ಬಿಜೆಪಿ ನಾಯಕರು ಈ ವಿಚಾರ ಕುರಿತು ಪಾದಯಾತ್ರೆ ಮಾಡುವುದಕ್ಕೆ ನನ್ನ ತಕರಾರು ಇಲ್ಲ. ಅವರ ಕಾಲು ಜಂಗ್ ಹಿಡಿದಿರುವುದರಿಂದ ಪಾದಯಾತ್ರೆ ಮಾಡಿಕೊಳ್ಳಲಿ

ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ನೂತನ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ ನಿರೀಕ್ಷೆಯಂತೆ ನಡೆದಿದ್ದು, ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹಣ ವಾಪಸ್‌ ಹೋಗಿಲ್ಲ, ಹಣಕಾಸು ಇಲಾಖೆಯಿಂದ ಹಣ ಬಿಡುಗಡೆಯಾಗಿದ್ದನ್ನು ನಾನು ತೋರಿಸುತ್ತೇನೆ, ನೀವು ಹಣ ವಾಪಸ್‌ ಹೋಗಿರುವ ದಾಖಲೆ ತೋರಿಸಿ ಎಂದು ಬಿಜೆಪಿ ನಾಯಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷ (ಬಸವರಾಜ ದಢೇಸ್ಗೂರು) ರಿಗೆ ಅರಿವು ಇಲ್ಲ. ತಿಳಿವಳಿಕೆ ಕಮ್ಮಿ ಇರುವುದರಿಂದ ಹೀಗೆಲ್ಲ ಆರೋಪಿಸುತ್ತಿದ್ದಾರೆ. ಬಿಜೆಪಿ ನಾಯಕರು ರಾಜಕೀಯಕ್ಕಾಗಿ ನಿಜ ಅರಿಯದೇ ಮಾತನಾಡುವುದು ಸರಿಯಲ್ಲ ಎಂದು ಹೇಳಿ ಹಣಕಾಸು ಇಲಾಖೆಯಿಂದ ಹಣ ಬಿಡುಗಡೆಯಾಗಿರುವ ದಾಖಲೆಯ ಬಿಡುಗಡೆ ಮಾಡಿದರು.

ಬಿಜೆಪಿ ನಾಯಕರು ಈ ವಿಚಾರ ಕುರಿತು ಪಾದಯಾತ್ರೆ ಮಾಡುವುದಕ್ಕೆ ನನ್ನ ತಕರಾರು ಇಲ್ಲ. ಅವರ ಕಾಲು ಜಂಗ್ ಹಿಡಿದಿರುವುದರಿಂದ ಪಾದಯಾತ್ರೆ ಮಾಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

ತಜ್ಞ ಕನ್ನಯ್ಯ ನಾಯ್ಡು ಅವರೂ ಯಾಕೆ ಹಾಗೆ ಹೇಳಿದ್ದಾರೆ ನನಗೆ ಗೊತ್ತಿಲ್ಲ. ಅವರು ಸಹ ಯಾರೋ ಹೇಳಿದ್ದನ್ನು ಕೇಳಿ ಆರೋಪಿಸುವುದಲ್ಲ. ಅಷ್ಟಕ್ಕೂ ತುಂಗಭದ್ರಾ ಜಲಾಶಯದ ನಿರ್ವಹಣೆ ಕೇಂದ್ರ ಸರ್ಕಾರವೇ ನೋಡಿಕೊಳ್ಳುತ್ತದೆ. ಕೇಂದ್ರ ಸರ್ಕಾರವೇ ಹಣ ನೀಡುತ್ತದೆ. ತುಂಗಭದ್ರಾ ಬೋರ್ಡ್ ಇದರ ನಿರ್ವಹಣೆ ನೋಡುತ್ತದೆ. ಹಣಕಾಸನ್ನು ಬುಕ್ ಅಡ್ಜೆಸ್ಟ್ ಮೆಂಟ್ ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ಹಣ ಬಂದಾಗ ರಾಜ್ಯ ಸರ್ಕಾರದಿಂದ ನೀಡಿದ್ದನ್ನು ಅಡ್ಜೆಸ್ಟ್ ಮೆಂಟ್ ಮಾಡಲಾಗುತ್ತದೆ ಎಂದರು.

ಆಂಧ್ರದವರು ಅಧಿಕ ಹಣ ನೀಡಿರುವುದು ಅಲ್ಲ, ಈ ಹಿಂದೆ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದಾಗ ದುರಸ್ತಿಗೆ ಮಾಡಿದ್ದ ವೆಚ್ಚ ನೀಡಬೇಕಾಗಿದ್ದನ್ನು ನೀಡಿರಲಿಲ್ಲ. ಅದನ್ನು ಸೇರಿಸಿ ಈಗ ನೀಡಿದ್ದಾರೆ ಎಂದರು.

ಅಷ್ಟಕ್ಕೂ ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ನಿರ್ಮಾಣ ಟೆಂಡರ್ ಕಾಲಮಿತಿಯ ಷರತ್ತಿನೊಂದಿಗೆ ನೀಡಲಾಗಿದೆ. ಈಗಾಗಲೇ ₹11 ಕೋಟಿ ಗುತ್ತಿಗೆದಾರರಿಗೆ ನೀಡಲಾಗಿದ್ದು, ಇನ್ನೂ ಮೂರುವರೆ ಕೋಟಿ ವಾರದೊಳಗೆ ನೀಡಲಾಗುತ್ತದೆ. ಹದಿನೈದು ಕೋಟಿ ನೀಡಿದಂತೆ ಆಗುತ್ತದೆ. ಎಲ್ಲಿಯೂ ಹಣಕಾಸಿನ ಸಮಸ್ಯೆಯಾಗಿಲ್ಲ ಮತ್ತು ಆಗುವುದಕ್ಕೆ ಬಿಡುವುದಿಲ್ಲ. ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ ನಿರೀಕ್ಷೆಯಂತೆ ನಡೆದಿದೆ. ತಿಂಗಳಿಗೆ 6 ಕ್ರಸ್ಟ್ ಗೇಟ್ ನಿರ್ಮಾಣ ಮಾಡುವ ಷರತ್ತು ಇದ್ದರೂ ಸಹ ನಿರೀಕ್ಷೆ ಮೀರಿ ಏಳು ಕ್ರಸ್ಟ್ ಗೇಟ್ ನಿರ್ಮಾಣ ಮಾಡುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಯಾರು ಏನೇ ಹೇಳಲಿ, ಮೇ ಅಂತ್ಯಕ್ಕೆ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.

ಇಸ್ಪೀಟ್ ಗ್ಯಾಂಗ್ ಜೊತೆ: ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸ್ಗೂರು ಯಾರ ಜತೆಯಲ್ಲಿ ಇರುತ್ತಾರೆ ಎನ್ನುವುದನ್ನು ನಾನು ದಾಖಲೆ ಬಿಡುಗಡೆ ಮಾಡಬೇಕಾಗಿಲ್ಲ. ಎಲ್ಲರ ಬಳಿಯೂ ಅವರ ಫೋಟೋ ಇವೆ. ಇಸ್ಪೀಟ್ ಗ್ಯಾಂಗ್ ಜತೆಯಲ್ಲಿರುವ ಅವರು ನನ್ನ ಮೇಲೆ ಆರೋಪಿಸುವ ನೈತಿಕತೆ ಇಲ್ಲ ಎಂದರು.

ನನ್ನ ವಿರುದ್ಧ ಆರೋಪ ಮಾಡುವುದಿಲ್ಲ, ನಾನು ಇಸ್ಪೀಟ್ ಆಡುವ ವೀಡಿಯೋ, ಫೋಟೋ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದ ಬಸವರಾಜ ದಢೇಸ್ಗೂರು ನಿರ್ಲಕ್ಷ್ಯದಿಂದ ಇಡೀ ಕ್ಷೇತ್ರದ ರಸ್ತೆಗಳು ಹಾಳಾಗಿ ಹೋಗಿವೆ. ಈಗ ನಾನು ಅಧಿಕಾರಕ್ಕೆ ಬಂದ ಮೇಲೆ ನಾಲ್ಕುನೂರು ಕೋಟಿಯನ್ನು ಕೇವಲ ರಸ್ತೆ ಅಭಿವೃದ್ಧಿಗೆ ನೀಡಿದ್ದೇನೆ. ಇನ್ನು ಕೆಲವು ದಿನಗಳ ನಂತರ ರಸ್ತೆ ದುರಸ್ತಿ ಮಾಡಲು ಹುಡುಕಿದರೂ ರಸ್ತೆಗಳು ಸಿಗುವುದಿಲ್ಲ ಎಂದರು.

ಸಿಎಂ ಎದುರು ಪ್ರಸ್ತಾಪ: ರಾಜ್ಯದಲ್ಲಿ ಬಿಸಿಎಂ ಹಾಸ್ಟೆಲ್ ಬೇಡಿಕೆ ವಿಪರೀತ ಹೆಚ್ಚಳವಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಬಿಸಿಎಂ ಹಾಸ್ಟೆಲ್ ಸಂಖ್ಯೆ ಹೆಚ್ಚಳ ಮಾಡದೆ ಇರುವುದರಿಂದ ಈಗ ಸಮಸ್ಯೆಯಾಗಿದೆ. ನಾವು ಬಂದ ಮೇಲೆ 212 ಹಾಸ್ಟೆಲ್ ಮಂಜೂರು ಮಾಡಿದ್ದೇವೆ. ಈಗ ಪುನಃ ರಾಜ್ಯಾದ್ಯಂತ 250 ಹಾಸ್ಟೆಲ್ ಬೇಕಾಗಿದ್ದು, ಬಜೆಟ್ ನಲ್ಲಿ ಅವಕಾಶ ನೀಡುವಂತೆ ಸಿಎಂ ಸಿದ್ದರಾಮಯ್ಯಗೆ ಪ್ರಸ್ತಾಪನೆ ಸಲ್ಲಿಸಿ ಮನವಿ ಮಾಡಲಾಗುವುದು ಎಂದರು.