ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಾಂಗ್ರೆಸ್ ಪಕ್ಷನ್ನು ಕರೆಪ್ಷನ್ ಪಾರ್ಟಿ ಎಂದು ಕರೆಯುವ ಸಂಸದ ರಾಘವೇಂದ್ರ ಅವರೇ, ಬಿಜೆಪಿ ಸೆಕ್ಸ್ ಸ್ಕ್ಯಾಂಡಲ್ ಪಾರ್ಟಿ ಆಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ತಿರುಗೇಟು ನೀಡಿದ್ದಾರೆ.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಿಮ್ಮ ಪಕ್ಷದ ಸ್ಥಿತಿ ಏನು. ಬಿಜೆಪಿ ಭಾರತೀಯ ಸೆಕ್ಸ್ ಸ್ಕ್ಯಾಂಡಲ್ ಪಾರ್ಟಿ ಆಗಿದೆ. ಬಿಜೆಪಿಯ ಮೂವರು ಮಾಜಿ ಸಿಎಂರಾದ ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಬಿ.ಎಸ್ ಯಡಿಯೂರಪ್ಪ ಮತ್ತು ಎನ್‌ಡಿಎ ಪಾಲುದಾರ ಪಕ್ಷ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅವರು ಕೋರ್ಟ್‌ನಿಂದ ಸ್ಟೇ ತಂದಿರುವುದ್ಯಾಕೆ ಅನ್ನೋದನ್ನು ಬಹಿರಂಗಪಡಿಸಬೇಕು ಎಂದು ಹರಿಹಾಯ್ದರು.
ನಿಮ್ಮದೆ ಪಕ್ಷದ ನಾಯಕರ ಮೇಲೆ ಪೋಕ್ಸೋ ಕೇಸುಗಳಿವೆ. ನಿಮ್ಮ ಪಕ್ಷ ಮೂರು ಮಾಜಿ ಸಿಎಂಗಳಾದ ಸದಾನಂದಗೌಡ, ಬಸವರಾಜಬೊಮ್ಮಾಯಿ, ಯಡಿಯೂರಪ್ಪ ಸೇರಿದಂತೆ ಅನೇಕ ಮಾಜಿ ಸಚಿವರ ಮಕ್ಕಳು, ನಿಮ್ಮ ಎನ್‌ಡಿಎ ಪಾಲುದಾರರಾದ ಎಚ್.ಡಿ ಕುಮಾರಸ್ವಾಮಿ ಅವರೆಲ್ಲ ಯಾಕೆ ಕೋರ್ಟ್‌ನಿಂದ ಸ್ಟೇ ತಂದಿದ್ದಾರೆ ಎಂದು ಪ್ರಶ್ನಿಸಿದರು.ಕೇವಲ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿಲ್ಲ, ಪುರುಷರ ಮೇಲೂ ನಡೆದಿದೆ. ನಿಮ್ಮ ಸರ್ಕಾರದಲ್ಲಿ ಸಚಿವನಾಗಿದ್ದ ಮುನಿರತ್ನನ ವಿರುದ್ದ ಬಿಜೆಪಿಯ ಯಾವ ನಾಯಕನೂ ಮಾತನಾಡುವುದಿಲ್ಲ. ಅವನು ಅತ್ಯಾಚಾರ ಮಾಡ್ತಾನೆ, ಏಡ್ಸ್ ಹಂಚುತ್ತಾನೆ. ಅವನ ಬಗ್ಗೆ ಯಾಕೆ ನೀವು ಮಾತನಾಡುತ್ತಿಲ್ಲ. ನಿಮಗೇನಾದರೂ ಭಯವಿದೆಯಾ ಎಂದು ಕಿಡಿಕಾರಿದರು.
ಭಾರತೀಯ ಸಂಸ್ಕೃತಿ ರಕ್ಷಣೆ ಮಾತನಾಡುತ್ತಲೆ ಅದೇ ಸಂಸ್ಕೃತಿಯ ಮೇಲೆ ಅತ್ಯಾಚಾರ ಎಸಗಲಾಗುತ್ತಿದೆ. ಅಲ್ಲದೆ ಭ್ರಷ್ಟಾಚಾರದ ಮೂಸೆಯಲ್ಲಿ ಮೂಡಿ ಬಂದ ನೀವು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವಾಗ ಎಚ್ಚರವಿರಬೇಕು ಎಂದು ವಾಗ್ದಾಳಿ ನಡೆಸಿದರು.ಭ್ರಷ್ಟಾಚಾರ ಹುಟ್ಟಿದ್ದು ಬಿಜೆಪಿಯಿಂದ
ಶಿವಮೊಗ್ಗ ಜಿಲ್ಲೆಯ ಸಂಸದರು ರಾಜಕೀಯ ಪ್ರವರ್ಧಮಾನಕ್ಕೆ ಬಂದ ಮೇಲೆಯೇ ಬಿಜೆಪಿ ಭ್ರಷ್ಟಾಚಾರ ಜನತಾ ಪಾರ್ಟಿಯಾಗಿದ್ದು, ಅವರು ರಾಜಕೀಯಕ್ಕೆ ಬರುವ ಮುಂಚೆ ಹಣದಿಂದ ಚುನಾವಣೆ ನಡೆದಿದ್ದು ಕಡಿಮೆ. ಎರಡು ಬಾರಿ ಮುಖ್ಯಮಂತಿಯಾದ ಯಡಿಯೂರಪ್ಪನವರು ಭ್ರಷ್ಟಾಚಾರಗಳ ಕಾರಣದಿಂದಲೇ ಐದು ವರ್ಷಗಳ ಅವಧಿ ಪೂರೈಸದೆ ರಾಜೀನಾಮೆ ನೀಡಬೇಕಾಯಿತು. ಅವರು ಕಣ್ಣೀರ ಧಾರೆಗೆ ಕಾರಣ ಯಾರು. ಜಿಲ್ಲೆಯಲ್ಲಿನ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಯಾರಿಂದ ಎನ್ನುವ ಬಗ್ಗೆ ಬಹಿರಂಗ ಚರ್ಚೆ ಬನ್ನಿ ಎಂದು ಸವಾಲು ಹಾಕಿದರು.ನೀವು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾವಿರಾರು ಕೋಟಿ ರು. ಬೇನಾಮಿ ಆಸ್ತಿ ಟ್ರಸ್ಟ್‌ಗಳ ಹೆಸರಿನಲ್ಲಿ ರಿಜಿಸ್ಚರ್ ಮಾಡಿಕೊಂಡಿದ್ದೀರಿ. ಹಣದ ಮೂಲವನ್ನು ತಾವು ಪ್ರಕಟ ಮಾಡಬಹುದಾ ಎಂದು ಸವಾಲು ಹಾಕಿದ ಅವರು, ನಮ್ಮ ಜಿಲ್ಲೆಯ ರಾಜಕಾರಣಕ್ಕೆ ಕಪ್ಪುಚುಕ್ಕೆ ತರುವಂತೆ ಯಡಿಯೂರಪ್ಪ ಅವರನ್ನು ಬಲಿತೆಗೆದುಕೊಂಡಿದ್ದು ಬಿಜೆಪಿಯ ಭ್ರಷ್ಟಾಚಾರವೇ ಹೊರತು, ಬೇರ್‍ಯಾವ ಜನಾಂದೋಲನಗಳಲ್ಲ. ತಮ್ಮ ಮತ್ತು ಕುಟುಂಬದ ಭ್ರ್ರಷ್ಟಾಚಾರದ ಕಾರಣದಿಂದ ಹೈಕಮಾಂಡ್ ಅನಿವಾರ್ಯವಾಗಿ ಅಧಿಕಾರಿಂದ ಕೆಳಗಿಳಿಸಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿದವರ ಬಾಯಲ್ಲಿ ಭ್ರಷ್ಟಾಚಾರದ ವಿರುದ್ದ ಮಾತು ಬಂದಿರುವುದನ್ನು ಸ್ವಾಗತಿಸುತ್ತೇನೆ ಎಂದು ಲೇವಡಿ ಮಾಡಿದರು.ವೀರಶೈವ -ಲಿಂಗಾಯಿತ ಮಹಾಸಭಾ ಸಭೆ ಗೊಂದಲಶಿವಮೊಗ್ಗ: ಜಾತಿಗಣತಿ ಕುರಿತಂತೆ ಆಖಿಲಭಾರತ ವೀರಶೈವ -ಲಿಂಗಾಯಿತ ಮಹಾಸಭಾ ಕರೆದಿರುವ ಸಭೆ ಗೊಂದಲದಿಂದ ಕೂಡಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಅವರು ಮಹಾಸಭಾದ ಅಧ್ಯಕ್ಷರಾಗಿ ಮತ್ತು ಕಾಂಗ್ರೆಸ್‌ನ ಮುಖಂಡರಾಗಿಯೂ ಇದ್ದಾರೆ. ಅವರು ಒಂದು ಸ್ಪಷ್ಟ ನಿಲುವು ಹೊಂದಬೇಕು. ಜಾತಿಗಣತಿ ಆಗಬೇಕೆಂಬುದು ಕಾಂಗ್ರೆಸ್ ಪಕ್ಷದ ನಿಲುವಾಗಿದೆ. ಇದಕ್ಕೆ ಎಲ್ಲರೂ ಬದ್ದರಾಗಿರಬೇಕು. ಜಾತಿಗಣತಿ ವಿಚಾರವಾಗಿ ವೀರಶೈವ-ಲಿಂಗಾಯಿತ ಮಹಾಸಭೆ ಕರೆದಿರುವ ಸಭೆಯ ಹಿಂದೆ ಬಿಜೆಪಿಯ ಕೈವಾಡವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಗೊಂದಲ ಸೃಷ್ಟಿ ಮಾಡುವ ಪ್ರಯತ್ನ ಇದಾಗಿದೆ ಎಂದರು.ವೀರಶೈವ-ಲಿಂಗಾಯಿತ ಮಹಾಸಭಾ ನಾವು ಹಿಂದೂಗಳಲ್ಲ. ನಮ್ಮದು ಲಿಂಗಾಯಿತ ಧರ್ಮ ಎಂದು ಈಗಾಗಲೆ ನಿರ್ಧಾರ ತೆಗೆದುಕೊಂಡಿದೆ. ನಾಳೆ ನಡೆಯಲಿರುವ ವೀರಶೈವ- ಲಿಂಗಾಯಿತ ಮಹಾಸಭಾದ ಸಭೆಗೆ ಹೋಗುವ ಮುನ್ನ ಯಡಿಯೂರಪ್ಪ ಮತ್ತವರ ಮಕ್ಕಳು ಜಾತಿ ಗಣತಿ ಸಂದರ್ಭದಲ್ಲಿ ಧರ್ಮದ ಕಾಲಂ ನಲ್ಲಿ ವೀರಶೈವಲಿಂಗಾಯಿತ ಅಂತರೆ ಬರೆಸುತ್ತಿರೋ ಅಥವಾ ಬಿಜೆಪಿಯ ಹಿಂದೂ ಎಂದು ಬರೆಸುತ್ತಿರೋ ಎಂಬುದನ್ನು ಸ್ಪಷ್ಟಪಡಿಸಬೇಕು. ಜಾತಿಯ ಹೆಸರಿನಲ್ಲಿ ರಾಜಕೀಯ ಲಾಭ ಪಡೆದುಕೊಳ್ಳುತ್ತಾ ಬಂದಿರುವ ಯಡಿಯೂರಪ್ಪ ಕುಟುಂಬ ಎರಡು ದೋಣಿಯ ಮೇಲೆ ಕಾಲಿಟ್ಟು ಸಾಗುತ್ತಿದೆ. ಅವರು ಇದಕ್ಕೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಜಾತಿಗಣತಿ ಇಂದಲ್ಲಾ ನಾಳೆ ಆಗಲೇಬೇಕು. ಇಲ್ಲದಿದ್ದರೆ ಸಾಮಾಜಿಕ ನ್ಯಾಯ. ಆರ್ಥಿಕ ನೀತಿಗಳನ್ನು ಸರಿಪಡಿಸಲು ಆಗುವುದಿಲ್ಲ. ಜಾತಿ ಗಣತಿ ನಡೆಯುವುದು ಸರಿಯಾಗಿದೆ ಎಂದು ಸ್ಪಷ್ಟಪಡಿಸಿದರು.