ಸಾರಾಂಶ
ಬೆಳಗಾವಿ ತಹಸೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವನ್ನವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಲಕ್ಷ್ಮೀ ಹೆಬ್ಬಾಳಕರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಬೆಳಗಾವಿ : ಬೆಳಗಾವಿ ತಹಸೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವನ್ನವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಲಕ್ಷ್ಮೀ ಹೆಬ್ಬಾಳಕರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಇದರಿಂದಾಗಿ ಕೆಲಕಾಲ ಸಂಚಾರ ಅಡಚಣೆ ಉಂಟಾಯಿತು. ರುದ್ರಣ್ಣ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮತ್ತು ನಗರ ಪೊಲೀಸ್ ಆಯುಕ್ತರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವರ್ಗಾವಣೆ ದಂಧೆಗೆ ಬೇಸತ್ತು ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಮುನ್ನ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆಪ್ತ ಸಹಾಯಕ ಸೋಮು, ತಹಸೀಲ್ದಾರ ಬಸವರಾಜ ನಾಗರಾಳ ಹಾಗೂ ಅಶೋಕ ಕಬ್ಬಲಗಿ ಎಂಬುರ ಹೆಸರು ವಾಟ್ಸಆ್ಯಪ್ ಗ್ರೂಪ್ ನಲ್ಲಿ ಮೆಸೇಜ್ ಮಾಡಿದ್ದರೂ ಪೊಲೀಸರು ಇಲ್ಲಿಯವರೆಗೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಸರ್ಕಾರಿ ನೌಕರದಾರ ಮೇಲೆ ಒತ್ತಡ ತಂದು ಅವರ ಸಾವಿಗೆ ಕಾರಣವಾಗಿರುವ ಇಂತವರನ್ನು ಹೆಡಮುರಿ
ಕಟ್ಟಬೇಕಾಗಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ, ಅಬಕಾರಿ ಹಗರಣ ನೊಡಿದರೆ ಭ್ರಷ್ಟಾಚಾರ ಪಾಪರ್ ಸರ್ಕಾರ
ಇದಾಗಿದ್ದು, ಇದನ್ನು ಕಿತ್ತೊಗೆಯಲು ರಾಜದ ಜನತೆ ಸಂಕಲ್ಪತೊಟ್ಟಿದ್ದಾರೆ. ಬೆಳಗಾವಿಯ ರುದ್ರಣ್ಣ ಯಡವನ್ನವರ ಆತ್ಮಹತ್ಯೆ ಪ್ರಕರಣದ
ಸಾಕ್ಷ್ಯಗಳ ನಾಶ ಮಾಡಿ ಪ್ರಕರಣದ ದಿಕ್ಕು ತಪ್ಪಿಸುವ ಯತ್ನದಲ್ಲಿರುವ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರನ್ನು ಸಂಪುಟದಿಂದ ವಜಾಗೊಳಿಸಲು ನಮ್ಮ ಆಗ್ರಹವಾಗಿದೆ ಎಂದು ಹೇಳಿದರು.
ರುದ್ರಣ್ಣ ಆತ್ಮಹತ್ಯೆಯಾಗಿ ಮೂರು ದಿನ ಕಳೆದಿದೆ. ಆರೋಪಿಗಳನ್ನು ಈವರೆಗೂ ಬಂಧಿಸಿಲ್ಲ. ಈ ವಿಚಾರವಾಗಿ ಎರಡು ದಿನ ಮೌನವಾಗಿ, ಸಾಕ್ಷ್ಯನಾಶಪಡಿಸಲು ಯತ್ನಿಸಿದ ಸಚಿವೆ ಹೆಬ್ಬಾಳಕರ ಅವರು ರುದ್ರಣ್ಣಗೆ ನ್ಯಾಯ ಸಿಗಬೇಕು ಎಂಬ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ರುದ್ರಣ್ಣ ತಹಸೀಲ್ದಾರ ಕಚೇರಿಗೆ ಹೋಗಿ ಅವರ ಕಚೇರಿಯ ವಾಟ್ಸಆ್ಯಪ್ ಗ್ರೂಪ್ ನಲ್ಲಿ ಮೆಸೇಜ್ ಹಾಕಿ ಆತ್ಮಹತ್ಯೆ ಮಾಡಿಕೊಂಡರು. ಆರೋಪಿಗಳನ್ನು ಇಲ್ಲಿಯವರೆಗೂ ಪೊಲೀಸರು ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕ ಅರವಿಂದ ಪಾಟೀಲ, ಬಿಜೆಪಿ ಮುಖಂಡರಾದ ಮುರುಘೇಂದ್ರಗೌಡ ಪಾಟೀಲ, ರುದ್ರಣ್ಣ ಚಂದರಗಿ, ಡಾ.ಸೋನಾಲಿ ಸರ್ನೋಬತ್, ಸವಿತಾ ಗುಡ್ಡಾಕಾಯ, ಜೆಡಿಎಸ್ ಮುಖಂಡ ಮಾರುತಿ ಅಷ್ಟಗಿ, ಎಫ್.ಎಸ್. ಸಿದ್ದನಗೌಡ್ರ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.---ಕೋಟ್
ಬೆಳಗಾವಿ ತಹಸೀಲ್ದಾರ್ ಕಚೇರಿಯ ಕೊಠಡಿಯಲ್ಲಿ ಎಸ್ ಡಿಎ ನೌಕರ ರುದ್ರಣ್ಣ ಆತ್ಮಹತ್ಯೆ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಆಪ್ತ ಸೋಮು ಹೆಸರು ಪ್ರಸ್ತಾಪವಾಗಿದೆ. ಕೂಡಲೇ ನೈತಿಕೆ ಹೊಣೆ ಹೊತ್ತು ಲಕ್ಷ್ಮೀ ಹೆಬ್ಬಾಳಕರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರ ನಡೆದಿದೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆ ವಹಿಸಬೇಕು. ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸೋಮು ಆತ್ಮಹತ್ಯೆಗೆ ಕಾರಣ ಎಂದು ರುದ್ರಣ್ಣ ವಾಟ್ಸಆ್ಯಪ್ ನಲ್ಲಿ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಈ ಕುರಿತು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ.
- ಅರವಿಂದ ಬೆಲ್ಲದ ವಿಧಾನಸಭೆ ಪ್ರತಿಪಕ್ಷದ ಉಪನಾಯಕ