ಬೆಳಗಾವಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ

| Published : Apr 18 2024, 02:21 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಜಗದೀಶ ಶೆಟ್ಟರ್ ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಎರಡನೇ ಬಾರಿಗೆ ಉಮೇದುವಾರಿಕೆ ಸಲ್ಲಿಸಿದರು. ಇದಕ್ಕೂ ಮೊದಲು ಅವರು ಬೃಹತ್ ಮೆರವಣಿಗೆ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಜಗದೀಶ ಶೆಟ್ಟರ್ ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಎರಡನೇ ಬಾರಿಗೆ ಉಮೇದುವಾರಿಕೆ ಸಲ್ಲಿಸಿದರು. ಇದಕ್ಕೂ ಮೊದಲು ಅವರು ಬೃಹತ್ ಮೆರವಣಿಗೆ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.

ಬೆಳಗಾವಿಯ ಸಮಾದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮೆರವಣಿಗೆ ಆರಂಭಿಸಲಾಯಿತು. ಖಡೇಬಜಾರ್ ರಸ್ತೆ, ಶನಿವಾರ ಕೂಟ್, ಕಾಕತಿವೇಸ್, ಚನ್ನಮ್ಮ ವೃತ್ತ ಹಾಗೂ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿತು.‌ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಗದೀಶ ಶೆಟ್ಟರ್ ಮೆರವಣಿಗೆ ವಾಹನ ಏರಿದಾಗ ಅಭಿಮಾನಿಗಳು ಜಯ ಘೊಷಣೆ ಹಾಕಿದರು. ವಿವಿಧ ಭಾಗಗಳಿಂದ ಬಂದಿದ್ದ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗುತ್ತ ಉತ್ಸಾಹದಿಂದ ಮೆರವಣಿಗೆಯಲ್ಲಿ ಸಾಗಿದರು. ಢೋಲ್ ತಾಶಾ, ಡೊಳ್ಳು ಕುಣಿತ ವಾದ್ಯಗಳು ಮೆರವಣಿಗೆಗೆ ಮೆರಗು ತಂದವು. ವಿವಿಧ ಭಾಗದಿಂದ ಬಂದಿದ್ದ ಜನರು ವಾದ್ಯಗಳೊಂದಿಗೆ ಕುಣಿದು ಕುಪ್ಪಳಿಸಿದರು.‌ ಸಹಸ್ರಾರು ಮಹಿಳೆಯವರು ಕೇಸರಿ ಪೇಟ ಧರಿಸಿದ್ದು ಮೆರವಣಿಗೆಯಲ್ಲಿ ಗಮನ ಸೆಳೆಯಿತು.

ಚನ್ನಮ್ಮ ವೃತ್ತದಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಗೆಲುವು ಖಚಿತ. ಬೆಳಗಾವಿಯಲ್ಲಿ ಅಭೂತಪೂರ್ವ ಜನಬೆಂಬಲ ಬಿಜೆಪಿಗೆ ಸಿಕ್ಕಿದೆ. ಈ ಬಾರಿ ಜಗದೀಶ ಶೆಟ್ಟರ್ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಮಂತ್ರಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್‌ ಮಾತನಾಡಿ, ಲೋಕಸಭೆ ಚುನಾವಣೆಯ ಬಳಿಕ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ದೇಶದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮತ್ತೆ ಡಬಲ್‌ ಎಂಜಿನ್‌ ಸರ್ಕಾರ ಆಡಳಿತ ನಡೆಸಲಿವೆ. ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.

ಈ ವೇಳೆ ಈಸಂಸದೆ ಮಂಗಲ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ, ಬಾಲಚಂದ್ರ ಜಾರಕಿಹೊಳಿ, ದುರ್ಯೋಧನ ಐಹೊಳೆ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ. ಮಾಜಿ ಶಾಸಕ ಅನೀಲ ಬೆನಕೆ, ಮಾಜಿ ಸಚಿವ ಮುರಗೇಶ ನಿರಾಣಿ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಸೇರಿದಂತೆ ಸಹಸ್ರಾರು ಕಾರ್ಯಕರ್ತರು ಉಪಸ್ಥಿತರಿದ್ದರು.‌