ಕಾಂಗ್ರೆಸ್ ನಾಯಕರು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಗೆ ನುಗ್ಗಿ ಗೂಂಡಾಗಿರಿ ಮೂಲಕ ರಾಜೀನಾಮೆ ಪಡೆದಿದ್ದಾರೆ ಎಂದು ಪ್ರಮುಖ ಪ್ರತಿಪಕ್ಷ ಬಿಜೆಪಿ ಆಪಾದಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾಂಗ್ರೆಸ್ ನಾಯಕರು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಗೆ ನುಗ್ಗಿ ಗೂಂಡಾಗಿರಿ ಮೂಲಕ ರಾಜೀನಾಮೆ ಪಡೆದಿದ್ದಾರೆ ಎಂದು ಪ್ರಮುಖ ಪ್ರತಿಪಕ್ಷ ಬಿಜೆಪಿ ಆಪಾದಿಸಿದೆ.ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿಯೂ ಆಗಿರುವ ಸಂಸದ ಬಸವರಾಜ ಬೊಮ್ಮಾಯಿ, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ರಾಜ್ಯದಲ್ಲಿ ಹಿಂದೆಂದೂ ನಡೆಯದ ಗೂಂಡಾಗಿರಿ ನಡೆಯುತ್ತಿದೆ. ಸ್ವತಃ ಮುಖ್ಯಮಂತ್ರಿಗಳೇ ಸಭಾಪತಿ ಕಚೇರಿಗೆ ಹೋಗಿ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ. ಕರ್ನಾಟಕ ವಿಧಾನ ಪರಿಷತ್ತಿಗೆ ಇದು ಕಳಂಕ. ಯಾವುದೇ ಸಭಾಪತಿಗೂ ಈ ರೀತಿಯ ಅವಮಾನ ಆಗಿರಲಿಲ್ಲ. ಈ ಘಟನೆಯಿಂದ ಇದು ಗೂಂಡಾಗಿರಿ ಮಾಡುವ ಸರ್ಕಾರ ಎಂಬುದು ಸಾಬೀತಾಗಿದೆ ಎಂದು ಹರಿಹಾಯ್ದರು.ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ತಿಗೆ ಎಂಟು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಎರಡೂ ಸದನಕ್ಕೂ ಅವರೇ ಹಿರಿಯರು. ಯಾವುದೇ ಕಳಂಕವಿಲ್ಲದೆ ಅಧಿವೇಶನ ನಡೆಸಿದ ಅವರ ರಾಜೀನಾಮೆಯನ್ನು ಕಾಂಗ್ರೆಸ್ ಸದಸ್ಯರು ಬಲವಂತವಾಗಿ ಪಡೆದಿದ್ದಾರೆ. ಅವರು ಈಗ ಬಹಳ ದುಃಖದಲ್ಲಿದ್ದಾರೆ. ಅವರು ಕಚೇರಿಯಲ್ಲಿ ಕುಳಿತಿರುವಾಗ ಮುನ್ಸೂಚನೆ ನೀಡದೆ ಏಕಾಏಕಿ ನುಗ್ಗಿ, ಲೆಟರ್ ಹೆಡ್ ತಂದು ಟೈಪ್ ಮಾಡಿ ಸಹಿ ಹಾಕಿ ಎಂದು ಒತ್ತಡ ಹಾಕಲಾಗಿದೆ. ವಿಧಾನ ಪರಿಷತ್ತಿನ ಇತಿಹಾಸದಲ್ಲಿ ಯಾರಿಗೂ ಹೀಗೆ ಅಪಮಾನ ಆಗಿರಲಿಲ್ಲ ಎಂದರು.
ಪರಿಷತ್ ಇತಿಹಾಸದಲ್ಲೇ ಕಪ್ಪುಚುಕ್ಕೆ-ಬೊಮ್ಮಾಯಿ:ದೇಶದಲ್ಲೇ ಅತ್ಯಂತ ಹಿರಿಯ ವಿಧಾನ ಪರಿಷತ್ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಸರ್ಕಾರ ನಡೆದುಕೊಂಡಿರುವ ರೀತಿ ಯಾವುದೇ ಸತ್ಸಂಪ್ರದಾಯಕ್ಕೆ ಅನುಗುಣವಾಗಿಲ್ಲ. ಇದು ಸಭಾಪತಿ ಸ್ಥಾನದ ಗೌರವಕ್ಕೆ ಹಾಗೂ ಸಂವಿಧಾನಕ್ಕೆ ಎಸಗಿದ ಅಪಮಾನ. ಕರ್ನಾಟಕ ವಿಧಾನ ಪರಿಷತ್ತಿನ ಇತಿಹಾಸದಲ್ಲಿ ಇದೊಂದು ಕೆಟ್ಟ ನಡವಳಿಕೆ ಹಾಗೂ ಕಪ್ಪು ಚುಕ್ಕೆಯಾಗಿ ಉಳಿಯಲಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೊರಟ್ಟಿ ಅವರು ಪಕ್ಷಾತೀತವಾಗಿ ವಿಷಯಾಧಾರಿತ ರಾಜಕಾರಣಕ್ಕೆ ಹೆಸರುವಾಸಿಯಾದವರು. ಆದರೆ, ಅವರನ್ನು ಮುಖ್ಯಮಂತ್ರಿಗಳ ಮನೆಗೆ ಕರೆಸಿ ಮಾತನಾಡಿ ವಿಧಾನಸೌಧದಲ್ಲಿಯೇ ಕುಳಿತು ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆದಿರುವುದು ಮತ್ತು ರಾಜೀನಾಮೆ ನೀಡಿದ ಕೇವಲ 5 ನಿಮಿಷಗಳಲ್ಲಿ ಅದನ್ನು ಅಂಗೀಕರಿಸಿ ಪ್ರಕಟಣೆ ಹೊರಡಿಸಿರುವುದು ಸರ್ಕಾರದ ದುರಾಲೋಚನೆಯನ್ನು ಪ್ರದರ್ಶಿಸುತ್ತದೆ. ಇದು ಸಭಾಪತಿ ಸ್ಥಾನದ ಗೌರವಕ್ಕೆ ಹಾಗೂ ಸಂವಿಧಾನಕ್ಕೆ ಎಸಗಿದ ಅಪಮಾನ. ಕರ್ನಾಟಕ ವಿಧಾನ ಪರಿಷತ್ತಿನ ಇತಿಹಾಸದಲ್ಲಿ ಇದೊಂದು ಕೆಟ್ಟ ನಡವಳಿಕೆ ಹಾಗೂ ಕಪ್ಪು ಚುಕ್ಕೆಯಾಗಿ ಉಳಿಯಲಿದೆ ಎಂದು ತಿಳಿಸಿದ್ದಾರೆ.ದಬಾಯಿಸಿ ರಾಜೀನಾಮೆ-ಛಲವಾದಿ:
ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರನ್ನು ದಬಾಯಿಸಿ, ಒತ್ತಡ ಹೇರಿ ಅವರಿಂದ ರಾಜೀನಾಮೆ ಪಡೆಯಲಾಗಿದೆ. ಹೊರಟ್ಟಿ ಅವರು ಅಧಿಕಾರದಲ್ಲಿರುವಾಗಲೇ ಬೇರೊಬ್ಬರನ್ನು ನಾಮಕರಣ ಮಾಡಿ, ಪಕ್ಷದ ಲೆಟರ್‌ಹೆಡ್‌ನಲ್ಲಿ ಕಳಿಸಿದ್ದರು. ಇದೀಗ ಒತ್ತಡದಿಂದ ರಾಜೀನಾಮೆ ಪಡೆದಿದ್ದು, ಇದು ಕೌನ್ಸಿಲ್ ನಿಯಮಾವಳಿಗೆ ವಿರುದ್ಧವಾದುದು ಎಂದು ಛಲವಾದಿ ನಾರಾಯಣಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಹೊರಟ್ಟಿ ಬಹಳ ನೋವಿನಿಂದ ಕುಳಿತಿದ್ದಾರೆ. ರಾಜೀನಾಮೆ ಕೊಟ್ಟ ಕುರಿತು ಮಾಧ್ಯಮಗಳಲ್ಲಿ ತಿಳಿದುಬಂದ ಬಗ್ಗೆ ಪ್ರಶ್ನಿಸಿದೆವು. ‘ನನಗೆ ಬೇರೆ ಮಾರ್ಗವೇ ಇರಲಿಲ್ಲ; ಮೇಲ್ಮನೆಯ ಸುಮಾರು 20- 25 ಶಾಸಕರು ಬಂದು ದಬಾಯಿಸಿ ಮುಖ್ಯಮಂತ್ರಿಯವರು ಪಿಎಸ್ ಅವರ ಕಡೆಯಿಂದ ಲೆಟರ್‌ಹೆಡ್ ತರಿಸಿ ಅವರೇ ಟೈಪ್ ಮಾಡಿಸಿ ಸಹಿ ಹಾಕಿಸಿಕೊಂಡರು. ಕೆಪಿಸಿಸಿ ಅಧ್ಯಕ್ಷರು, ಸಲೀಂ ಅಹ್ಮದ್, ರಮೇಶ್ ಬಾಬು ಮತ್ತಿತರರು ಬಂದು ಒಂದು ನಿಮಿಷ ಉಸಿರಾಡಲೂ ಬಿಟ್ಟಿಲ್ಲ’ ಎಂದಿದ್ದಾಗಿ ವಿವರಿಸಿದರು.
ಪ್ರಜಾಪ್ರಭುತ್ವ ವಿರೋಧಿ ನಡೆ-ರವಿಕಮಾರ್:ವಿಧಾನ ಪರಿಷತ್ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ ಅವರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸುಮಾರು 15 ಮಂದಿ ಕಾಂಗ್ರೆಸ್ ಸದಸ್ಯರ ತಂಡ ಬಲವಂತವಾಗಿ ರಾಜೀನಾಮೆ ಪಡೆದುಕೊಂಡಿರುವುದು ಅತ್ಯಂತ ಖಂಡನೀಯ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಎನ್.ರವಿಕುಮಾರ್ ಹೇಳಿದ್ದಾರೆ.
