ರಸ್ತೆ ಗುಂಡಿ ಮುಚ್ಚಿ ಸರ್ಕಾರ ವಿರುದ್ಧ ಬಿಜೆಪಿ ಕಿಡಿ

| Published : Sep 25 2025, 01:00 AM IST

ಸಾರಾಂಶ

ರಾಜ್ಯದ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವಲ್ಲಿಯು ವಿಫಲವಾಗಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವಲ್ಲಿಯು ವಿಫಲವಾಗಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ರಾಜಧಾನಿ ಬೆಂಗಳೂರು, ರಾಮನಗರ, ಹುಬ್ಬಳ್ಳಿ, ಮಂಡ್ಯ, ವಿಜಯಪುರ, ರಾಯಚೂರು, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದೆ.

ಬೆಂಗಳೂರಿನ ವಿವಿಧೆಡೆ ರಸ್ತೆ ಅವ್ಯವಸ್ಥೆ ವಿರುದ್ಧ ರಸ್ತೆ ಗುಂಡಿ ಮುಚ್ಚುವ ಮೂಲಕ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ್ದು, ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್, ಶಾಸಕರಾದ ಗೋಪಾಲಯ್ಯ, ಎಸ್‌.ಆರ್‌.ವಿಶ್ವನಾಥ್‌ ಭಾಗಿಯಾಗಿದ್ದರು.

ರಾಮನಗರ ಐಜೂರು ವೃತ್ತದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿ ಗುಂಡಿ ಮುಚ್ಚದ ಪರಿಸ್ಥಿತಿಗೆ ಬಂದು ನಿಂತಿದೆ. ಬೆಂಗಳೂರು ಈಗ ಗುಂಡಿಯೂರು ಆಗಿದೆ. ಸಾಕಷ್ಟು ಜನ ನಿತ್ಯ ರಸ್ತೆ ಗುಂಡಿಗೆ ಸಾಯುತ್ತಿದ್ದಾರೆ. ಐಟಿ ಕಂಪನಿಗಳು ಬೆಂಗಳೂರು ತೊರೆದು ಬೇರೆ ರಾಜ್ಯಕ್ಕೆ ಹೋಗುತ್ತಿವೆ. ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದು ಟೀಕಿಸಿದರು.

ಮಂಡ್ಯ ನಗರದ ಬಿಜೆಪಿ ವಿಕಾಸ ಭವನದಿಂದ ಜಯಚಾಮರಾಜ ಒಡೆಯರ್ ವೃತ್ತಕ್ಕೆ ತೆರಳಿದ ಬಿಜೆಪಿಗರು ಪ್ರತಿಭಟನೆ ನಡೆಸಿ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದರು. ಯಮಧರ್ಮ ಮತ್ತು ಚಿತ್ರಗುಪ್ತ ವೇಷಭೂಷಣ ಪ್ರದರ್ಶಿಸುವ ಮೂಲಕ ರಾಜ್ಯ ಸರ್ಕಾರವನ್ನು ಲೇವಡಿ ಮಾಡಿದರು. ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುತ್ತಿರುವ ಕಾರಣ ರಾಜ್ಯದಲ್ಲಿ ಯಾವುದೇ ರಸ್ತೆ ಅಭಿವೃದ್ಧಿ ನಡೆಯುತ್ತಿಲ್ಲ. ಕೊನೆ ಪಕ್ಷ ಗುಂಡಿ ಬಿದ್ದು ಹಾಳಾಗಿರುವ ರಸ್ತೆಗಳನ್ನೂ ಸರಿಪಡಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಹಳೆಯ ಬಸ್ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಜನ ಪರದಾಡುವಂತಾಗಿದ್ದು, ರಸ್ತೆಗಳಿಗೆ ಒಂದಿಂಚು ಡಾಂಬರ್ ಹಾಕಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ ಇದು ಗುಂಡಿಗಳ ಸರ್ಕಾರ. ಮರಳು ದಂಧೆಗಳಿಂದ ಎಲ್ಲಾ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಹಾಳಾಗಿ ಜನ ಪರದಾಡುತ್ತಿದ್ದಾರೆ ಎಂದು ಆರೋಪಿಸಿದರು.---

ಚಿತ್ರ ಶೀರ್ಷಿಕೆ: ಬೆಂಗಳೂರಿನಲ್ಲಿ ವಿರೋಧ ಪಕ್ಷ ನಾಯಕ ಆರ್‌.ಅಶೋಕ್ ಅವರು ರಸ್ತೆ ಗುಂಡಿಗೆ ಮಣ್ಣು ಸುರಿದು ಪ್ರತಿಭಟನೆ ನಡೆಸಿದರು.