾಗಿ, ಮಹಾನ್ ಮಾರ್ಕ್ಸ್ ವಾದಿ ಚಿಂತಕರಾಗಿ ಹೊರಹೊಮ್ಮಿದರು. ಇಂದು ಈ ಪಕ್ಷ ಮತ್ತು ಅದರ ಮುಂದಳಗಳು ದೇಶದ 25ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಕ್ರಿಯವಾಗಿವೆ ಎಂದು ತಿಳಿಸಿದರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯೆ ಮಂಜುಳಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಜಿಲ್ಲಾ ಪ್ರಮುಖ ಎ.ದೇವದಾಸ್,ಸೋಮಶೇಖರ ಗೌಡ, ಡಾ. ಪ್ರಮೋದ್, ಎ.ಶಾಂತಾ, ಗೋವಿಂದ್, ಈಶ್ವರಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಮುನ್ನ ಶಿವದಾಸ್ ಘೋಷ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಪಕ್ಷದ ಕಾರ್ಯಕರ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.