ಬಿಜೆಪಿಯ ಮತ ಕಳವು ಪ್ರಜಾಪ್ರಭುತ್ವದ ಕಗ್ಗೊಲೆ: ಶಾಸಕ ಎಚ್.ಡಿ.ತಮ್ಮಯ್ಯ

| Published : Oct 09 2025, 02:00 AM IST

ಬಿಜೆಪಿಯ ಮತ ಕಳವು ಪ್ರಜಾಪ್ರಭುತ್ವದ ಕಗ್ಗೊಲೆ: ಶಾಸಕ ಎಚ್.ಡಿ.ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರ ದುರ್ಬಕೆ ಮಾಡಿಕೊಂಡಷ್ಟು ಯಾವ ಸರ್ಕಾರಗಳು ಮಾಡಿಕೊಂಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಿಬಿಐ, ಇಡಿ ಮತ್ತಿತರೆ ಅನೇಕ ಸ್ವಾಯತ್ತ ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರ ದುರ್ಬಕೆ ಮಾಡಿಕೊಂಡಷ್ಟು ಯಾವ ಸರ್ಕಾರಗಳು ಮಾಡಿಕೊಂಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಿಬಿಐ, ಇಡಿ ಮತ್ತಿತರೆ ಅನೇಕ ಸ್ವಾಯತ್ತ ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಕಿಡಿಕಾರಿದರು.

ದೇಶದಲ್ಲಿ ನಡೆಯುತ್ತಿರುವ ಮತ ಕಳ್ಳತನ ಪ್ರಕರಣ ತಡೆಯುವಂತೆ ಆಗ್ರಹಿಸಿ ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ಮಾಡಿ ಸಹಿ ಸಂಗ್ರಹ ಅಭಿಯಾನ ನಡೆಸಿ ಮಾತನಾಡಿದರು.

ನ್ಯಾಯಾಂಗ ವ್ಯವಸ್ಥೆಯನ್ನೂ ಹದಗೆಡಿಸಿದೆ. ಈಗ ಮತಕಳ್ಳತನಕ್ಕೂ ಇಳಿದಿದೆ. ಇದನ್ನು ಕಾಂಗ್ರೆಸ್ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಸಾಕ್ಷಿ ಸಮೇತ ಸಾಬೀತುಪಡಿಸಿದ್ದಾರೆ. ಕಾಂಗ್ರೆಸ್ ಮತದಾರರನ್ನು ಡಿಲೀಟ್ ಮಾಡುವುದು, ಸತ್ತವರನ್ನು ಬದುಕಿಸುವುದು, ಬದುಕಿರುವವರನ್ನು ಸಾಯಿಸುವ ಕೆಲಸವನ್ನು ಮಾಡಿದ್ದಾರೆ. ಈ ಬಗ್ಗೆ ಮತದಾರರು ಜಾಗೃತರಾಗಬೇಕು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ಮತಕಳ್ಳತನದ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ನಿನ್ನೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆಯುವ ಪ್ರಯತ್ನ, ಕೇರಳದಲ್ಲಿ ರಾಹುಲ್‌ಗಾಂಧಿಗೆ ಬೆದರಿಕೆ, ಹೀಗೆ ದಿನನಿತ್ಯ ದೇಶದಲ್ಲಿ ಭಯದ ವಾತಾವರಣವನ್ನು ಕಾಣುತ್ತಿದ್ದೇವೆ. ಮತ ಕಳವು ತಡೆಯಬೇಕಾದರೆ ಚುನಾವಣಾ ಆಯೋಗದ ಮುಖ್ಯಸ್ಥರು ಯಾವುದೇ ಪಕ್ಷಕ್ಕೆ ಸೇರಿದವರು ಆಗಿರಬಾರದು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಹಾಗೂ ಬ್ಲಾಕ್‌ ಕಾಂಗ್ರೆಸ್ ವತಿಯಿಂದ ಮತ ಕಳವು ವಿರುದ್ಧ ಬುಧವಾರ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಅಭಿಯಾನದ ಅಂಗವಾಗಿ ನಗರದ ಆಜಾದ್ ಪಾರ್ಕ್‌ನಲ್ಲಿ ಸಮಾವೇಶಗೊಂಡ ಹಲವಾರು ಮುಖಂಡರು, ಕಾರ್ಯಕರ್ತರು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದರು. ಕೇಂದ್ರ ಸರ್ಕಾದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಕೆಪಿಸಿಸಿ ವಕ್ತಾರ ಎಚ್.ಎಚ್. ದೇವರಾಜ್, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿದರು.

ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದ ಸ್ವಾಮಿ, ಸಿಡಿಎ ಅಧ್ಯಕ್ಷ ನಯಾಜ್‌ ಅಹ್ಮದ್, ಮಲ್ಲೇಶಸ್ವಾಮಿ, ಪ್ರವೀಣ್, ಜಿಲ್ಲಾ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.