ಒಂದು ದೇಶದಲ್ಲಿ ಎರಡು ಪ್ರಧಾನಿ, ಎರಡು ಸಂವಿಧಾನ, ಎರಡು ಧ್ವಜ ಇರುವುದಕ್ಕೆ ಸಾಧ್ಯವಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದ, ಕಾಶ್ಮೀರದ ಸಂಪೂರ್ಣ ಏಕೀಕರಣಕ್ಕಾಗಿ ಹೋರಾಡಿದ, ಭಾರತೀಯ ಜನಸಂಘದ ಸಂಸ್ಥಾಪಕ ಹಾಗೂ ದೇಶದ ಅಖಂಡತೆ ಮತ್ತು ಏಕತೆಗಾಗಿ ತಮ್ಮ ಪ್ರಾಣವನ್ನೇ ಬಲಿದಾನಗೈದ ಧೀಮಂತ ನಾಯಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜೀವನಾದರ್ಶಗಳಿಂದ ಪಕ್ಷದ ಕಾರ್ಯಕರ್ತರು ಸದಾ ಪ್ರೇರಣೆ ಪಡೆಯಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಹೇಳಿದರು.
ಉಡುಪಿ: ಒಂದು ದೇಶದಲ್ಲಿ ಎರಡು ಪ್ರಧಾನಿ, ಎರಡು ಸಂವಿಧಾನ, ಎರಡು ಧ್ವಜ ಇರುವುದಕ್ಕೆ ಸಾಧ್ಯವಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದ, ಕಾಶ್ಮೀರದ ಸಂಪೂರ್ಣ ಏಕೀಕರಣಕ್ಕಾಗಿ ಹೋರಾಡಿದ, ಭಾರತೀಯ ಜನಸಂಘದ ಸಂಸ್ಥಾಪಕ ಹಾಗೂ ದೇಶದ ಅಖಂಡತೆ ಮತ್ತು ಏಕತೆಗಾಗಿ ತಮ್ಮ ಪ್ರಾಣವನ್ನೇ ಬಲಿದಾನಗೈದ ಧೀಮಂತ ನಾಯಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜೀವನಾದರ್ಶಗಳಿಂದ ಪಕ್ಷದ ಕಾರ್ಯಕರ್ತರು ಸದಾ ಪ್ರೇರಣೆ ಪಡೆಯಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಹೇಳಿದರು.
ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಬಲಿದಾನ ದಿನದ ಸ್ಮರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.ಕೊಲ್ಕೊತಾ ವಿವಿಯ ಅತ್ಯಂತ ಕಿರಿಯ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ದ ಡಾ. ಮುಖರ್ಜಿ ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು. ದೇಶದ ಮೊದಲ ಕೈಗಾರಿಕಾ ಮತ್ತು ಸರಬರಾಜು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ತುಷ್ಟೀಕರಣದ ನೀತಿಗಳನ್ನು ವಿರೋಧಿಸಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾರ್ಗದರ್ಶನದಲ್ಲಿ ಭಾರತೀಯ ಜನಸಂಘವನ್ನು ಸ್ಥಾಪಿಸಿದರು ಎಂದು ದಿನಕರ ಶೆಟ್ಟಿ ಸ್ಮರಿಸಿದರು. ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ವಿಭಜಕ ‘370ನೇ ವಿಧಿ’ಯನ್ನು ಬಲವಾಗಿ ವಿರೋಧಿಸಿದ್ದ ಡಾ. ಮುಖರ್ಜಿ 1953ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಿದಾಗ ಬಂಧನಕ್ಕೊಳಗಾಗಿ ಜೈಲುವಾಸದಲ್ಲಿರುವಾಗಲೇ ಅನುಮಾನಾಸ್ಪದವಾಗಿ ನಿಧನರಾದರು. ಅವರ ದೂರದೃಷ್ಟಿ, ರಾಷ್ಟ್ರಭಕ್ತಿ, ಉದಾತ್ತ ಚಿಂತನೆಗಳು, ತ್ಯಾಗ ಮತ್ತು ಬಲಿದಾನ ಪಕ್ಷದ ಕಾರ್ಯಕರ್ತರಿಗೆ ದಾರಿದೀಪವಾಗಿವೆ ಎಂದರು.
ಇದಕ್ಕೆ ಮೊದಲು ಡಾ. ಮುಖರ್ಜಿ ಅವರ ಭಾವಚಿತ್ರಕ್ಕೆ ಸಾಮೂಹಿಕ ಪುಷ್ಪಾರ್ಚನೆಗೈಯಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಮಂಗಳೂರು ವಿಭಾಗ ಸಹ ಪ್ರಭಾರಿ ಜಯಂತ್ ಕೋಟ್ಯಾನ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಸಹಿತ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.