ಸಾರಾಂಶ
ಶಾಸಕ ಮುನಿರತ್ನ ಅವರ ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿ ನೋಟಿಸ್ ಕೊಡುವ ಬದಲು ಅಮಾನತು ಮಾಡಬೇಕಿತ್ತು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ
ಗದಗ: ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅಮಾನತು ಮಾಡುತ್ತೇವೆ ಎಂದು ಬಿಜೆಪಿ ಹೇಳಬೇಕಿತ್ತು, ಅದನ್ನು ಬಿಟ್ಟು ನೋಟಿಸ್ ಕೊಡುತ್ತೇವೆ ಎಂದು ಹೇಳುತ್ತಿರುವುದು ಯಾವ ಉದ್ದೇಶಕ್ಕೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಕಿಡಿಕಾರಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಟಿಸ್ ಕೊಡುವುದರಿಂದ ಏನಾಗುತ್ತದೆ? ಮುನಿರತ್ನ ಏನು ಮಾತನಾಡಿದ್ದಾರೆ? ಎನ್ನುವುದನ್ನು ಎಲ್ಲರೂ ಕೇಳಿದ್ದಾರೆ. ಅವರನ್ನು ಅಮಾನತು ಮಾಡುವುದು ಬಿಟ್ಟು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಡಿ.ಕೆ. ಸುರೇಶ ಅವರಿಗೆ ಮಾತನಾಡು ಎಂದು ಹೇಳಿದ್ರಾ? ಡಿ.ಕೆ. ಸುರೇಶ್ ಮೇಲೆ ಯಾವ ಕಾರಣಕ್ಕೆ ಅಪಾದನೆ ಮಾಡುತ್ತೀರಿ? ಎಷ್ಟೆಲ್ಲ ಮಾತನಾಡಿದ್ದಾರೆ, ಆದರೂ ಅರೆಸ್ಟ್ ಮಾಡದೇ ಇರಬೇಕಿತ್ತಾ? ಸರ್ಕಾರ ಜನ ಪರ ಇರಬೇಕೋ, ಶಾಸಕರ ಪರ ಇರಬೇಕೋ? ನೀವೇ ಹೇಳಿ, ಯಾವುದು ಏನು ಮಾಡಬೇಕು ಅದನ್ನು ಕಾನೂನಿನ ಪ್ರಕಾರವೇ ನಮ್ಮ ಸರ್ಕಾರ ಮಾಡುತ್ತದೆ. ಷಡ್ಯಂತ್ರ ಎಂದು ಹೇಳುವ ಮೂಲಕ ರಾಜಕೀಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮುನಿರತ್ನ ಹೇಳಿಕೆಯನ್ನು ಡಿಫೆಂಡ್ ಮಾಡಲು ಬಿಜೆಪಿಗೆ ನೈತಿಕತೆ ಇಲ್ಲ, ಜಾತಿ ಮೇಲೆ ಹೆಣ್ಣು ಮಕ್ಕಳನ್ನು ಕರೀತೀರಾ? ನಾಚಿಕೆ ಬರಲಿಲ್ವಾ? ನಿಮಗೆ, ನೀವು ಬಲಾಢ್ಯ, ಶ್ರೀಮಂತರಿರಬಹುದು. ಆದರೆ ಯಾವ ಕಾರಣಕ್ಕೂ ಬೇರೊಬ್ಬರನ್ನು ಅಗೌರವಿಸುವ ಹಕ್ಕು ನಿಮಗಿಲ್ಲ, ಈ ರೀತಿ ಮಾತನಾಡಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಸಮಾನತೆ ಬರಲಿ ಎಂದು ನೀಡಿರುವ ಹೇಳಿಕೆ ತಪ್ಪಾ? ಮೀಸಲಾತಿ ತೆಗೆಯುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರಾ? ಸಂವಿಧಾನ ಬದಲಾಯಿಸುತ್ತೇವೆ ಎಂದು ನಿಮ್ಮ ಮಂತ್ರಿಗಳೇ ಹೇಳಿಕೆ ನೀಡಿದ್ದರಲ್ಲ? ಹಾಗೇ ರಾಹುಲ್ ಗಾಂಧಿ ಹೇಳಿದ್ದಾರಾ? ಇಲ್ಲವಲ್ಲ, ಅದಾನಿಯವರ ಹಣ ಸ್ವಿಟ್ಜರ್ಲೆಂಡ್ ಲ್ಯಾಂಡ್ ಬ್ಯಾಂಕ್‌ನಲ್ಲಿ ಸೀಜಾಗಿದ್ದು ಇವರಿಗೆ ಸಂಕಟವಾಗಿದೆ. ಅದನ್ನು ಮುಚ್ಚಲ ಈ ರೀತಿ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ನಾಗಮಂಗಲ ಗಲಭೆ ಪ್ರಕರಣದಲ್ಲಿ ಪಿಎಫ್‌ಐ ಪಾತ್ರ ಆರೋಪ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ನಾಗಮಂಗಲ ಇರಲಿ, ಬೇರೆ ಯಾವುದೇ ಪ್ರದೇಶ ಇರಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದರು.