ನಮಗೆ ಅಭ್ಯರ್ಥಿ ಮುಖ್ಯವಲ್ಲ ಬಿಜೆಪಿ ಗೆಲುವು ಮುಖ್ಯ: ಶಾಸಕ ಬಾಲಚಂದ್ರ ಜಾರಕಿಹೊಳಿ

| Published : Mar 23 2024, 01:02 AM IST

ನಮಗೆ ಅಭ್ಯರ್ಥಿ ಮುಖ್ಯವಲ್ಲ ಬಿಜೆಪಿ ಗೆಲುವು ಮುಖ್ಯ: ಶಾಸಕ ಬಾಲಚಂದ್ರ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡಲಗಿ ತಾಲೂಕಿನ ಕಲ್ಲೋಳಿಯಲ್ಲಿ ಕಲ್ಲೋಳಿ ಸೌಹಾರ್ದ ಸಹಕಾರಿ ಬ್ಯಾಂಕಿನ ಸಭಾಗೃಹದಲ್ಲಿ ಜರುಗಿದ ಅರಭಾವಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ ಲೋಕಸಭೆಗೆ ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗಟ್ಟಾಗಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತರಿಗೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಬೆಳಗಾವಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಇನ್ನೆರಡು ದಿನಗಳಲ್ಲಿ ಅಂತಿಮವಾಗಲಿದ್ದು, ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗಟ್ಟಾಗಿ ನಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಗುರುವಾರ ತಾಲೂಕಿನ ಕಲ್ಲೋಳಿಯಲ್ಲಿ ಕಲ್ಲೋಳಿ ಸೌಹಾರ್ದ ಸಹಕಾರಿ ಬ್ಯಾಂಕಿನ ಸಭಾಗೃಹದಲ್ಲಿ ಜರುಗಿದ ಅರಭಾವಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ನಾಯಕರು ಬಿಜೆಪಿ ಹೈಕಮಾಂಡ್ ನಿರ್ಣಯಕ್ಕೆ ಬದ್ಧರಾಗಿ ಚುನಾವಣೆಯ ಕೆಲಸ ಮಾಡೋಣವೆಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗಬೇಕೆಂಬುದು ಇಡೀ ದೇಶದ ಜನರ ಸಂಕಲ್ಪವಾಗಿದೆ. ನಮ್ಮ ಗುರಿ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು. ಮೂರನೇ ಬಾರಿಗೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು. ಈ ನಿಟ್ಟಿನಲ್ಲಿ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿಯೂ ಕಮಲ ಅರಳಬೇಕು. ಅಭ್ಯರ್ಥಿ ಯಾರೇ ಕಣಕ್ಕಿಳಿದರೂ ಪಕ್ಷದ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳ ಮುಖಂಡರು ಒಂದಾಗಿ ಪ್ರಚಾರ ಕಾರ್ಯದಲ್ಲಿ ತೊಡಗಬೇಕು. ನಮಗೆ ಅಭ್ಯರ್ಥಿ ಮುಖ್ಯವಲ್ಲ. ಪಕ್ಷದ ಗೆಲುವು ಮುಖ್ಯ. ಮತ್ತೊಮ್ಮೆ ಬಿಜೆಪಿ ಬಾವುಟ ಹಾರಿಸುವ ಮೂಲಕ ಮೋದಿಯವರ ಕೈ ಬಲಪಡಿಸೋಣ ಎಂದು ಹೇಳಿದರು.

ಮೇ 7ರಂದು ನಡೆಯುವ ದ್ವಿತೀಯ ಹಂತದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಲ್ಲೋಳಿಯಿಂದಲೇ ಪ್ರಚಾರ ಕಾರ್ಯ ನಡೆದಿರುವುದು ಸಂತಸ ಮೂಡಿಸಿದೆ. ಈಗಿರುವ ಬೂತ್‌ಮಟ್ಟದ ಕಾರ್ಯಕರ್ತರ ಯಾದಿಯನ್ನು ಪರಿಷ್ಕರಣೆ ಮಾಡಿ ಗೆಲುವಿಗೆ ಸುಗಮ ಹಾದಿ ಹುಡುಕಬೇಕು. ಕ್ಷೇತ್ರದಾದ್ಯಂತ ಕಾರ್ಯಕರ್ತರನ್ನು ನಿಯೋಜನೆ ಮಾಡಿ ಅಭ್ಯರ್ಥಿ ಗೆಲುವಿಗೆ ಮುನ್ನುಡಿ ಬರೆಯಬೇಕು. ಕಾರ್ಯಕರ್ತರಿಂದಲೇ ಬಿಜೆಪಿ ವಿಶ್ವದಾದ್ಯಂತ ದೊಡ್ಡ ಪಕ್ಷವಾಗಿ ಬೆಳೆದಿದೆ ಎಂದರು.

ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ನಾನೂ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಈ ಹಿಂದೆ ಶಾಸಕನಾಗಿ ಕೆಲಸ ಮಾಡಿದ್ದೇನೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಶಿಸ್ತಿನ ಸಿಪಾಯಿಯಾಗಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ. ನನಗೂ ಸಂಸದನಾಗಬೇಕೆಂಬ ಆಕಾಂಕ್ಷೆ ಇದೆ. ಆದರೆ ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿರುವೆ ಎಂದ ಅವರು, ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಸುಮಾರು 1.40 ಲಕ್ಷ ಮತಗಳ ಮುನ್ನಡೆಯನ್ನು ನೀಡಲಿದ್ದಾರೆ. ಇವರು ಬಿಜೆಪಿಯ ಆಸ್ತಿ ಎಂದು ಬಣ್ಣಿಸಿದರು.

ಬೆಳಗಾವಿ(ಗ್ರಾ) ಜಿಲ್ಲಾಧ್ಯಕ್ಷ ಸುಭಾಶ ಪಾಟೀಲ ಮಾತನಾಡಿ, ಅರಭಾವಿ ಮತ್ತು ಗೋಕಾಕ ಕ್ಷೇತ್ರದಲ್ಲಿ ಅಭ್ಯರ್ಥಿಗೆ ಹೆಚ್ಚಿನ ಮುನ್ನಡೆ ನೀಡೋಣವೆಂದರು.

ವೇದಿಕೆಯಲ್ಲಿ ಜಯಪ್ರಕಾಶ, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಲಕ್ಷ್ಮಣ ತಪಸಿ, ಡಾ.ಕೆ.ವಿ.ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಮುತ್ತೆಪ್ಪ ಮನ್ನಾಪೂರ, ರಾಮಣ್ಣ ಹಂದಿಗುಂದ, ರವೀಂದ್ರ ಸಣ್ಣಕ್ಕಿ, ಸುಭಾಸ ಕುರಬೇಟ, ಹಣಮಂತ ಗುಡ್ಲಮನಿ, ಪರಸಪ್ಪ ಬಬಲಿ, ಶಿವಾನಂದ ಕಮತಿ, ಮುತ್ತೆಪ್ಪ ಕುಳ್ಳೂರ, ಇಂದಿರಾ ಅಂತರಗಟ್ಟಿ, ಬಿ.ಬಿ. ದಾಸನವರ, ಮಲ್ಲಪ್ಪ ಹೆಬ್ಬಾಳ, ಮಹಾಂತೇಶ ಕುಡಚಿ, ಅನ್ವರ್‌ ನದಾಫ್‌ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಮುಖಂಡರು ಇದ್ದರು. ನಂತರ ಚುನಾವಣಾ ನಿರ್ವಹಣೆ ಸಮಿತಿ ಸಭೆ ನಡೆಯಿತು.