ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
‘ರಾಷ್ಟ್ರ ರಕ್ಷಣೆಗಾಗಿ ನಾಗರಿಕರು’ ಅಡಿಯಲ್ಲಿ ಆಪರೇಷನ್ ಸಿಂದೂರದ ಜೊತೆ ನಾವಿದ್ದೇವೆ, ಭಾರತದ ಸೇನೆ ಜೊತೆ ನಾವೆಲ್ಲರೂ ಇದ್ದೇವೆ ಎಂದು ಸಂದೇಶ ನೀಡುವ ಸಲುವಾಗಿ ರಾಜ್ಯ ಬಿಜೆಪಿಯು ಈ ತಿಂಗಳ 15ರಿಂದ 23ರವರೆಗೆ ರಾಜ್ಯಾದ್ಯಂತ ‘ತಿರಂಗಾ ಯಾತ್ರೆ’ ಹಮ್ಮಿಕೊಳ್ಳಲು ನಿರ್ಧರಿಸಿದೆ.ಈ ಯಾತ್ರೆಯಲ್ಲಿ ಎಲ್ಲರೂ ಪಾಲ್ಗೊಳ್ಳಲಿ, ಪಕ್ಷಾತೀತವಾಗಿರಲಿ ಎಂಬ ಉದ್ದೇಶದಿಂದ ಪಕ್ಷದ ಚಿಹ್ನೆ ಬಳಸುವುದಿಲ್ಲ. ಬದಲಿಗೆ ರಾಷ್ಟ್ರಧ್ವಜ ಬಳಸಲಾಗುತ್ತದೆ. 15ರಂದು ಗುರುವಾರ ರಾಜಧಾನಿ ಬೆಂಗಳೂರಿನಲ್ಲಿ, 16 ಮತ್ತು 17 ರಂದು ಜಿಲ್ಲಾ ಕೇಂದ್ರಗಳಲ್ಲಿ ಹಾಗೂ 18 ರಿಂದ 23 ರವರೆಗೆ ತಾಲ್ಲೂಕು ಕೇಂದ್ರಗಳಲ್ಲಿ ತಿರಂಗಾ ಯಾತ್ರೆ ನಡೆಸಲು ಉದ್ದೇಶಿಸಲಾಗಿದೆ. ಮಂಗಳವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಗುರುವಾರ ನಗರದ ಮಲ್ಲೇಶ್ವರದ ಸಂಪಿಗೆ ರಸ್ತೆಯ ಸಿರೂರು ಆಟದ ಮೈದಾನದಿಂದ ಯಾತ್ರೆ ಆರಂಭವಾಗಿ 18ನೇ ಅಡ್ಡರಸ್ತೆವರೆಗೂ ನಡೆಯಲಿದೆ. ಪಕ್ಷತೀತವಾಗಿ ನಡೆಯುವ ಈ ಯಾತ್ರೆಯಲ್ಲಿ ಪಕ್ಷದ ಯಾವುದೇ ಬ್ಯಾನರ್‌ಗಳು ಇರುವುದಿಲ್ಲ. ವೈದ್ಯರು, ಎಂಜಿನಿಯರ್‌ಗಳು, ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಎಲ್ಲರೂ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಭಾರತದ ತಾಯಂದಿರ ಸಿಂದೂರ ಅಳಿಸಿದರೆ ಏನು ಆಗುತ್ತದೆ ಎಂಬುದನ್ನು ನಮ್ಮ ಸೇನೆಯು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದೆ ಮತ್ತು ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದೆ. ಸುಮಾರು 100ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ. ಪಾಕಿಸ್ತಾನದ ಉಗ್ರರ ಸ್ಥಳಗಳನ್ನು ಈಗಾಗಲೇ ಧ್ವಂಸಗೊಳಿಸಲಾಗಿದೆ. ಪಾಕಿಸ್ತಾನವು ಕೊನೆಗೆ ಈ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಅಂಗಲಾಚುವ ಸ್ಥಿತಿಗೆ ನಮ್ಮ ಸೈನಿಕರು ತಂದಿದ್ದಾರೆ. ಭಾರತ ಎಂದೂ ಉಗ್ರವಾದವನ್ನು ಸಹಿಸಲ್ಲ ಅನ್ನುವ ಸಂದೇಶವನ್ನು ಇಡೀ ಪ್ರಪಂಚಕ್ಕೆ ನೀಡಿದ್ದಾರೆ ಎಂದು ಹೇಳಿದರು.ಕಾಂಗ್ರೆಸ್ ನಾಯಕರು ಒಡಕು ಮಾತುಗಳನ್ನು ಆಡಬಾರದು. ಇಂದು ನಮ್ಮ ಸೈನಿಕರು ಕಾಶ್ಮೀರ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ನಮ್ಮದು ಎಂದು ತೋರಿಸಿಕೊಟ್ಟಿದ್ದಾರೆ. ಅಲ್ಲದೆ ನಮ್ಮ ಪ್ರಧಾನ ಮೋದಿ ಅವರು ಸಹ ಹೇಳಿದ್ದಾರೆ. ಪಾಕಿಸ್ತಾನ ಅಕ್ರಮಿತ ಕಾಶ್ಮೀರವನ್ನು ನಾವು ವಾಪಸ್ ಪಡೆಯುತ್ತೇವೆ ಹಾಗೂ ಸಿಂಧೂ ನದಿಯ ಯಾವುದೇ ಒಪ್ಪಂದವನ್ನು ಮಾಡುವುದಿಲ್ಲ ಎಂದಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕರಿಗೆ ಮತ್ತು ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿರುವ ನಮ್ಮ ಸೈನಿಕರಿಗೆ ಗೌರವ ನೀಡುವ ಸಲುವಾಗಿ ಈ ತಿರಂಗಾ ಯಾತ್ರೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಶಾಸಕರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.