ಕಾಂಗ್ರೆಸ್‌ ವಿರುದ್ಧ ನಾಳೆ ಬಿಜೆಪಿ ಜನಾಕ್ರೋಶ

| Published : Apr 16 2025, 12:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಹಾಗೂ ಜನವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿಯಿಂದ ರಾಜ್ಯಮಟ್ಟದ ಜನಾಕ್ರೋಶ ಯಾತ್ರೆ ಏಪ್ರಿಲ್ 17ರಂದು ವಿಜಯಪುರ ತಲುಪಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಹಾಗೂ ಜನವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿಯಿಂದ ರಾಜ್ಯಮಟ್ಟದ ಜನಾಕ್ರೋಶ ಯಾತ್ರೆ ಏಪ್ರಿಲ್ 17ರಂದು ವಿಜಯಪುರ ತಲುಪಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 4ಗಂಟೆಗೆ ನಗರದ ಶಿವಾಜಿ ವೃತ್ತದಿಂದ ಮೆರವಣಿಗೆ ಆರಂಭವಾಗಿ ದರಬಾರ ಗ್ರೌಂಡ್‌ನಲ್ಲಿ ಬೃಹತ್ ಜನಜಾಗೃತಿ ಸಭೆ ನಡೆಸಲಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ತಂಡ ಬೃಹತ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಜಿಲ್ಲೆಯ ಎಲ್ಲ ಕ್ಷೇತ್ರಗಳ‌ ನಾಯಕರು, ಕಾರ್ಯಕರ್ತರು ಸೇರಿ ಹತ್ತು ಸಾವಿರಕ್ಕೂ ಅಧಿಕ ಜನರು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಲೆ ಏರಿಕೆಯೊಂದೆ ಮಹಾಸಾಧನೆ ಮಾಡಿದೆ. ಎಸ್ಸಿ, ಎಸ್ಟಿ ಅನುದಾನ ದುರುಪಯೋಗ, ರೈತರ ಯೋಜನೆಗಳಿಗೆ ಅನ್ಯಾಯ ಮಾಡಿದೆ. ಹೀಗಾಗಿ ಮುಂಬರುವ ಚುನಾವಣೆ ಭಯದಿಂದ ಕಾಂಗ್ರೆಸ್ ಅಲ್ಪಸಂಖ್ಯಾತರ ಗುತ್ತಿಗೆದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರಿಗೆ ಶೇ.4 ರಷ್ಟು ಮೀಸಲಾತಿ ಘೋಷಣೆ ಮಾಡಿದೆ. ಕಾಂಗ್ರೆಸ್ ಧೋರಣೆ ಖಂಡಿಸಿ ಬಿಜೆಪಿ ಜನಜಾಗೃತಿ ಸಮಾವೇಶ ಆಯೋಜನೆ ಮಾಡುತ್ತಲಿದೆ. ಆದರೆ, ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿರುವ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತದಂತೆ. ಕೇಂದ್ರ ಬೆಲೆ ಏರಿಕೆ ಮಾಡಿಲ್ಲವಾ ಎಂದು ಕೇಳುವ ಸಿಎಂ ಅವರೇ ನಿಮ್ಮ ಹಾಗೆ ಅವರು ಎಲ್ಲ ವಸ್ತುಗಳ ಮೇಲೆ ಬೆಲೆ ಏರಿಸಿಲ್ಲ. ಸಾಲ‌ ಮಾಡಿದ್ದರೂ ಆ ಹಣವನ್ನು ಅಭಿವೃದ್ಧಿಗೆ ಬಳಸಲಾಗುತ್ತಿದೆ. ಹೀಗಾಗಿ ಕೇಂದ್ರಕ್ಕೆ ಪ್ರಶ್ನಿಸುವ ನೈತಿಕತೆ ನಿಮಗಿಲ್ಲ. ಮಾರುವೇಶ ಹಾಕಿಕೊಂಡು ರಾಜ್ಯ ಸಂಚಾರ ಮಾಡಿದರೆ ಗೊತ್ತಾಗುತ್ತದೆ. ರಾಜ್ಯದಲ್ಲಿ ಸಿಎಂ ಮಾತ್ರ ಆರಾಮಾಗಿದ್ದು, ಅವರನ್ನು ಹೊರತುಪಡಿಸಿ ಕಾಂಗ್ರೆಸ್ ಶಾಸಕರು ನೆಮ್ಮದಿಯಿಲ್ಲ ಎಂದು ಟೀಕಿಸಿದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಏ.17ರ ಜನಾಕ್ರೋಶ ಸಭೆಯಲ್ಲಿ ಎಲ್ಲರು ಭಾಗಿಯಾಗಬೇಕು ಎಂದು ಮನವಿ ಮಾಡಿದರು. ರಾಜ್ಯ ಹಾಗೂ ಜಿಲ್ಲೆಯ ಜನರ ಬಗ್ಗೆ ಆಕ್ರೋಶದ ಸಭೆ ನಡೆಸಲಾಗುತ್ತಿದೆ. ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ಹಣವಿಲ್ಲ, ಮಹಾನಗರ ಪಾಲಿಕೆಗಳಲ್ಲಿ ಕಸ ತೆಗೆಯುವ ವಾಹನಗಳಿಗೆ ಡಿಸೇಲ್ ಹಾಕಲು ಹಣವಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ನನಗೆ 180 ಬೋರವೆಲ್ ಮಂಜೂರಾಗಿವೆ ಎಂದರು. ನಾನು ಜನರಿಗೆ ಹೇಳಿದ ಬಳಿಕ ನನಗೆ 30 ಬೋರವೆಲ್ ಮಾತ್ರ ಮಂಜೂರು ಹಾಕಿದರು. ಉಳಿದ ಹಣವನ್ನೆಲ್ಲ ಗ್ಯಾರಂಟಿಗೆ ಹಾಗೂ ಚುನಾವಣೆಗೆ ಬಳಸಿದರು. ನಿಮಗೆ ನೈತಿಕತೆ ಇದ್ದರೆ, ಮಾನ ಮರ್ಯಾದೆಯಿಂದ ತಕ್ಷಣವೇ ರಾಜೀನಾಮೆ ನೀಡಿ ಅಥವಾ ಸರ್ಕಾರ ವಿಸರ್ಜಿಸಿ ಚುನಾವಣೆಗೆ ಬನ್ನಿ ಎಂದು ಸವಾಲು ಹಾಕಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮುಖಂಡರಾದ ವಿಜುಗೌಡ ಪಾಟೀಲ, ಸುರೇಶ ಬಿರಾದಾರ, ಕಾಸುಗೌಡ ಬಿರಾದಾರ, ಸೋಮನಗೌಡ ಸಾಸನೂರ, ಚಂದ್ರಶೇಖರ ಕವಟಗಿ, ಸಂಜಯ ಐಹೊಳ್ಳಿ, ವಿಜಯ ಜೋಶಿ ಉಪಸ್ಥಿತರಿದ್ದರು.

-----------