ಸಾರಾಂಶ
ದೊಡ್ಡಬಳ್ಳಾಪುರ: ಬಡವರು ಮತ್ತಷ್ಟು ಬಡವರಾಗುತ್ತಲೇ ಹೋಗಬೇಕು, ಮಧ್ಯಮ ವರ್ಗದವರು ಬಡತನಕ್ಕೆ ಜಾರಬೇಕು ಎಂಬುದು ಬಿಜೆಪಿಯ ಅಗೋಚರ ನಿಲುವಾಗಿದ್ದು, ಬಿಜೆಪಿ ಸಾಮಾಜಿಕ ಅಸಮಾನತೆಯ ಮಹಾನ್ ಪೋಷಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಸೋಮವಾರ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ದೇವನಹಳ್ಳಿ-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಗಳ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ, ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.ಬಡ-ಮಧ್ಯಮ ವರ್ಗದ ಅಭ್ಯುದಯಕ್ಕೆ ಕಾಂಗ್ರೆಸ್ ನೀಡುವ ಎಲ್ಲ ಕಾರ್ಯಕ್ರಮಗಳು, ಯೋಜನೆಗಳನ್ನು ವಿರೋಧಿಸುವ ಬಿಜೆಪಿ, ಸಾಮಾಜಿಕ ಸ್ಥಿತಿಗತಿಯ ಅರ್ಹತೆಯ ಆಧಾರದಲ್ಲಿ ಯೋಜನೆಯ ಲಾಭ ಪಡೆವ ಫಲಾನುಭವಿಗಳನ್ನು ಅಪಮಾನಿಸುವ ವರ್ತನೆ ತೋರುತ್ತದೆ. ತಮ್ಮ ಸರ್ಕಾರ ಸಂವಿಧಾನದ ಆಶಯಗಳಂತೆ ಸರ್ವರ ಕಲ್ಯಾಣದ ಕಾರ್ಯಕ್ರಮ ರೂಪಿಸುತ್ತಿದೆ. ನಮ್ಮ ಸಂವಿಧಾನ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಮಹಿಳೆಯರು, ಯುವ ಸಮೂಹ ಸೇರಿ ಸರ್ವರಿಗೂ ಅವಕಾಶಗಳನ್ನು ಕೊಡುತ್ತದೆ. ಈ ಅವಕಾಶಗಳನ್ನು ನಾಶ ಮಾಡಬೇಕು ಎನ್ನುವ ಕಾರಣಕ್ಕೆ ಬಿಜೆಪಿ ನಮ್ಮ ಸಂವಿಧಾನವನ್ನು ಬದಲಾಯಿಸಿ ಅವರ ಮನುಸ್ಮೃತಿ ಪರವಾಗಿ ಮಾತನಾಡುತ್ತಿದೆ ಎಂದು ಆರೋಪಿಸಿದರು.
ದೇವೇಗೌಡರನ್ನು ನಂಬಲು ಸಾಧ್ಯವೇ?ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಜನಿಸುತ್ತೇನೆ ಎಂದಿದ್ದ ಮಾಜಿ ಪ್ರಧಾನಿ ದೇವೇಗೌಡರು ಈಗ ಬಿಜೆಪಿ ಜತೆ ಸೇರಿಕೊಂಡು ಬಿಜೆಪಿ ಮತ್ತು ಮೋದಿಯನ್ನು ಹೊಗಳುತ್ತಿದ್ದಾರೆ. ಇವರನ್ನು ಹೇಗೆ ನಂಬುತ್ತೀರಿ ಎಂದು ಪ್ರಶ್ನಿಸಿದರು.
ಎಚ್‌ಡಿಕೆ ದಿಕ್ಸೂಚಿ ಉಲ್ಟಾ-ಪಲ್ಟಾ!ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆ ನಾಳೆ ಬರಲಿರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದು ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದರು. ಆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷದಿಂದ ಪುಟ್ಟಣ್ಣ ಜಯಭೇರಿ ಬಾರಿಸಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರ ಮಾತಿನಂತೆ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಸೋಲುತ್ತದೆ. ಕಾಂಗ್ರೆಸ್ ಗೆಲ್ಲುತ್ತದೆ ಎಂದು ಖಚಿತವಾಗಿ ನುಡಿದರು.
ಮಾದರಿ ಅಭಿವೃದ್ಧಿಗೆ ಪಣ:ಸಚಿವ ಕೆ.ಹೆಚ್.ಮುನಿಯಪ್ಪ ದೇವನಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಲು ಪಣತೊಟ್ಟು ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಸಿದ್ದಪಡಿಸಿದ್ದಾರೆ. ಅದೆಲ್ಲಕ್ಕೂ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ನೇಕಾರರ ಹಿತರಕ್ಷಣೆಗೆ ಒತ್ತು:ನೇಕಾರರ ಬಹುವರ್ಷಗಳ ಬೇಡಿಕೆಗಳನ್ನು ಈಡೇರಿಸಿದ್ದು ಕಾಂಗ್ರೆಸ್ ಸರ್ಕಾರ. ಹೀಗಾಗಿ ಯಾರು ನಿಮ್ಮ ಬದುಕಿನ ಪರವಾಗಿ ಇದ್ದಾರೋ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ, ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್, ವಿಧಾನ ಪರಿಷತ್ ಸದಸ್ಯ ಎ.ರವಿ, ಶಾಸಕ ಶರತ್ ಬಚ್ಚೇಗೌಡ, ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಮತ್ತು ಇಲಾಖೆಗಳ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.