ಕ್ಲಿಷ್ಟಕರ ಪರಿಸ್ಥಿತಿಯನ್ನು ಸಿಎಂ ಹೇಗೆ ನಿರ್ವಹಿಸಬೇಕೆಂಬುದುಕ್ಕೆ ಕೃಷ್ಣ ನಿದರ್ಶನ

| Published : Dec 11 2024, 12:45 AM IST

ಕ್ಲಿಷ್ಟಕರ ಪರಿಸ್ಥಿತಿಯನ್ನು ಸಿಎಂ ಹೇಗೆ ನಿರ್ವಹಿಸಬೇಕೆಂಬುದುಕ್ಕೆ ಕೃಷ್ಣ ನಿದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್‌ಎಂ ಕೃಷ್ಣ ಸಾವಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಂತಾಪ

-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಬೆಂಗಳೂರನ್ನು ಸಿಂಗಾಪುರ ಮಾಡುವ ಕನಸು ಕಟ್ಟಿಕೊಟ್ಟಿದ್ದೇ ಎಸ್.ಎಂ.ಕೃಷ್ಣ. ಬೆಂಗಳೂರನ್ನು ಅಂತಾರಾಷ್ಟ್ರೀಯ ನಗರವನ್ನಾಗಿ ಮಾಡುವ ಕನಸು ಕಂಡ ಅವರು ಅದಕ್ಕೆ ಬೇಕಾದ ಅಡಿಪಾಯ ಹಾಕಿದರು. ಬೆಂಗಳೂರಿನ ಮೊದಲ ಅಡಿಪಾಯ ಹಾಕಿದ್ದು ಕೆಂಪೇಗೌಡರಾದರೆ, ನಂತರ ಬಹಳ ಪ್ರಮುಖ ತಿರುವು ನೀಡಿದ್ದು ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಎಂದರೆ ಅತಿಶಯೋಕ್ತಿಯಾಗಲಾರದು. ಅವರು ಬೆಂಗಳೂರನ್ನು ಸಿಂಗಾಪುರ ಮಾಡುವ ಕನಸನ್ನು ಮಾತ್ರ ಕಟ್ಟಿಕೊಡದೆ, ಅದಕ್ಕೆ ಬೇಕಾದ ಕೆಲಸಗಳನ್ನೂ ಮಾಡಿದ್ದರು. ಬೆಂಗಳೂರಿನಲ್ಲಿ ಮೂಲಸೌಕರ್ಯಗಳ ವೃದ್ಧಿಗೆ ಅವರು ಕೈಗೊಂಡ ಉಪಕ್ರಮಗಳು ಇಂದಿಗೂ ಸಾಕ್ಷಿಯಾಗಿವೆ. ಬೆಂಗಳೂರಿನಲ್ಲಿ ಸಾಕಷ್ಟು ಫ್ಲೈಓವರ್‌ಗಳ ನಿರ್ಮಾಣಕ್ಕೆ ಅವರು ಅಂದು ಚಾಲನೆ ನೀಡಿದ್ದರು.

ಬೆಂಗಳೂರು ಆಗ ಇನ್ನೂ ಸಾಫ್ಟ್‌ವೇರ್ ಸಿಟಿಯಾಗಿರಲಿಲ್ಲ. ಒಂದಷ್ಟು ಕಂಪನಿಗಳು ಆಗಷ್ಟೇ ಆರಂಭವಾಗಿದ್ದವು. ಸಾಫ್ಟ್‌ವೇರ್ ಬಗ್ಗೆ ಗಮನಹರಿಸಿದ, ಮಾತನಾಡಿದ ಮೊದಲ ಮುಖ್ಯಮಂತ್ರಿ ಕೃಷ್ಣ ಅವರು. ಸಾಫ್ಟ್‌ವೇರ್ ಕ್ಷೇತ್ರ ಮುಂದೊಂದು ದಿನ ಬೆಂಗಳೂರಿನಲ್ಲಿ ಹುಲುಸಾಗಿ ಬೆಳೆಯುತ್ತದೆ, ಮುಂದೆ ಬೆಂಗಳೂರು ದೇಶದ ಸಿಲಿಕಾನ್ ಸಿಟಿ ಆಗುವ ಅವಕಾಶಗಳಿವೆ ಎಂದು ಗುರುತಿಸಿದ್ದು, ಅದರ ಬಗ್ಗೆ ಮಾತನಾಡಿದವರು ಅವರು. ಆ ದೃಷ್ಟಿಯಿಂದ ಕೃಷ್ಣ ಅವರು ಬೇರೆಲ್ಲ ಮುಖ್ಯಮಂತ್ರಿಗಳಿಗಿಂತ ಭಿನ್ನರಾಗಿ ಕಾಣಿಸಿಕೊಳ್ಳುತ್ತಾರೆ.

ಕಾರ್ಪೋರೆಟ್‌ ಲುಕ್‌ನ ಮುಖ್ಯಮಂತ್ರಿ

ಸರ್ಕಾರಕ್ಕೆ ಒಂದು ಕಾರ್ಪೊರೆಟ್‌ ಲುಕ್ ನೀಡಿದ್ದು ಕೂಡ ಕೃಷ್ಣ ಅವರೇ. ಅವರು ಸದಾ ಸೂಟು-ಬೂಟು ಹಾಕಿಕೊಂಡೇ ಬರುತ್ತಿದ್ದರು. ಅವರ ಧಿರಿಸಿನ ಶಿಸ್ತಿನಲ್ಲಿಯೇ ಗಾಂಭೀರ್ಯವಿತ್ತು. ಪಕ್ಕಾ ಕಾರ್ಪೊರೇಟ್ ಲುಕ್ ಅವರದ್ದು. ರಾಜ್ಯದ ಜನ ಮುಖ್ಯಮಂತ್ರಿಯೊಬ್ಬರನ್ನು ಆ ರೀತಿಯ ಧಿರಿಸಿನಲ್ಲಿ ನೋಡಿದ್ದು ತುಂಬಾ ಕಡಿಮೆ. ಅದಕ್ಕೆ ತಕ್ಕ ಹಾಗೆ ಅವರು ಸಾಫ್ಟ್‌ವೇರ್, ಸಿಂಗಾಪುರ ಎಂದೆಲ್ಲ ಮಾತನಾಡುತ್ತಿದ್ದರು. ಅಷ್ಟೇ ಉತ್ತಮವಾಗಿ ಇಂಗ್ಲಿಷ್‌ನಲ್ಲಿ ಮಾತನಾಡಬಲ್ಲವರಾಗಿದ್ದರು. ಅವರ ಕನ್ನಡ ಮತ್ತು ಇಂಗ್ಲಿಷ್ ಎರಡೂ ಅತ್ಯುತ್ತಮವಾಗಿತ್ತು. ಹಾಗಾಗಿಯೇ ಅವರು ಕನ್ನಡಿಗರ ಜತೆ ಹಾಗೂ ವಿದೇಶಿ ಉದ್ದಿಮೆದಾರರು ಹಾಗೂ ಕಾರ್ಪೊರೆಟ್‌ ಸಿಇಒಗಳ ಜತೆ ಸುಲಭವಾಗಿ ವ್ಯವಹರಿಸಬಲ್ಲವರಾಗಿದ್ದರು. ಈ ಸಾಮರ್ಥ್ಯದಿಂದಾಗಿಯೇ ಅವರು ಬೆಂಗಳೂರಲ್ಲಿ ಐಟಿ ಪಾರ್ಕ್ ನಿರ್ಮಿಸಲು ಸಾಧ್ಯವಾಯಿತು. ಐಟಿ ಹಾಗೂ ಕೈಗಾರಿಕೆಯಲ್ಲಿ ರಾಜ್ಯ ಅವರ ಅವಧಿಯಲ್ಲಿ ಪ್ರಗತಿ ಸಾಧಿಸಿದ್ದರ ಪರಿಣಾಮವಾಗಿ ಉತ್ತರ ಕರ್ನಾಟಕದ ಲಕ್ಷಾಂತರ ಯುವಕರಿಗೆ ಬೆಂಗಳೂರು ಉದ್ಯೋಗದ ದಾರಿಯಾಯಿತು. ಅವರ ಉಜ್ವಲ ಭವಿಷ್ಯಕ್ಕೆ ನಾಂದಿಯಾಯಿತು‌. ಕ್ಲಿಷ್ಟಕರ ಪರಿಸ್ಥಿತಿ ನಿರ್ವಹಣೆಗೆ ಮಾದರಿ

ಕೃಷ್ಣ ಅವರು ಉತ್ತಮ ವಾಗ್ಮಿಯೂ ಹೌದು. ಅವರು ವಿಧಾನಸಭೆಯಲ್ಲಿ ಮಾತನಾಡಿದ ಭಾಷಣಗಳು ಭವಿಷ್ಯದ ರಾಜಕಾರಣಿಗಳಿಗೆ ದಾರಿದೀಪದಂತಿವೆ. ವಿಧಾನಸಭೆಯಲ್ಲಿ ಹೇಗೆ ಮಾತನಾಡಬೇಕು, ವಿರೋಧ ಪಕ್ಷಗಳ ಟೀಕೆಗೆ ಹೇಗೆ ಉತ್ತರಿಸಬೇಕು, ಟೀಕೆಗಳನ್ನು ಹೇಗೆ ಸ್ವೀಕರಿಸಬೇಕು ಎಂಬುದನ್ನು ಅವರು ಸ್ವತಃ ಉದಾಹರಣೆಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ರಾಜ್ಯದ ಮುಖ್ಯಮಂತ್ರಿಯೊಬ್ಬರು ಕ್ಲಿಷ್ಟಕರ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂಬುದಕ್ಕೆ ಕೃಷ್ಣ ಅವರೇ ನಿದರ್ಶನ.

ರಾಜ್ಯದ ಮುಖ್ಯಮಂತ್ರಿಯಾಗಿ ಎಸ್.ಎಂ.ಕೃಷ್ಣ ಅವರು ಎದುರಿಸಿದಷ್ಟು ಕ್ಲಿಷ್ಟಕರ ಮತ್ತು ತುಂಬಾ ವಿಶಿಷ್ಟವಾದ ಪರಿಸ್ಥಿತಿಯನ್ನು ಬಹುಶಃ ಇನ್ಯಾವ ಮುಖ್ಯಮಂತ್ರಿಯೂ ಎದುರಿಸಿಲ್ಲ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಹೇಗೆ ಒಳ್ಳೆಯ ಕೆಲಸಗಳು ನಡೆದವೋ, ಅಷ್ಟೇ ಪ್ರಮಾಣದಲ್ಲಿ ರಾಜ್ಯದ ಇತಿಹಾಸದ ಕರಾಳ ಘಟನೆಗಳೂ ದಾಖಲಾದವು. ಕನ್ನಡದ ವರನಟ ಡಾ.ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದು ರಾಜ್ಯದ ಇತಿಹಾಸದ ಅತ್ಯಂತ ಕರಾಳ ಘಟನೆ. ರಾಜ್ ಕುಮಾರ್ ಅವರು ಕನ್ನಡಿಗರ ಕಣ್ಮಣಿಯಾಗಿದ್ದರು. ಅಂತಹ ವ್ಯಕ್ತಿಯೊಬ್ಬರು ಅಪರಹಣಕ್ಕೊಳಗಾಗುವುದು ಯಾವುದೇ ಸರ್ಕಾರಕ್ಕೂ ಕೆಟ್ಟ ಹೆಸರು ತರುವ ಘಟನೆಯೇ. ಅದರ ಜತೆಗೆ ರಾಜ್ಯಾದ್ಯಂತ ಆಕ್ರೋಶ ಕೂಡ ಬಹಳ ಗಾಢವಾಗಿಯೇ ವ್ಯಕ್ತವಾಗಿತ್ತು. ರಾಜ್ಯಾದ್ಯಂತ ಆಕ್ರೋಶ ಇರುವ ಸಮಯದಲ್ಲಿ ರಾಜ್ ಕುಮಾರ್ ಅವರಂತಹ ಗಣ್ಯರು ಅಪಹರಣವಾದಾಗ ಎರಡೂ ಸ್ಥಿತಿಯನ್ನು ನಿಭಾಯಿಸುವುದು ಸರ್ಕಾರಕ್ಕೆ ಸವಾಲಿನ ಸಂಗತಿ. ಅಂತಹ ಕ್ಲಿಷ್ಟ ಸಮಸ್ಯೆಯನ್ನು ಕೂಡ ಕೃಷ್ಣ ಅವರು ಸಮಚಿತ್ತದಿಂದ ನಿಭಾಯಿಸಿದರು. ಅದರ ಜತೆಗೆ ರಾಜ್ಯದಲ್ಲಿ ಬರ ಪರಿಸ್ಥಿತಿ. ಅದರ ನಂತರ ಕಾವೇರಿ ಸಮಸ್ಯೆ. ಹೀಗೆ ಒಂದಾದ ಮೇಲೊಂದು ಸಮಸ್ಯೆಗಳನ್ನು ಕೃಷ್ಟ ಅವರು ಚಾಕಚಕ್ಯತೆಯಿಂದ ನಿಭಾಯಿಸಿದರು.

ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಒಂದು ಅವಧಿಗೆ ಮಾತ್ರ ಸೇವೆ ಸಲ್ಲಿಸಿದ್ದರು. ಅಂತಹ ಮುಖ್ಯಮಂತ್ರಿ ಇನ್ನೊಂದು ಅವಧಿಗೆ ಬೇಕಿತ್ತು ಎಂಬುದು ಹಲವರ ಅಭಿಲಾಷೆಯಾಗಿತ್ತು. ಆ ರೀತಿಯ ಆಡಳಿತ ನೀಡಿದ್ದು ಕೃಷ್ಣ ಅವರ ಆಡಳಿತ ಚಾಕಚಕ್ಯತೆಗೆ ಹಿಡಿದ ಕನ್ನಡಿ. ಆದರೆ ರಾಜಕಾರಣದಲ್ಲಿ ಪ್ರತಿ ಬಾರಿಯೂ ಮಾಡಿದ ಕೆಲಸಗಳು ಕೈಹಿಡಿಯುತ್ತವೆ ಎಂದು ಹೇಳಲಾಗದು. ಜನರು ಮತಗಳನ್ನು ಯಾವ ಆಧಾರದ ಮೇಲೆ ನಿರ್ಧರಿಸುತ್ತಾರೆ ಎಂಬುದನ್ನು ಹೇಳುವುದೂ ಕಷ್ಟ. ಇಷ್ಟೆಲ್ಲ ಸವಾಲು, ಸಮಸ್ಯೆಗಳ ನಡುವೆಯೂ ಇನ್ನೊಂದು ಅವಧಿಗೆ ಇವರೇ ಮುಖ್ಯಮಂತ್ರಿಯಾದರೆ ಒಳ್ಳೆಯದು ಎಂಬ ಭಾವನೆಯನ್ನು ಒಂದಷ್ಟು ಜನರಲ್ಲಿ ಮೂಡಿಸುವುದು ಕೂಡ ಅಷ್ಟು ಸುಲಭದ ಕೆಲಸವಲ್ಲ. ಬಹುಶಃ ಕೃಷ್ಣ ಅವರ ದೂರದೃಷ್ಟಿಯೇ ಅದಕ್ಕೆ ಕಾರಣ. ಅವರು ಇಂದಿನ ಬೆಂಗಳೂರನ್ನು ಅಂದೇ ಕಂಡಿದ್ದರು. ಮುಂದೊಂದು ದಿನ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತದೆ ಎಂಬುದನ್ನು ಅವರ ದೂರದೃಷ್ಟಿ ಅಂದೇ ಗುರುತಿಸಿತ್ತು. ಹಾಗಾಗಿಯೇ ಅವರು ಬೆಂಗಳೂರನ್ನು ಸಿಂಗಾಪುರ ಮಾಡುವ ಮಾತನಾಡಿದ್ದರು. ಮಾತನಾಡಿದ ಹಾಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿ ಮಾಡಿದ್ದರು.

ಅವರ ದೂರದೃಷ್ಟಿ, ಸಮಚಿತ್ತ, ಬುದ್ಧಿವಂತಿಕೆ, ಕ್ಲಿಷ್ಟಕರ ಪರಿಸ್ಥಿತಿಯನ್ನು ನಿಭಾಯಿಸುವ ಅವರ ಸಾಮರ್ಥ್ಯವನ್ನು ಪರಿಗಣಿಸಿಯೇ ಮುಂದೆ ಅವರನ್ನು ಕೇಂದ್ರ ಸರ್ಕಾರದಲ್ಲಿ ವಿದೇಶಾಂಗ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಮುಂದೆ ಕಾಂಗ್ರೆಸ್ ಅಂತಹ ರಾಜಕಾರಣಿಯನ್ನು ಕಡೆಗಣಿಸಿತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರು ಬಿಜೆಪಿಯೊಂದಿಗೆ ಕೈಜೋಡಿಸಿದರು. ಪಕ್ಷಕ್ಕೆ ರಾಜ್ಯದಲ್ಲಿ ಬಲತುಂಬುವ ಕೆಲಸದಲ್ಲಿ ಅವರು ಕೂಡ ಶ್ರಮಿಸಿದ್ದಾರೆ. ವಯಸ್ಸಿನ ಕಾರಣಕ್ಕೆ ತುಂಬಾ ಸಕ್ರಿಯರಾಗಿ ತೊಡಗದೆ ಇದ್ದರೂ ಪಕ್ಷವನ್ನು ಬೆಳೆಸುವಲ್ಲಿ ಸಾಧ್ಯವಿರುವ ಎಲ್ಲ ಕೊಡುಗೆಯನ್ನೂ ಅವರು ನೀಡಿದ್ದಾರೆ.

ಅಂತಹ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಮ್ಮನ್ನು ಅಗಲಿರುವುದು, ಮಾರ್ಗದರ್ಶಕರೊಬ್ಬರನ್ನು ನಾವು ಕಳೆದುಕೊಂಡಂತಾಗಿದೆ.